ನನ್ನ ಪುಟಗಳು

27 ನವೆಂಬರ್ 2013

ಸಿರಿಯನಿನ್ನೇನ ಬಣ್ಣಿಪೆನು (ಪದ್ಯ-4)


 ರತ್ನಾಕರವರ್ಣಿ ಪರಿಚಯ
ರತ್ನಾಕರ ವರ್ಣಿಯ ಕಾಲ್ಪನಿಕ ಚಿತ್ರ (ಕೃಪೆ: www.icarelive.com)
  • ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿ ಕಾಲ ಸುಮಾರು ಕ್ರಿ.. ೧೫೫೭. (೯ನೇ ತರಗತಿ ಪಠ್ಯಪುಸ್ತಕದಲ್ಲಿ ಈತನ ಕಾಲ ಸು.ಕ್ರಿ..೧೫೬೦ ಎಂದಿದೆ)
  • ಈತನ ತಂದೆಯ ಹೆಸರು ದೇವರಾಜ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ
  • ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದ ಕವಿ.
  • ರತ್ನಾಕರವರ್ಣಿ ರಚಿಸಿದ ಕೃತಿಗಳು:
  • ಭರತೇಶ ವೈಭವ - ರತ್ನಾಕರವರ್ಣಿಯ ಮೇರು ಕೃತಿ.
  • ತ್ರಿಲೋಕ ಶತಕ
  • ಅಪರಾಜಿತೇಶ್ವರ ಶತಕ
  • ರತ್ನಾಕರಾಧೀಶ್ವರ ಶತಕ
  • ಸೋಮೇಶ್ವರ ಶತಕ (ಕೆಲ ವಿದ್ವಾಂಸರ ಪ್ರಕಾರ ರತ್ನಾಕರವರ್ಣಿಯು ಕೃತಿಯನ್ನು ತನ್ನ ಬದುಕಿನ ಸಂದಿಗ್ಧ ಘಟ್ಟವೊಂದರಲ್ಲಿ ಮತಾಂತರಗೊಂಡಾಗ ರಚಿಸಿದ್ದಾನೆ)
  • ಅಣ್ಣನ ಪದಗಳು

ಘಟನೆ
ಕಾಲ
ಜನನ
೧೫೩೨
ತ್ರಿಲೋಕಶತಕದ ರಚನೆ
೧೫೫೭
ಭರತೇಶವೈಭವದ ರಚನೆ
೧೫೬೭
ವೀರಶೈವನಾದುದು
೧೫೭೨
ಮತ್ತೆ ಜೈನನಾದುದು
೧೫೭೫
ರತ್ನಾಕರಶತಕದ ರಚನೆ
೧೫೭೭
ಅಪರಾಜಿತಶತಕದ ರಚನೆ
೧೫೮೨
ಅಧ್ಯಾತ್ಮಗೀತದ ರಚನೆ
೧೫೮೭
ಮರಣ
೧೬೦೦ರ ಮೇಲೆ
              ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಇದು ರತ್ನಾಕರವರ್ಣಿಯ ಮೇರು ಕೃತಿ. ಹಳೆಗನ್ನಡದ ಕವಿಗಳು ಛಂದಸ್ಸುಗಳಲ್ಲಿ ತೋಯ್ದ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ.
(ಮಾಹಿತಿ ಕೃಪೆ: ವಿಕಿಪೀಡಿಯಾ)
 ************************

ಸಿರಿಯನಿನ್ನೇನ ಬಣ್ಣಿಪೆನು (ಸಾರಾಂಶ ಸಹಿತ)


ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ
ನಿನ್ನನಾದಿಯ ಮಾಡಿಕೊಂಡು
ಕನ್ನಡದೊಳಗೊಂದು ಕಥೆಯ ಪೇಳುವೆನದು
ನಿನ್ನಾಜ್ಞೆ ಕಂಡ ನನ್ನೊಡೆಯಾ || ||
       ಗುರುವೇ ವಿಜ್ಞಾಪನೆ(ನಮಸ್ಕಾರ). ಧ್ಯಾನಮಾಡುವುದಕ್ಕೆ ನನಗೆ ಬೇಸರವಾದಾಗ ನಾನು ನಿನ್ನನ್ನು ಮೊದಲು ಮಾಡಿಕೊಂಡು ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ. ನನ್ನೊಡೆಯನೇ ಅದು ನಿನ್ನಾಜ್ಞೆ.

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯೆನೆ ತೆಲುಗ
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು
ಮೈಯುಬ್ಬಿ ಕೇಳಬೇಕಣ್ಣ   || ||
         ನಾನು ಬರೆಯುವ ಕಥೆಯನ್ನುಆಹಾ ಬಹಳ ಚೆನ್ನಾಗಿದೆಎಂದು ಕನ್ನಡಿಗರು, ’ರಯ್ಯಾ ಮಂಚಿದಿ’(ಬಹಳ ಚೆನ್ನಾಗಿದೆ) ಎಂದು ತೆಲುಗರು, ’ಎಂಚ ಪೊರ್ಲಾಂಡ್’(ಬಹಳ ಚೆನ್ನಾಗಿದೆ) ಎಂದು ತುಳುವರು ಅತ್ಯಾಸಕ್ತಿಯಿಂದ ಕೇಳಬೇಕು. ( ರೀತಿಯಲ್ಲಿ ಕಾವ್ಯ ರಚಿಸುತ್ತೇನೆ)

ಭರತಭೂತಳಕೆ ಸಿಂಗಾರವಾದಯೋಧ್ಯಾ
ಪುರದೊಳು ಮೂಲೋಕ ಪೊಗಳೆ
ಭರತಚಕ್ರೇಶ್ವರ ಸುಖಬಾಳುತಿರ್ದನಾ
ಸಿರಿಯನಿನ್ನೇನ ಬಣ್ಣಿಪೆನು || ||
       ಭರತ ಭೂಮಿಗೆ ಅಲಂಕರಿಸಿದಂತಿರುವ ಅಯೋಧ್ಯೆ ಪಟ್ಟಣದಲ್ಲಿ ಭರತ ಚಕ್ರವರ್ತಿಯು ಮೂರು ಲೋಕಗಳು ಹೊಗಳುವಂತೆ ಸುಖವಾಗಿ ಬಾಳುತ್ತಿದ್ದ ಬಗೆಯನ್ನು ಇನ್ನೇನು ವರ್ಣಿಸಲಿ.

ಪುರುಪರಮೇಶನ ಹಿರಿಯ ಕುಮಾರನು
ನರಲೋಕಕೊಬ್ಬನೆ ರಾಯ
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ
ಭರತ ಚಕ್ರಿಯ ಹೇಳಲಳವೇ       || ||
       ಪುರುಪರಮೇಶನೆನಿಸಿದ ಆದಿ ತೀರ್ಥಂಕರ ವೃಷಭನಾಥನ ಇಬ್ಬರು ಮಕ್ಕಳಲ್ಲಿ ಹಿರಿಯವನೇ ಭರತ ಚಕ್ರವರ್ತಿ.  ಅವನು ಇಡೀ ಭೂಲೋಕಕ್ಕೆ ಒಬ್ಬನೇ ರಾಜ ಎಂಬಂತಿದ್ದನು. ಅವನು

  ವಿಭುವೊಂದಿನದುದಯದೊಳೆದ್ದು
ದೇವತಾರ್ಚನೆಯನು ಮಾಡಿ
ಚಾವಡಿಗೈದಿ ತಾನೋಲಗವಾದೊಂದು
ಶ್ರೀವಿಲಾಸವನೇನನೆಂಬೆ  || ||
        ಭರತ ಚಕ್ರವರ್ತಿಯು ಒಂದು ದಿನ ಸೂರ್ಯೋದಯದ ಸಮಯದಲ್ಲಿ ಎದ್ದು ದೇವರ ಪೂಜೆಯನ್ನು ಮಾಡಿ, ಆಸ್ಥಾನಕ್ಕೆ ಬಂದು ಒಡ್ಡೋಲಗ ನಡೆಸಿದ ಒಂದು ವೈಭವದ ಬಗ್ಗೆ ಏನೆಂದು ಹೇಳಲಿ.

ನವರತ್ನ ಹೇಮನಿರ್ಮಿತವೆನಿಪಾಸ್ಥಾನ
ಭವನದೊಳಾ ರಾಜರತ್ನ
ಛವಿವಡೆದೆಸೆದನು ರತ್ನಪುಷ್ಪಕದೊಳು
ದಿವಿಜೇಂದ್ರನೊಪ್ಪುವಂದದೊಳು    || ||
       ಭರತಚಕ್ರವರ್ತಿಯ ಆಸ್ಥಾನ ಭವನವು ನವರತ್ನ ಹಾಗೂ ಚಿನ್ನದಿಂದ ನಿರ್ಮಿತವಾಗಿತ್ತು. ಸ್ವರ್ಗ ಲೋಕದ ದೇವೇಂದ್ರನು ರತ್ನಪುಷ್ಪಕ ಸಿಂಹಾಸನದಲ್ಲಿ ಶೋಭಿಸುವಂತೆ ಆಸ್ಥಾನದಲ್ಲಿ ಭರತ ಚಕ್ರವರ್ತಿಯು ಕಾಂತಿಯಿಂದ ಕಂಗೊಳಿಸಿದನು.

ತರತರವಿಡಿದು ಢಾಳಿಸುತಿಹ ದೀರ್ಘ ಚಾ
ಮರಗಳ ಸಾಲೊಳೆಸೆದನು
ಹರಿವ ಬೆಳ್ಮುಗಿಲೊಳು ತೋರಿ ಮರಸುವ ಚಂ
ದಿರನೋ ಭಾಸ್ಕರನೋಯೆಂಬಂತೆ || ||
        ವಿಧವಿಧವಾಗಿ ಪ್ರಕಾಶಿಸುತ್ತಿರುವ ಉದ್ದವಾದ ಚಾಮರಗಳ ಸಾಲಿನಲ್ಲಿ ಭರತ ಚಕ್ರವರ್ತಿಯು ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸೂರ್ಯನೋ ಎಂಬಂತೆ ಸಭಿಕರಿಗೆ ಕಾಣುತ್ತಿದ್ದನು.

ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ
ಲಾಂಬುಜ ನೋಳ್ಪಂತೆ ಶಶಿಯಾ
ತುಂಬಿದ ಸಭೆಯೆಲ್ಲ ನೃಪನ ನೋಡುವ ಮಿಕ್ಕ
ಹಂಬಲ ಮರೆದುದಲ್ಲಲ್ಲಿ    || ||
          ಆಸ್ಥಾನದಲ್ಲಿ ನೆರೆದಿದ್ದ ಸಭಿಕರೆಲ್ಲರುತಾವರೆಯು ಸೂರ್ಯನನ್ನು ನೋಡುವಂತೆ, ನೀಲಿ ತಾವರೆ(ನೈದಿಲೆ)ಯು ಚಂದ್ರನನ್ನು ನೋಡುವಂತೆ ಭರತ ಚಕ್ರವರ್ತಿಯನ್ನೇ ಕಾತರದಿಂದ ನೋಡುತ್ತಿದ್ದರು.
 
**************************



ರತ್ನಾಕರವರ್ಣಿ ಕೃತ ಭರತೇಶ ವೈಭವ : ಆಸ್ಥಾನ ಸಂಧಿ -

ಪರಮ ಪರಂಜ್ಯೋತಿ ಕೋಟಿ ಚಂದ್ರಾದಿತ್ಯ | ಕಿರಣ ಸುಜ್ಞಾನ ಪ್ರಕಾಶ |
ಸುರರ ಮಕುಟಮಣಿ ರಂಜಿತ ಚರಣಾಬ್ಜ | ಶರಣಾಗು ಪ್ರಥಮ ಜಿನೇಶ || ||

ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ | ನಿನ್ನನಾದಿಯ ಮಾಡಿಕೊಂಡು |
ಕನ್ನಡದೊಳಗೊಂದು ಕಥೆಯ ಪೇಳುವೆನದು | ನಿನ್ನಾಜ್ಞೆ ಕಂಡ ನನ್ನೊಡೆಯಾ || ||

ಕಬ್ಬಿಗರೋಗುಗಬ್ಬನ ಹಾಡುಗಬ್ಬವ | ಕಬ್ಬದೊಳೊರೆವರಿವೆರಡು |
ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ | ಕಬ್ಬೆ ಹೇಳೆಲೆ ಸರಸ್ವತಿಯೆ || ||

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು | ರೆಯ್ಯಾ ಮಂಚಿದಿಯೆನೆ ತೆಲುಗಾ |
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು | ಮೈಯ್ಯುಬ್ಬಿ ಕೇಳಬೇಕಣ್ಣಾ || ||

ರಳ ಕುಳ ಶಿಥಿಲ ಸಮಾಸ ಮುಂತಾದವ | ರೊಳಗಿಲ್ಲಿ ಕೆಲವುಳ್ಳರುಂಟು |
ಕೆಲವಿಲ್ಲಾದರುವಿಲ್ಲವೇಕೆಂದರವರ ಕೋ | ಟಲೆಯೇಕೆ ಹಾಡುಗಬ್ಬದೊಳು || ||
 
ಸಕಲ ಲಕ್ಷಣವು ವಸ್ತುಕಕೆ, ವರ್ಣಕಕಿಷ್ಟು | ವಿಕಳವಾದರು ದೋಷವಿಲ್ಲ |
ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪು | ಸ್ತಕದ ಬದನೆಕಾಯಹುದು || ||

ಚಂದಿರನೊಳಗೆ ಕಪ್ಪುಂಟು ಬೆಳ್ದಿಂಗಳು | ಕಂದಿ ಕುಂದಿಹುದೋ ನಿರ್ಮಲವೊ |
ಸಂಧಿಸಿ ಶಬ್ದದೋಷಗಳೊಮ್ಮೆ ಸುಕಥೆಗೆ | ಬಂದರೆ ಧರ್ಮ ಮಾಸುವುದೇ || ||

ಗಣನೆಯಿಲ್ಲದ ರಾಜ್ಯಸುಖದೊಳೋಲಾಡಿ ಧಾ | ರಿಣಿ ಮೆಚ್ಚಿ ಜಿನಯೋಗಿಯಾಗಿ |
ಕ್ಷಣಕೆ ಕರ್ಮವ ಸುಟ್ಟು ಜಿನನಾದ ಭೂಭುಜಾ | ಗ್ರಣಿಯ ವೈಭವವ ಲಾಲಿಸಿರೊ || ||

ಆಗಮವಧ್ಯಾತ್ಮವಳವಟ್ಟು ಶೃಂಗಾರ | ತ್ಯಾಗ ಭೋಗದ ಮೋಡಿ ಮೆರೆಯೆ |
ಭೋಗಿ ಯೋಗಿಗಳೆದೆ ಜುಮ್ಮು ಜುಮ್ಮೆನೆ ನೇಮ | ದಾಗಿ ಸೊಲ್ಲಿಸುವೆನಾಲಿಸಿರೊ || ||

ಪ್ರಚುರದಿ ಪದಿನೆಂಟು ರಚನೆಯ ವಾಕ್ಯಕೆ | ರಚಿಸುವರಾನಂತು ಪೇಳೆ |
ಉಚಿತಕೆ ತಕ್ಕಷ್ಟು ಪೇಳ್ವೆನಧ್ಯಾತ್ಮವೆ | ನಿಚಿತ ಪ್ರಯೋಜನವೆನಗೆ || ೧೦ ||

ಭರತಭೂತಳಕೆ ಸಿಂಗಾರವಾದಯೋಧ್ಯಾ | ಪುರದೊಳು ಮೂಲೋಕ ಪೊಗಳೆ |
ಭರತ ಚಕ್ರೇಶ್ವರ ಸುಖಬಾಳುತಿರ್ದನಾ | ಸಿರಿಯನಿನ್ನೇನ ಬಣ್ಣಿಪೆನು || ೧೧ ||

ಪುರು ಪರಮೇಶನ ಹಿರಿಯ ಕುಮಾರನು | ನರಲೋಕಕೊಬ್ಬನೆ ರಾಯ |
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ | ಭರತ ಚಕ್ರಿಯ ಹೇಳಲಳವೇ || ೧೨ ||

ಹದಿನಾರನೆಯ ಮನು ಪ್ರಥಮಚಕ್ರೇಶ್ವರ | ಸುದತಿ ಜನಕೆ ರಾಜಮದನ |
ಚದುರರ ತಲೆವಣಿ ತದ್ಭವಮೋಕ್ಷ ಸಂ | ಪದನ ಬಣ್ಣಿಸಲೆನ್ನ ಹವಣೆ || ೧೩ ||

ಧರೆಯೊಳೆಲ್ಲವ ಸುಟ್ಟರುಂಟಲ್ಲಿ ಭಸ್ಮ | ರ್ಪುರವ ಸುಟ್ಟರೆ ಭಸ್ಮವುಂಟೆ |
ನರತತಿಗಾಹಾರ ನಿಹಾರವುಂಟೆಮ್ಮ | ಭರತೇಶಗಿಲ್ಲ ನಿಹಾರಾ || ೧೪ ||

ಕೋಮಲಾಂಗನು ಹೇಮವರ್ಣನು ಜಗವೆಲ್ಲ | ಕಾಮಿಸತಕ್ಕ ಚೆನ್ನಿಗನು |
ಆಮೋದವುಕ್ಕುವ ಜವ್ವನಿಗನು ಸರ್ವ | ಭೂಮೀಶರೊಡೆಯನಾ ಚಕ್ರಿ || ೧೫ ||

ವಿಭುವೊಂದಿನದುದಯದೊಳೆದ್ದು | ದೇವತಾರ್ಚನೆಯನು ಮಾಡಿ |
ಚಾವಡಿಗೈದಿ ತಾನೋಲಗವಾದೊಂದು | ಶ್ರೀ ವಿಲಾಸವನೇನನೆಂಬೆ || ೧೬ ||

ನವರತ್ನ ಹೇಮನಿರ್ಮಿತವೆನಿಪಾಸ್ಥಾನ | ಭವನದೊಳಾ ರಾಜರತ್ನ |
ಛವಿವಡೆದೆಸೆದನು ರತ್ನಪುಷ್ಪಕದೊಳು | ದಿವಿಜೇಂದ್ರನೊಪ್ಪುವಂದದೊಳು || ೧೭ ||

ತನುಕಾಂತಿ ತುಂಬಿದ ಸಭೆಯೆಂಬ ಕೊಳದಲ್ಲಿ | ಕನಕಸಿಂಹಾಸನವೆಂಬ |
ಕನಕಾಂಬುಜದ ಮೇಲಾ ರಾಜ ನಿ | ದ್ದನು ರಾಜ ಹಂಸನೆಂಬಂತೆ || ೧೮ ||

ಉದಯಗಿರಿಯ ಮೇಲೆ ಮೆರೆವ ಭಾನುವಿಗೆ | ತ್ತಿದಿರಾದ ಪ್ರತಿಸೂರ್ಯನಂತೆ |
ಪದುಳದುತ್ತುಂಗ ಸಿಂಹಾಸನವೇರಿ ದೇ | ಹದ ಕಾಂತಿ ಮೆರೆಯೆ ಮೆರೆದನು || ೧೯ ||

ಆವ ಬಿಂಕವೊ ಎಡಗಾಲ ಗದ್ದುಗೆಯ ಮೇ | ಲೋವಿ ಮಡಿದು ಮತ್ತೆ ಕೆಳಗೆ |
ಹಾವುಗೆಯೊಳು ಪೆಂಡೆಯದ ಬಲಗಾಲೂರಿ | ಠೀವಿಯೊಳೆಸೆದನಾ ರಾಯ || ೨೦ ||

ಬಲಗೈಯೊಳಾಂತ ಹೊನ್ನೊರೆಯ ಕಠಾರಿಯ | ಕೆಲಕೂರಿ ಮತ್ತೆಡಗೈಯಾ |
ಮಲಗಿನ ಮೇಲೂರಿ ಬೀರಸಿರಿಯನಾಳ್ದ | ಕಲಿಗಳ ದೇವನೊಪ್ಪಿದನು || ೨೧ ||

ನರುಸುಯ್ಯಗಾಳಿಗೆ ತೇಲ್ವ ದುಕೂಲದ | ಸೆರಗು ಸೇರುವೆ ದೊರೆ ಹೊದೆದು |
ತರಪಿನೆದೆಯ ಹೊನ್ನ ಜನ್ನಿವಾರದ ರೇಖೆ | ಮೆರೆಯೆ ರಾಜೇಂದ್ರ ಮೆರೆದನು || ೨೨ ||

ಮಿರುಪ ಕಿರೀಟವುಂಟದನಂದು ಧರಿಸಿತಿ | ಲ್ಲುರೆ ಮನದೊಂದು ಲೀಲೆಯೊಳು |
ತುರುಬು ಚುಂಗೆಸೆಯೆ ಚಿಮ್ಮುರಿಸುತ್ತಿ ಸೊಬಗನೆ | ಕರೆವುತಿದ್ದನು ನೋಡುವರಿಗೆ || ೨೩ ||

ಜೋಕೆವಿಡಿದು ನೀಡುವೆಳೆಯ ಘಳಿಗೆಯ | ರಾಕಿನೊಳಗೆ ಕೈಕೊಳುತ |
ಏಕೆ ನುಡಿಯನೊ ಇನ್ನೊಮ್ಮೆಯೆಂಬಂತೊಂದು | ತೂಕದೊಳೆಸೆದನಾ ರಾಯಾ || ೨೪ ||

ಉಬ್ಬಿ ಬೆಳೆದು ಬಾಗಿತಿಲ್ಲ ರೇಖೆಗೆ ಬಂದು | ಹುಬ್ಬಿನಂತೆಸೆವೆಳೆ ಮೀಸೆ |
ಹುಬ್ಬು ಮೀಸೆಯ ನೋಡಿ ನಲಿವ ಬವರಿಕಣ್ಣ | ಹಬ್ಬವ ಮಾಳ್ಪನೆಲ್ಲರಿಗೆ || ೨೫ ||

ಕುಂಡಲಗಳ ಕಾಂತಿ, ಕಂಗಳ ಪ್ರಭೆ, ಗಂಡ | ಮಂಡಲದೊಳಗಾಡಲವನಾ |
ಮಂಡೆಯೊಲೆದರೆ ಹೆಂಗಳಿಗೆ ಮನ್ಮಥನದೊ | ಖಂಡೆಯವಲುಗಿದಂತಿಹುದು || ೨೬ ||

ಪದಕ ಕಡಗ ಕಂಠಮಾಲೆಯ ನವರತ್ನ | ದುದಿತಾಂಶು ದೇಹಕಾಂತಿಯೊಳು |
ಪುದಿದು ಪೊಳೆಯೆ ಕಣ್ಗೆ ತೋರಿದನಿಂದ್ರ ಚಾ | ಪದೊಳು ಮಾಡಿದ ನೃಪನಂತೆ || ೨೭ ||

ಶಾಲಿಯ ತೆರೆಯ ತಟ್ಟುಚ್ಚಿ ದೀಪದ ಕಾಂತಿ | ಢಾಳಿಸುವಂತೆ ಲೋಕದೊಳು |
ಲಲಿತಾಂಗನ ತನುಕಾಂತೆ ಪೊದೆದ ದು | ಕೂಲದ ಹೊರಗೆ ರಂಜಿಸಿತು || ೨೮ ||

ಬಳಸಿನ ನುಡಿಗಳೇನೋಲಗದೆಳೆವೆಂಗ | ಳೊಲಿದುಟ್ಟ ಬಿಳಿಯ ಶೀರೆಗಳೊ |
ಚೆಲುವನ ತನುಕಾಂತಿ ಸೋಂಕಿದ ರಂಗು ಮಾ | ದಲವಣ್ನವೆನಲೆಸೆದಿಹುದು || ೨೯ ||

ಹೆಂಗಳ ರೂಪು ಗಂಡರಿಗೆ ಗಂಡರ ರೂಪು | ಹೆಂಗಳ ಸೋಲಿಪುದೆಂಬ |
ಪಾಂಗಲ್ಲವವನ ಚೆಲ್ವಿಕೆ ಗಂಡು ಪೆಣ್ಗಳ | ಕಂಗಳ ಸೆರೆವಿಡಿದಿಹುದು || ೩೦ ||

ತರತರವಿಡಿದು ಢಾಳಿಸುತಿಹ ದೀರ್ಘ ಚಾ | ಮರಗಳ ಸಾಲೊಳೆಸೆದನು |
ಹರಿವ ಬೆಳ್ಮುಗಿಲೊಳು ತೋರಿ ಮರಸುವ ಚಂ | ದಿರನೋ ಭಾಸ್ಕರನೋಯೆಂಬಂತೆ || ೩೧ ||

ಬಲದೊಳು ಭೂಭುಜರೆಡದಲ್ಲಿ ಗಣಿಕೆಯ | ರೊಲುಮೆಯ ಕವಿಗಳು ಮುಂದೆ |
ನಿಲೆ ಹಿಂದೆ ಹಿತವರು ಬಳಸಿದೆಕ್ಕಡಿಗರ | ಬಲು ಬಜಾವಣೆಯೊಳೊಪ್ಪಿದನು || ೩೨ ||

ವಾರನಾರಿಯರು ತಾವಾರನಾರಿಯರೊ ಶೃಂ | ಗಾರಕೆ ಸೋತು ಭೂವರನಾ |
ಹಾರುತ್ತಿದ್ದರು ಸುರಪಶುವ ಗೋದಾನಕ್ಕೆ | ಹಾರುವ ಹಾರುವನಂತೆ || ೩೩ ||

ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ | ಲಾಂಬುಜ ನೋಳ್ಪಂತೆ ಶಶಿಯಾ |
ತುಂಬಿದ ಸಭೆಯೆಲ್ಲ ನೃಪನ ನೋಡುತ ಮಿಕ್ಕ | ಹಂಬಲ ಮೆರೆದುದಲ್ಲಲ್ಲಿ || ೩೪ ||

ರೋಮಾಂಚನಸಿದ್ಧ ಜುಂಜುಂಮಾಲಪ, ಗಾ | ನಾಮೋದ ಚುಂಚುಮಾಲಾದ್ಯ |
ಶ್ರೀಮಂತ್ರಗಾಂಧಾರ ರಾಗವರ್ತಕರೆಂಬ | ರಾ ಮಹೀಪತಿಯ ಗಾಯಕರು || ೩೫ ||

ಬಳ್ಳಬಾಯ್ದೆರೆಯದೆ ಭ್ರಾಂತುಗೊಂಡಂತೆ ಮೈ | ಯೆಲ್ಲ ತೂಗಾಡದೊಂದಿನಿಸು |
ಅಲ್ಲಾಟವುಂಟೋಜೆವಿಡಿದು ಬಾಯ್ದೆರೆಯುಂಟು | ಸಲ್ಲಲಿತದೊಳು ಹಾಡಿದರು || ೩೬ ||

ಜೋಡು ಜೋಡಾಗಿ ತಾವರೆಯಿದಿರೊಳು ಸ್ವರ | ಮಾಡುವ ತುಂಬಿಗಳಂತೆ |
ನೋಡುತ ಭರತರಾಜನ ಮುಖಪದ್ಮವ | ಮಾಡಿದರಾಳಾಪಗಳನು || ೩೭ ||

 ಭರತರಾಜನ ಮುಖಚಂದ್ರನ ಕಂಡ ಜಾ | ಣರಿಗೆ ಮಹಾಳಾಪವುಕ್ಕಿ |
ಬರುತಿದ್ದುವಿಂದುವ ಕಂಡ ಸಮುದ್ರದ | ಭರತದಂತೇನ ಬಣ್ಣಿಪೆನು || ೩೮ ||

ವೀಣೆಯ ದನಿಯಾವುದದರೊಳು ಪಾಡುವ | ಗಾನದ ಧ್ವನಿಯಾವುದೆಂದು |
ಕಾಣಿಸಿಕೊಳ್ಳದೆ ಜಿನಸಿದ್ಧ ಮಹಿಮೆಯ | ಕಾಣಿಸಿ ಪಾಡಿದರೊಲ್ದು || ೩೯ ||

ರನ್ನ ಮೂರರ ಗುಣವನು ಮುಖವೀಣೆಯ | ಸನ್ನಾಹದಿಂದ ಹಾಡಿದರು |
ಚೆನ್ನಾಯ್ತು ಸೊಬಗಾಯ್ತು ಸೊಗಸಾಯ್ತು ಲೇಸು ಲೇ | ಸಿನ್ನೊಮ್ಮೆಯೆಂದು ಕೇಳ್ವಂತೆ || ೪೦ ||

ದನಿ ಲೇಸು ಮೇಳದ ಜೋಕೆ ಲೇಸಾಳಾಪ | ವನುಭವ ಲೇಸು ಮತ್ತಲ್ಲಿ |
ಜಿನನಾಮ ಕೂಡಿತು ಲೇಸು ಲೇಸೆಂದು ರಾ | ಯನ ಮುಂದೆ ನುಡಿದರಿಚ್ಛೆಗರು || ೪೧ ||

ತುಂಬಿಯ ಗಾನವಂತಿರಲಿ ಕೋಕಿಲನಾದ | ವೆಂಬರ ಮಾತದಂತಿರಲಿ |
ತುಂಬುರ ನಾರದರಿನ್ನೇಕೆ ಹೋಪುರೆ | ಯೆಂಬಂತೆ ಸೊಗಸಿ ಹಾಡಿದರು || ೪೨ ||

ಸಮವಸರಣದೊಳು ವಿಮಲಕಿರಣದೊಳ | ಗಮಲ ಮುನಿಗಳ ವೃಂದದೊಳು |
ಕಮಲಕರ್ಣಿಕೆಗೆ ಸೋಂಕದೆ ನಿಂದ ದೇವನ | ಗಮಕವನೊಲ್ದು ಪಾಡಿದರು || ೪೩ ||

ಜಿನನ ಪೊಗಳಿ ಕೂಡೆ ಸಿದ್ಧರ ಕೀರ್ತಿಸಿ | ಮುನಿಗಳ ವಂದಿಸಿ ಮತ್ತೆ |
ತನುವಿನೊಳಿದ್ದಾತ್ಮ ತತ್ವ ವಿಚಾರವ | ಜನಪತಿ ಮೆಚ್ಚೆ ಹಾಡಿದರು || ೪೪ ||

ನರುಗಬ್ಬಿನೊಳಗಣ ರಸವ ಕಾಣದೆ ಪಶು | ಹೊರಗಣೆಲೆಯ ಸವಿವಂತೆ |
ಅರಿದೊಳಗಾತ್ಮಸುಖವನುಣಲರಿಯದೆ | ಹೊರಗೆಳಸುವರಂಗಸುಖಕೆ || ೪೫ ||

ತಿಳಿವೆ ಶರೀರ ತಿಳಿವೆ ರೂಪು ಬೆಳಗೆ ಮೈ | ಬೆಳಗೆ ತಾನಾಗಿರುತಿಹುದು |
ತಿಳಿವು ಬೆಳಗುಗಳೆ ಹಂಸನ ಕುರುಹೆಂದು | ತಿಳಿದು ನೋಳ್ಪವನೀಗ ಧನ್ಯ || ೪೬ ||

ನಾಲಗೆ ಕುಡುಹು ಶರೀರವೆ ವಾದ್ಯ ನಿ | ರಾಳಾತ್ಮನೇ ವಾದ್ಯಕಾರ |
ತಾಳಿನುಡಿಸುತಿರ್ದು ಬಿಟ್ಟು ಹೋದರೆ ದೇಹ | ಡೋಳಿನಂದದೊಳು ಬಿದ್ದಿಹುದು || ೪೭ ||

ವಾದ್ಯಗಳಾರಾರು ಪಿಡಿದು ಬಾಜಿಸಿದರೆ | ವೇದ್ಯವೆನಿಸಿ ದನಿಯಹವು |
ಚೋದ್ಯವೀ ತನುವಾದ್ಯ ತಾಳ್ದೋರ್ವಗಲ್ಲದೆ | ಭೇದ್ಯವಾಗದು ಧ್ವನಿಗೊಡದು || ೪೮ ||

ಲೋಹವ ಹೊಕ್ಕಗ್ನಿ ಹೊಯ್ಲಿಗಿಡುವುದಾ | ಲೋಹವನಗಲೆ ಹೊಯ್ಲುಂಟೆ |
ದೇಹವ ಹೊಕ್ಕಿದ್ದರಾತ್ಮಗೆ ಬಾಧೆಯು | ದೇಹವಳಿಯೆ ಬಾಧೆಯುಂಟೆ || ೪೯ ||

ಹೊತ್ತ ದೇಹವ ಬರುಮರಣದೊಳ್ಬಿಟ್ಟರೆ | ಮತ್ತೊಂದು ದೇಹ ಮುಂದಹುದು |
ಹೊತ್ತದೇಹವ ಬಿಟ್ಟು ಮತ್ತೊಂದು ದೇಹವ | ಪತ್ತದೆ ನಿಲ್ವುದು ಮುಕ್ತಿ || ೫೦ ||

ಹಿಡಿದ ದೇಹವ ಬಿಟ್ಟು ಮತ್ತೊಂದು ದೇಹವ | ಪಿಡಿಯದೆ ನಿಲ್ವುದೆಂತೆನಲು |
ಬಿಡದೆ ಸುಜ್ಞಾನಾಗ್ನಿಯಿಂದ ಕರ್ಮದ ಬೇರ | ಸುಡುವುದೊಂದೆಂದು ಪಾಡಿದರು || ೫೧ ||

ಹುಟ್ಟತಾಗಳೆ ನಸುನಗೆ ಮೊಗದೊಳು ಮನ | ದಟ್ಟತಾ ನುಡಿಯದೆ ಚಕ್ರಿ |
ಇಟ್ಟ ನವರ ಮೇಲೆ ತನ್ನ ಕೋಮಲಹಸ್ತ | ಮುಟ್ಟ ದೇವಾಂಗ ವಸ್ತ್ರವನು || ೫೨ ||

ಗಾನ ನಿಂದುದು ಗಾಯಕರ ಮೆಚ್ಚುಮಿಗೆ ಬಂದು | ದಾನಂದ ಸಂದುದು ಸಭೆಗೆ |
ಭೂನಾಥನಾಸ್ಥಾನದೊಳಗಿದ್ದನಿಲ್ಲಿಗಾ | ಸ್ಥಾನದ ಸಂಧಿ ಸುಗಂಧಿ || ೫೩ ||

*****************

22 ಕಾಮೆಂಟ್‌ಗಳು:

  1. ಸರ್ ದಯವಿಟ್ಟು ಕಲಿಗಳ ದೇವನೊಪ್ಪಿದನು ಕವಿತೆಯ ಭಾವಾರ್ಥ ಹಂಚಿಕೊಳ್ಳಿ

    ಪ್ರತ್ಯುತ್ತರಅಳಿಸಿ
  2. ಸರ್ ದಯವಿಟ್ಟು ಸಿರಿಯನಿನ್ನೆನು ಬನ್ನಿಪೆನು ಪದ್ಯದ ಹಿನ್ನೆಲೆ ಕಳಿಸಿ ಸರ್

    ಪ್ರತ್ಯುತ್ತರಅಳಿಸಿ
  3. ಸಂದಿ-1 ರಲ್ಲಿ 4 &5 ರ ಸಾರಾಂಶ ತಿಳಿಸಿ ಕೊಡಿ ಸರ್

    ಪ್ರತ್ಯುತ್ತರಅಳಿಸಿ