ನನ್ನ ಪುಟಗಳು

08 ನವೆಂಬರ್ 2013

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

     ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.

       ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷವೆಂದು ಹೇಳಲಾಗುತ್ತದೆ.
          
ಗುಣಿತಾಕ್ಷರಗಳು
"ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ." 
                                [ವ್ಯಂಜನ  +   ಸ್ವರ   =   ಗುಣಿತಾಕ್ಷರ
ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.    
                             ಕ್       +    ಅ    =      ಕ
                                           ಕ್       +    ಆ    =      ಕಾ  
                                           ಕ್       +    ಇ    =      ಕಿ
                                           ಕ್       +    ಈ    =     ಕೀ
                                           ಕ್       +    ಋ    =     ಕೃ
                                           ಕ್       +    ಎ    =      ಕೆ
                                           ಕ್       +    ಏ    =      ಕೇ
                                           ಕ್       +    ಐ    =      ಕೈ
                                           ಕ್       +    ಒ    =      ಕೊ
                                           ಕ್       +    ಓ    =      ಕೋ
                                           ಕ್       +    ಔ    =      ಕೌ
                                           ಕ್       +   ಅ0   =     ಕಂ
                                           ಕ್      +    ಅಃ    =     ಕಃ
  ಈ ಗುಣಿತಾಕ್ಷರಗಳನ್ನು ಆಧಾರವಾಗಿಟ್ಟುಕೊಂಡು ಬೇರೆ ಅಕ್ಷರಗಳಿಗೆ  ಗುಣಿತಾಕ್ಷರಗಳನ್ನು ಬರೆಯುವುದನ್ನು ಅಭ್ಯಾಸಮಾಡಿ.

  ಒಂದು ಪದವನ್ನು ಉದಾಹರಣೆಯಾಗಿ ತೆಗೆದುಕೊಂಡು ವ್ಯಂಜನ ಮತ್ತು ಸ್ವರಗಳಾಗಿ ವಿಂಗಡಿಸುವ ಬಗ್ಗೆ ತಿಳಿಯೋಣ.
ಮೈಸೂರು ಎಂಬ ಪದವನ್ನು ವ್ಯಂಜನ ಮತ್ತು ಸ್ವರಗಳಾಗಿ ಕೆಳಕಂಡಂತೆ ಬಿಡಿಸಿ ಬರೆಯಬಹುದು.
 ಮೈಸೂರು = ಮ್ + ಐ + ಸ್ + ಊ + ರ್ + ಉ 
    ಮೈ         ಸೂ           ರು
(ಮ್+ಐ,    ಸ್+ಊ,    ರ್+ಉ) 
     ಈ ಮೇಲಿನಂತೆ ಒತ್ತಕ್ಷರವಿಲ್ಲದ ಪದಗಳನ್ನು ಬರೆದುಕೊಂಡು ವ್ಯಂಜನ ಮತ್ತು ಸ್ವರಗಳಾಗಿ ವಿಂಗಡಿಸಿರಿ.
       ನಿಮಗೆ ಗುಣಿತಾಕ್ಷರಗಳ ಪರಿಚಯವಾಯಿತಲ್ಲವೆ? ಇನ್ನು ಮುಂದಿನ ಭಾಗದಲ್ಲಿ ಸಂಯುಕ್ತಾಕ್ಷರಗಳ ಬಗ್ಗೆ ತಿಳಿಯೋಣ.....
 ಸಂಯುಕ್ತಾಕ್ಷರಗಳು
     ಮೇಲೆ ನೀವು ಗುಣಿತಾಕ್ಷರಗಳ ಬಗ್ಗೆ ತಿಳಿದುಕೊಂಡಿರಿ. ಅಲ್ಲಿ ಒಂದು ವ್ಯಂಜನಕ್ಕೆ ಒಂದು ಸ್ವರ ಸೇರುವುದು. ಅಂದರೆ ಒಂದು ಗುಣಿತಾಕ್ಷರದಲ್ಲಿ ಒಂದು ವ್ಯಂಜನ ಮತ್ತು ಒಂದು ಸ್ವರ ಮಾತ್ರ ಇರುತ್ತದೆ ಎಂದಾಯಿತು. ಆದರೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವ್ಯಂಜನಗಳು ಒಂದು ಅಕ್ಷರದಲ್ಲಿರಬಹುದೇ ? ಆಲೋಚಿಸಿ.
    ಹೌದು! ಒಂದು ಅಕ್ಷರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವ್ಯಂಜನ ಇರುವುದೂ ಉಂಟು. ಈ ಕೆಳಗಿನ ಉದಾಹರಣೆಯನ್ನು ಗಮನಿಸಿ.
ಉದಾ-1: ಅಕ್ಕ ಎಂಬ ಪದದಲ್ಲಿ ಕ್ಕ ಎಂಬ ಅಕ್ಷರವನ್ನು ಗಮನಿಸಿ. ಇದರಲ್ಲಿ ಒತ್ತಕ್ಷರ ಇರುವುದನ್ನು ಕಾಣಬಹುದು. ಇದನ್ನು ಬಿಡಿಸಿದಾಗ  ಕ್ + ಕ್ + ಅ  ಎಂದಾಗುತ್ತದೆ. ಇಲ್ಲಿ ಮೂರು ಅಕ್ಷರಗಳಿವೆ. ಅವುಗಳಲ್ಲಿ ಮೊದಲೆರಡು (ಕ್+ಕ್) ವ್ಯಂಜನಗಳಾಗಿದ್ದು ಕೊನೆಯಲ್ಲಿರುವ ಅಕ್ಷರ (ಅ) ಸ್ವರವಾಗಿದೆ. 

ಉದಾ-2: ಸತ್ಯ ಎಂಬ  ಪದವನ್ನು ಗಮನಿಸಿ ಇಲ್ಲಿ ತ್ಯ ಅಕ್ಷರದಲ್ಲಿ ವ್ಯಂಜನದ ಒತ್ತಕ್ಷರವಿರುವುದನ್ನು ಕಾಣಬಹುದು.
ಇದನ್ನು ಬಿಡಿಸಿದಾಗ  ತ್ + ಯ್ + ಅ  ಎಂದಾಗುತ್ತದೆ. ಇಲ್ಲಿಯೂ ಮೂರು ಅಕ್ಷರಗಳಿವೆ. ಅವುಗಳಲ್ಲಿ ಮೊದಲೆರಡು (ತ್+ಯ್) ವ್ಯಂಜನಗಳಾಗಿದ್ದು ಕೊನೆಯಲ್ಲಿರುವ ಅಕ್ಷರ (ಅ) ಸ್ವರವಾಗಿದೆ.

ಉದಾ-3: ಸ್ತ್ರೀ ಎಂಬ  ಪದವನ್ನು ಗಮನಿಸಿ ಇಲ್ಲಿ ಸ್ ವ್ಯಂಜನಕ್ಕೆ ತ್ ಮತ್ತು ರ್ ವ್ಯಂಜನಗಳ ಒತ್ತಕ್ಷರಗಳಿರುವುದನ್ನು ಕಾಣಬಹುದು
ಇದನ್ನು ಬಿಡಿಸಿದಾಗ  ಸ್ + ತ್ + ರ್ + ಈ  ಎಂದಾಗುತ್ತದೆ. ಇಲ್ಲಿ ನಾಲ್ಕು ಮೂರು ಅಕ್ಷರಗಳಿವೆ. ಅವುಗಳಲ್ಲಿ ಮೊದಲ ಮೂರು (ಸ್+ತ್+ಯ್)  ವ್ಯಂಜನಗಳಾಗಿದ್ದು ಕೊನೆಯಲ್ಲಿರುವ ಅಕ್ಷರ (ಈ) ಸ್ವರವಾಗಿದೆ.

  ಹೀಗೆ ಒತ್ತಕ್ಷರಗಳನ್ನು ಹೋದಿರುವ ಅಕ್ಷರಗಳು ಸಂಯುಕ್ತಾಕ್ಷಗಳೆಂದು ಹೇಳಬಹುದು. ಈಗ ನಿಮಗೆ ಸಂಯುಕ್ತಾಕ್ಷದ ಕಲ್ಪನೆ ಬಂದಿರಬಹುದು. ಹಾಗಾದರೆ ಸಂಯುಕ್ತಾಕ್ಷರ ಎಂದರೇನು?
"ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳನ್ನು ಹೊಂದಿರುವ (ಒತ್ತಕ್ಷರವನ್ನು) ಹೊಂದಿರುವ  ಅಕ್ಷರಗಳೇ ಸಂಯುಕ್ತಾಕ್ಷರಗಳು."
[ವ್ಯಂಜನ+ವ್ಯಂಜನ+ಸ್ವರ=ಸಂಯುಕ್ತಾಕ್ಷರ]

ಸಂಯುಕ್ತಾಕ್ಷರಗಳಲ್ಲಿ ಎರಡು ವಿಧ:
1) ಸಜಾತೀಯ ಸಂಯುಕ್ತಾಕ್ಷರ.
2) ವಿಜಾತೀಯ ಸಂಯುಕ್ತಾಕ್ಷರ.

ಏನಿದು ಸಜಾತೀಯ/ ವಿಜಾತೀಯ? ಮೇಲೆ ನೀಡಲಾಗಿರುವ ಮತ್ತು ಈ ಕೆಳಗಿನ  ಉದಾಹರಣೆಗಳನ್ನು ಗಮನಿಸಿ....

ಉದಾ:ಪ್ಪ ಈ  ಪದದಲ್ಲಿ ಪ್ಪ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ  ಪ್+ಪ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು(ಪ್+ಪ್) ಒಂದೇ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಪ್ಪ ಎಂಬುದು ಸಜಾತೀಯ ಸಂಯುಕ್ತಾಕ್ಷರವಾಗಿದೆ.

ಉದಾ: ಶ್ರವಣ ಈ  ಪದದಲ್ಲಿ ಶ್ರ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ  ಶ್+ರ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು (ಶ್+ರ್) ಬೇರೆ ಬೇರೆ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಶ್ರ ಎಂಬುದು ವಿಜಾತೀಯ ಸಂಯುಕ್ತಾಕ್ಷರವಾಗಿದೆ

ಹೀಗೆ "ಒಂದೇ ರೀತಿಯ ವ್ಯಂಜನಗಳನ್ನು ಹೊಂದಿರುವ ಸಂಯುಕ್ತಾಕ್ಷರಗಳನ್ನು 'ಸಜಾತೀಯ ಸಂಯುಕ್ತಾಕ್ಷರ' ಎಂದು ಹೇಳಲಾಗುತ್ತದೆ."
ಉದಾ: ಕ್ಕ, ನ್ನ, ಮ್ಮ, ತ್ತ, ಯ್ಯ, ಜ್ಜ

ಹಾಗೂ "ಬೇರೆ ಬೇರೆ ವ್ಯಂಜನಗಳನ್ನು ಹೊಂದಿರುವ ಸಂಯುಕ್ತಾಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳೆಂದು ಕರೆಯಲಾಗುತ್ತದೆ."
ಉದಾ: ಕ್ಯ, ಶ್ರ, ಕ್ಷ, ಜ್ಯೋ, ಸ್ಕ, ಷ್ಣ

38 ಕಾಮೆಂಟ್‌ಗಳು:

  1. ಕರ್ನಾಟಕ ಶಬ್ಧವನ್ನು ಗುಣಿತಾಕ್ಷರದಲ್ಲಿ ಬರೆಯುವುದು ಹೇಗೆ

    ಪ್ರತ್ಯುತ್ತರಅಳಿಸಿ
  2. ಚೆಲ್ಲಾಪಿಲ್ಲಿ ಘುಣಿತಾಕ್ಷರದಲ್ಲಿ ಬರೆಯುವುದು ಹೇಗೆ

    ಪ್ರತ್ಯುತ್ತರಅಳಿಸಿ
  3. ಮಲ್ಲಜ್ಜಿ ಗುಣಿತಾಕ್ಷರ ಹೆಂಗೆ ಬರೆಯುವುದು

    ಪ್ರತ್ಯುತ್ತರಅಳಿಸಿ
  4. Ann hege ಬಿಡಿಸಿ ಬರೆಯುವುದು ಅದು ಆ ಅಕ್ಷರಕ್ಕೆ ಯ ಅಕ್ಷರ ಒತ್ತಕ್ಷರವಾಗಿ ಬರಬೇಕು

    ಪ್ರತ್ಯುತ್ತರಅಳಿಸಿ
  5. ನಿರಂತರ' ಈ ಪದವನ್ನು ಗುಣಿತಾಕ್ಷರದಲ್ಲಿ ಬಿಡಿಸಿ ಬರೆದಾಗ

    ಪ್ರತ್ಯುತ್ತರಅಳಿಸಿ