ನನ್ನ ಪುಟಗಳು

26 ನವೆಂಬರ್ 2013

ಅಜ್ಜಯ್ಯನ ಅಭ್ಯಂಜನ (ಗದ್ಯ-7)


ಕವಿ ಪರಿಚಯ:
ರಾಷ್ಟ್ರಕವಿ ಕುವೆಂಪು
ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮ “ಕುವೆಂಪು”.
ಜನನ: ಕುವೆಂಪುರವರು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. 

ಸಾಹಿತ್ಯ ಸೇವೆ:-
         ಎಸ್.ಎಸ್.ಎಲ್.ಸಿ ಓದುವಾಗಲೇ ಕುವೆಂಪುರವರು ಬರೆದಿದ್ದ “ಬಿಗಿನರ್ಸ್ ನ್ಯೂಸ್” ಎಂಬ ಇಂಗ್ಲೀಷ್ ಕವನಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಶ್ ಕವಿ ಜೆ.ಎಚ್.ಕಸಿನ್ಸ್ ರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪು ರವರು ಬರೆದ ಮೊದಲ ಕನ್ನಡ ಕವನ ಸಂಕಲನ “ಅಮಲನಕಥೆ”. ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ. ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ. ಜತೆಗೆ ನಾಡು ಕಂಡ ಧೀಮಂತರಾದ ಶ್ರೀ ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿ ಯವರ ಒಡನಾಟ, ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು. ೧೯೨೫ ರಲ್ಲಿ ಪ್ರಕಟವಾದ ಕುವೆಂಪುರವರ “ಬೊಮ್ಮನಹಳ್ಳಿ ಕಿಂದರಿಜೋಗಿ” ನಾಡಿನಾದ್ಯಂತ ಮಕ್ಕಳ ಬಾಯಲ್ಲಿ ನಲಿದಾಡಿತು. ಸೆಂಟ್ರಲ್ ಕಾಲೇಜು ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷ ಪದವಿಯೂ ಇವರನ್ನು ಅರಸಿ ಬಂತು.
       ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ “ಕಾನೂರು ಸುಬ್ಬಮ್ಮ ಹೆಗ್ಗಡತಿ” ಮತ್ತು “ಮಲೆಗಳಲ್ಲಿ ಮದುಮಗಳು” ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠ ಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೂಟ್ಟ ಹಿರಿಮೆಯನ್ನು ಹೊಂದಿದ ಇವರ ” ಶ್ರೀ ರಾಮಾಯಣದರ್ಶನಂ” ಮಹಾಕಾವ್ಯ ಸಂಸ್ಕೃತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ. ಇವರು “ಬೆರಳ್ಗೆ ಕೊರಳ್”, ”ಶೂದ್ರ ತಪಸ್ವಿ”, ”ಸ್ಮಶಾನ ಕುರುಕ್ಷೇತ್ರಂ”, “ರಕ್ತಾಕ್ಷಿ”, ”ಜಲಗಾರ” ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ” ಕೊಳಲು”, ”ಅಗ್ನಿಹಂಸ”, ”ಅನಿಕೇತನ”, ”ಅನುತ್ತರಾ”, “ಇಕ್ಷು ಗಂಗೋತ್ರಿ”, “ಕಥನ ಕವನಗಳು”, “ಕಲಾಸುಂದರಿ”, “ಕಿಂಕಿಣಿ”, “ಕೃತ್ತಿಕೆ”, “ಜೇನಾಗುವ”, “ನವಿಲು”, “ಪಕ್ಷಿಕಾಶಿ”, “ಚಿತ್ರಾಂಗದಾ” ಮೊದಲಾದ ಕವನಸಂಕಲನಗಳು, “ರಾಮಕೃಷ್ಣ ಪರಮಹಂಸ”, “ಸ್ವಾಮಿವಿವೇಕಾನಂದ” ಜೀವನಚರಿತ್ರೆಗಳನ್ನೂ ಇವರು ಬರೆದಿದ್ದಾರೆ. “ನೆನಪಿನ ದೋಣಿಯಲ್ಲಿ” ಕುವೆಂಪುರವರ ಆತ್ಮಕಥೆ.


ಪ್ರಶಸ್ತಿ, ಪುರಸ್ಕಾರ, ಬಿರುದು:
1955 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1958 ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
1958 ರಲ್ಲಿ ಪದ್ಮಭೂಷಣ
1964ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ
1968 ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ
1987 ರಲ್ಲಿ ಪಂಪ ಪ್ರಶಸ್ತಿ
1989 ರಲ್ಲಿ ಪದ್ಮವಿಭೂಷಣ
1992 ಕರ್ನಾಟಕ ರತ್ನ ಪ್ರಶಸ್ತಿ
       ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು ‘ಜೈ ಭಾರತ ಜನನಿಯ ತನುಜಾತೆ…’ ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. “ಅಭಿನವ ವಾಲ್ಮೀಕಿ” ಎಂದೇ ಜನಮಾನಸದಲ್ಲಿ ಪ್ರಸಿದ್ಧರಾದ ಕುವೆಂಪುರವರು 1994 ನವೆಂಬರ್ 11ರಂದು ಮೈಸೂರಿನ ತಮ್ಮ ನಿವಾಸ ಉದಯರವಿಯಲ್ಲಿ ನಿಧನರಾದರು.
 ಪ್ರಸ್ತುತ 'ಅಜ್ಜಯ್ಯನ ಅಭ್ಯಂಜನ ' ಗದ್ಯವನ್ನು ಕುವೆಂಪು ಅವರ ಮಲೆನಾಡಿನ ಚಿತ್ರಗಳು ಕೃತಿಯಿಂದ ಆರಿಸಿಕೊಳ್ಳಲಾಗಿದೆ.











https://sampada.net/files/styles/large/public/durgasthaman.jpg?itok=iwvZnHr1


ಮಲೆನಾಡಿನ ಚಿತ್ರಗಳು ಕೃತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 



*********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ