ನನ್ನ ಪುಟಗಳು

13 ಅಕ್ಟೋಬರ್ 2015

೩೬) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಶ-ಸ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಶ)
೨೮೩೯. ಶನಿಕಾಟ ಸುರುವಾಗು = ತೊಂದರೆ ಪ್ರಾರಂಭವಾಗು
ಶನಿಯ ವಕ್ರದೃಷ್ಟಿ ಬಿದ್ದರೆ ಜೀವನದಲ್ಲಿ ತುಂಬ ಕಷ್ಟ ಬರುತ್ತದೆ ಎಂಬ ನಂಬಿಕೆ ಜನಪದರಲ್ಲಿದೆ, ಶನಿಯ ವಾಹನವಾದ ಕಾಗೆ ತಲೆಗೆ ಬಡಿದರೆ ಅಥವಾ ಹೆಗಲ ಮೇಲೆ ಕೂತರೆ ಶನಿಕಾಟ ಸುರುವಾಗುವುದರ ಸೂಚನೆ ಎಂದು ನಂಬುತ್ತಾರೆ. ಕಷ್ಟ ಕೊಟ್ಟು ನಲುಗಿಸಿದ ಶನಿಯೇ ಕೊನೆಯಲ್ಲಿ ಸುಖದಲ್ಲಿ ನಲಿಸುತ್ತಾನೆ ಎಂಬ ನಂಬಿಕೆಯೂ ಜನರಲ್ಲಿದೆ.
ಪ್ರ : ಶನಿಕಾಟ ಸುರುವಾದ ಮೇಲೆ ತಿಣುಕಾಟ ಇದ್ದದ್ದೇ, ಸಹಿಸ್ಕೋಬೇಕು ಅಷ್ಟೆ.
೨೮೪೦. ಶಸ್ತ್ರ ನೆಲಕ್ಕೆ ಹಾಕು = ನೆಲ ಕಚ್ಚಿ ಕೂರು
(ಶಸ್ತ್ರ = ಆಯುಧ ; ಇಲ್ಲಿ ದೇಹ, ತಲೆ ಎಂದರ್ಥ) ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರಗಳನ್ನು ನೆಲಕ್ಕೆಸೆದು ನಾನು ಯುದ್ಧ ಮಾಡುವುದಿಲ್ಲ ಎಂದು ಅರ್ಜುನ ಹೇಳಿದಾಗ, ಕೃಷ್ಣ ಅವನಿಗೆ ಬೋಧಸುವ ಪ್ರಸಂಗ ಎಲ್ಲರಿಗೂ ತಿಳಿದಿದೆ. ಆ ಪೌರಾಣಿಕ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಮಗಳು ಬೇರೆಯವನ ಹಿಂದೆ ಓಡಿ ಹೋದಾಗಿನಿಂದ ಶಸ್ತ್ರಾನೆ ನೆಲಕ್ಕೆ ಹಾಕಿಬಿಟ್ಟವನೆ.
೨೮೪೧. ಶ್ಯಾಟ ಕಿತ್ತು ಪೋಟಿ ಹಾಕು = ವ್ಯರ್ಥ ಕೆಲಸದಲ್ಲಿ ತೊಡ-ಗು
(ಶ್ಯಾಟ = ಶ್ಯಪ್ಟ; ಪೋಟಿ = ಗಂಟು)
ಪ್ರ : ಅವರು ಕೆಲಸಕ್ಕೆ ಹೋದ್ರೆ, ನೀನೇನು ಮಾಡ್ತಾ ಇದ್ದೀಯಾ? ಶಾಟ ಕಿತ್ತು ಪೋಟಿ ಹಾಕ್ತಿದ್ದೀಯ?
೨೮೪೨. ಶಿಖರ ಕಟ್ಟಿಸು = ಗೋಪುರ ಕಟ್ಟಿಸು
ಪ್ರ : ಬಡಜನರ ತಲೆ ಹೊಡೆದು ತನ್ನ ಮನೆ ಮೇಲೆ ಶಿಖರ ಕಟ್ಟಿಸಿರೋದು ಕಾಣಲ್ವ?
೨೮೪೩. ಶಿವನ ಮೊಲೆ ಚೀಪಿದಂತಾಗು = ಬಾಯಿಚಟ ತೀರಿದರೂ ಹಸಿವಿನ ಚಡಪಡಿಕೆ ನಿಲ್ಲದಿರು.
ಕೆಲವು ಮೇಕೆಗಳಿಗೆ ಕೊರಳಿನಲ್ಲಿ ಮೊಲೆಯಾಕಾರದ ಬೆಟ್ಟುದ್ದದ ನರಗಳು ಇಳೆಬಿದ್ದಿರುತ್ತವೆ. ಅವಕ್ಕೆ ‘ಶಿವನಮೊಲೆ’ ಎಂದು ಕರೆಯುತ್ತಾರೆ. ಕೆಲವು ಮೇಕೆಗಳು ಎರಡು ಮೂರು ಮರಿಗಳನ್ನು ಈದುಬಿಡುತ್ತವೆ. ಕಾಡಲ್ಲಿ ಮೇದು ಮನೆಗೆ ಬಂದ ಮೇಕೆಗೆ ಮೂರು ಮರಿಗಳು ಹಾಲು ಕುಡಿಯಲು ದುಂಬಾಲು ಬೀಳುತ್ತವೆ. ಅವುಗಳಲ್ಲಿ ಬಲವಾದ ಎರಡು ಮರಿಗಳು ತಾಯಿಯ ಎರಡು ಮೊಲೆಗಳಿಗೆ ಬಾಯಿ ಹಾಕಿ ಹಾಲು ಕುಡಿಯತೊಡಗಿದಾಗ, ಮೂರನೆಯ ಅಶಕ್ತ ಮರಿ ಬೆಳೋ ಎಂದು ಅರಚಿಕೊಳ್ಳುತ್ತದೆ. ಆಗ ಮನೆಯವರು ಅದರ ಬಾಯಿ-ಗೆ ಮೇಕೆಯ ಕೊರಳಲ್ಲಿರುವ ಶಿವನ ಮೊಲೆಯನ್ನು ಇಡುತ್ತಾರೆ. ಬಾಯಿ ಚಪಲ ತೀರಿದರೂ ಹಾಲು ಬರದೇ ಇರುವುದರಿಂದ ಹೊಟ್ಟೆ ಹಸಿವಿನ ಚಡಪಡಿಕೆ ತೀರುವುದಿಲ್ಲ. ಶಿವನ ಮೊಲೆ ಎಂದು ಹೆಸರು ಬರಲು ಶಿವನ ಅರ್ಧನಾರೀಶ್ವರಾಕೃತಿ ಕಾರಣವೆನ್ನಿಸುತ್ತದೆ. ಏಕೆಂದರೆ ದೇಹದ ಅರ್ಧ ಭಾಗ ಪಾರ್ವತಿಯದು. ಇನ್ನರ್ಧ ಭಾಗ ಶಿವನದು. ಪಾರ್ವತಿಯ ಎದೆಯಲ್ಲಿ ಹಾಲು ಬಂದರೆ ಶಿವನ ಎದೆಯಲ್ಲಿ ಹಾಲು ಬರುವುದಿಲ್ಲ. ಕೆಚ್ಚಲಿನ ಮೊಲೆಗಳಿಗೆ ಶಿವನಮೊಲೆ ಎಂದು ಕರೆಯದೆ ಕೊರಳ ಮೊಲೆಗಳಿಗೆ ಶಿವನ ಮೊಲೆ ಎಂದು ಕರೆಯುವಲ್ಲಿ ಜನಪದರ ಸೃಜನಶಕ್ತಿ ಎದ್ದು ಕಾಣುತ್ತದೆ.
ಪ್ರ : ಮಗು ಹಾಲು ಬತ್ತಿದ ಎದೆಯನ್ನು ಚೀಪೋದು, ಮೇಕೆಮರಿ ‘ಶಿವನಮೊಲೆ’ ಚೀಪೋದು ಎರಡೂ ಒಂದು.
೨೮೪೪. ಶ್ಯಪ್ಯ ತೋರಿಸು = ಇಲ್ಲವೆನ್ನು, ಕೈಯೆತ್ತು.
(ಶ್ಯಪ್ಪ = ಮರ್ಮಾಂಗದ ಕೂದಲು)
ಪ್ರ : ಕೊಟ್ಟ ಹಣ ಕೇಳಿದ್ಕೆ ಶ್ಯಪ್ಪ ತೋರಿಸಿದ.
೨೮೪೫. ಶುಕ್ರದೆಸೆಯೊದಗು = ಅದೃಷ್ಟ ಕುಲಾಯಿಸು.
ಪ್ರ : ನನಗೆ ಶನಿದೆಸೆ, ನಿನಗೆ ಶುಕ್ರದೆಸೆ; ನನಗೆ ಕಷ್ಟ ನಿನಗೆ ಸುಖ ಅಷ್ಟೆ.
೨೮೪೬. ಶಂಖ ಊದು = ಅಳು, ಒಂದೇ ಸಮ ಅರಚಿಕೊಳ್ಳು
ವೈಷ್ಣವ ಸಂಪ್ರದಾಯದ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟು ಇದು. ದಾಸಯ್ಯಗಳು ಜಾಗಟೆ ಬಡಿಯುತ್ತ ಶಂಖ ಊದುವುದು ವಾಡಿಕೆ. ಶೈವರಲ್ಲಿ ಬೇರೆ ವಾದ್ಯಗಳ ಬಳಕೆಯಿದ್ದು ಶಂಖ ಜಾಗಟೆಗಳ ಬಳಕೆಯಿಲ್ಲ.
ಪ್ರ : ಶಂಖ ಊದೋದು ನಿಲ್ಲಿಸ್ತೀಯೋ, ಇಲ್ಲ ನಾಲ್ಕು ಬಿಗೀಲೊ ? ಎಂದು ಗದರಿಸಿದ ಗಂಡ.

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಸ)
೨೮೪೭. ಸಕ್ಕಟ್ಟೆ ಸರೊತ್ತಾಗು = ನಟ್ಟುನಡುರಾತ್ರಿಯಾಗು
(ಸಕ್ಕಟ್ಟೆ < ಸಕತ್ = ಪೂರ್ಣ ; ಸರೊತ್ತು < ಸರಿ + ಹೊತ್ತು = ಮಧ್ಯರಾತ್ರಿ)
ಪ್ರ : ಸಕ್ಕಟ್ಟೆ ಸರೋತ್ತಾಯ್ತು ಮಲಗುವಾಗ್ಗೆ, ಕೂಡಲೇ ಶಾಸ್ತ್ರ ಮಾಡೋಕೆ ಎಬ್ಬಿಸಿದರು
೨೮೪೮. ಸಗಣಿ ನೀರು ಹಾಕು = ಶುದ್ಧಿ ಮಾಡು, ಅಪವಿತ್ರವಾದುದನ್ನು ಪವಿತ್ರಗೊಳಿಸು
ಪ್ರ : ನೀನು ಕುಂತ ಜಾಗಕ್ಕೆ ಸಗಣಿ ನೀರು ಹಾಕಿ ಸಾರಿಸಬೇಕು.
೨೮೪೯. ಸಟ್ಟುಗ ಹಿಡ್ಕೊಂಡು ಹೋಗು = ಕೆಟ್ಟು ನಿರ್ಗತಿಕನಾಗಿ ಅಡುಗೆ ಕೆಲಸ ಅವಲಂಬಿಸು
ಕಲಿಯ ಪ್ರವೇಶದಿಂದಾಗಿ ನಳ ಸೌಟು ಹಿಡಿಯುತ್ತಾನೆ. ಭೀಮ ಸೌಟು ಹಿಡಿಯುತ್ತಾನೆ. ಪೌರಾಣಿಕ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಕಟುಕ ದಾಯಾದಿಗಳ ದೆಸೆಯಿಂದ ಅವನು ಸಟ್ಟುಗ ಹಿಡ್ಕೊಂಡು ಹೋದ.
೨೮೫೦. ಸಣ್ಣ ಕಸುಬು ಸರಿಬೀಳದಿರು = ನೀಚ ಸ್ವಭಾವ ಹಿಡಿಸದಿರು
(ಸಣ್ಣ =ನೀಚ, ಕೀಳು ; ಕಸುಬು = ವೃತ್ತಿ, ಸ್ವಭಾವ)
ಪ್ರ : ಅವನ ಸಣ್ಣ ಕಸುಬು ಸರಿಬೀಳದೆ ಅವನ ಸಂಗ ಬಿಟ್ಟುಬಿಟ್ಟೆ ಮೊದಲೇ ಗಾದೆ ಇಲ್ವಾ, ಸಣ್ಣನ ಸಂಗಕ್ಕಿಂತ ಸೊಣಗನ ಸಂಗ ಲೇಸು ಅಂತ.
೨೮೫೧. ಸಣ್ಣ ಪುಟ್ಟ ಮಾತಾಡು = ಕೀಳುದರ್ಜೆಯ ಮಾತಾಡು, ಕೆಟ್ಟಕೆಟ್ಟ ಮಾತಾಡು.
ಪ್ರ : ಸಣ್ಣ ಪುಟ್ಟ ಮಾತಾಡೋಳ ಸಂಗವೇ ಬೇಡ.
೨೮೫೨. ಸಣ್ಣು ಮಾಡು = ನಮಸ್ಕರಿಸು
(ಸಣ್ಣು < ಶರಣು = ನಮಸ್ಕಾರ)
ಪ್ರ : ಹಸೆಮಣೆ ಏರೋಕೆ ಮುನ್ನ ಅಪ್ಪ ಅಮ್ಮನಿಗೆ ಸಣ್ಣು ಮಾಡು.
೨೮೫೩. ಸತ್ತಷ್ಟು ಸಾವಾಗು = ನಾಚಿಕೆಯಾಗು, ಅಧಿಕ ಅವಮಾನವಾಗು
ಪ್ರ : ತುಂಬಿದ ಸಭೇಲಿ ಅಂಥ ಮಾತಾಡಿದಾಗ ನನಗೆ ಸತ್ತಷ್ಟು ಸಾವಾಯ್ತು.
೨೮೫೪. ಸತುವಿಲ್ಲದಿರು = ಶಕ್ತಿ ಇಲ್ಲದಿರು, ಗಟ್ಟಿ ಇಲ್ಲದಿರು
(ಸತುವು < ಸತ್ತ್ವ = ಬನಿ, ಶಕ್ತಿ)
ಪ್ರ : ಸತುವಿಲ್ಲದ ಹೆಳವನನ್ನು ಕಟ್ಕೊಂಡು ಮೇವು ನೀರಿಲ್ಲದೆ ಬೆಳೋ ಅನ್ನೋ ಕಡಸಿನಂಗೆ ಬಾಯಿಬಾಯಿ ಬಿಡ್ತಾಳೆ.
೨೮೫೫. ಸತ್‌ಸತ್ತು ಹುಟ್ಟು = ಅಧಿಕ ಯಾತನೆ ಪಡು, ಪುನರ್ಜನ್ಮ ಪಡೆದಂತಾಗು
ಪ್ರ : ಕಷ್ಟ ಕಾರ್ಪಣ್ಯಗಳಲ್ಲಿ ಸಂಸಾರ ಸಾಕೋಕೆ ಸತ್‌ಸತ್ತು ಹುಟ್ಟಿದ್ದೀನಿ.
೨೮೫೬. ಸತ್ತು ಸುಣ್ಣವಾಗು = ಸುಸ್ತಾಗು, ತುಂಬ ದಣಿವಾಗು
ಪ್ರ : ಸತ್ತು ಸುಣ್ಣವಾಗಿ ಈಗಿಲ್ಲಿ ಬಂದು ಕುತಿದ್ದೀನಿ, ನಾನೆಲ್ಲಿಗೂ ಎದ್ದು ಬರಲ್ಲ.
೨೮೫೭. ಸದರ ಕೊಡು = ಸಲಿಗೆ ಕೊಡು
(ಸದರ = ಸಲಿಗೆ, ಹೆಚ್ಚು ಒಡನಾಡ)
ಪ್ರ : ಗಾದೆ – ಸದರ ಕೊಟ್ಟರೆ ಅದರಾಗೆ ಕೈಯಿಕ್ಕಿದ.
೨೮೫೮. ಸದ್ದಡಗು = ಮಾತು ನಿಲ್ಲು, ಮರಣ ಹೊಂದು
ಪ್ರ : ನಿನ್ನ ಸದ್ದಡಗಿದಾಗಲೇ ಈ ಮನೇಲಿ ನಿಸೂರಾಗಿ ಬಾಳ್ವೆ ಮಾಡೋಕಾಗೋದು.
೨೮೫೯. ಸನ್ನಿಯಾಗು = ಉನ್ಮಾದವಾಗು, ಬುದ್ಧಿಭ್ರಮಣೆಯಾಗು
ಪ್ರ : ಸನ್ನಿಯಾದಾಗ ವಾದಕ್ಕಿಳಿಯಬಾರದು, ಅದು ಇನ್ನೂ ಪುಳ್ಳೆ ಇಕ್ಕಿದಂತಾಗ್ತದೆ.
೨೮೬೦. ಸನ್ನೆ ಮಾಡು = ಮಿಸುಕು, ಸೂಚನೆ ಕೊಡು
(ಸನ್ನೆ < ಸಂಜ್ಞಾ = ಸೂಚನೆ)
ಪ್ರ : ಸನ್ನೆ ಮಾಡಿದ್ರೂ ಬರದಿದ್ರೆ ದೊಣ್ಣೆಸೇವೆ ಮಾಡಿದರೆ ಬರ್ತಾಳೆ.
೨೮೬೧. ಸನ್ನೆ ಹಾಕು = ಮೀಟು, ಮುನ್ನೂಂಕು
(ಸನ್ನೆ = ಮೀಟುಗೋಲು, ಹಾರೆ, ಗಳು)
ಪ್ರ : ಗಾದೆ – ಸನ್ನೆ ಹಾಕಿದರೂ ಬರ್ದೋಳು ಸನ್ನೆ ಮಾಡಿದರೆ ಬರ್ತಾಳ?
೨೮೬೨. ಸಮಯದಪ್ಪು = ಅಸಂದರ್ಭವಾಗು, ಅನಾನುಕೂಲವಾಗು
ಪ್ರ : ಎಂಥವರಿಗೂ ಸಮಯದಪ್ತದೆ, ಕಟ್ಟುನಿಟ್ಟನ್ನು ಸಡಿಲಿಸಿ ಬಗೆಹರಿಸಿ.
೨೮೬೩. ಸರ ಇಕ್ಕು = ಧ್ವನಿಗೂಡಿಸು, ಶ್ರುತಿ ಇಕ್ಕು
(ಸರ < ಸ್ವರ = ಧ್ವನಿ)
ಪ್ರ : ನಾನು ಹಾಡಬೇಕಾದರೆ, ನನ್ನ ಜೊತೆಗೆ ಸರ ಇಕ್ಕೋರು ಒಬ್ಬರು ಬೇಕಲ್ಲ.
೨೮೬೪. ಸರಕು ಇರು = ಸತ್ತ್ವ ಇರು, ತಾಕತ್ತಿರು
ಪ್ರ : ಕಣ್ಣಿಗೆ ಪರಕಲನಂತೆ ಕಂಡ್ರೂ ಸರಕು ಸರಿಯಾಗಿದೆ.
೨೮೬೫. ಸರಂಪಳೆ ಮಾಡು = ಏಕೆ ಚೆಲ್ಲಾಡು, ಒಂದೇ ಸಮ ಇಟ್ಟಾಡು
(ಸರಂಪಳೆ < ಸರಂಪಳಿ < ಸರಪಳಿ = ಕೊಂಡಿಗೊಂಡಿರುವ ಉದ್ದನೆಯ ಚೈನು)
ಪ್ರ : ದನಗಳಿಗೆ ಹುಲ್ಲು ಹಾಕು ಅಂದ್ರೆ, ಏಕ ಸರಂಪಳೆ ಮಾಡ್ಕೊಂಡು ಹೋದ.
೨೮೬೬. ಸರ್ಕಸ್ ಮಾಡು = ಕಸರತ್ತು ಮಾಡು; ಮನ-ಸ್ಸ-ನ್ನು ಪ್ರಸ-ನ್ನ-ಗೊ-ಳಿ-ಸ-ಲು ಯತ್ನಿ-ಸು
ಪ್ರ : ನೀನು ಎಷ್ಟೇ ಸರ್ಕಸ್ ಮಾಡಿದರೂ, ನಾನು ಒಂದು ಚಿಕ್ಕಾಸು ಕೊಡಲ್ಲ.
೨೮೬೭. ಸರಾಪು ಕುಡಿ = ಸಾರಾಯಿ ಕುಡಿ
ಪ್ರ : ಗಾದೆ – ದೀಪ ಇಲ್ಲ ಧೂಪ ಇಲ್ಲ ಬಂದೆ ನಿನ್ನ ಗುಡಿಗೆ
ಅರಾಪಿಲ್ಲ ಸರಾಪಿಲ್ಲ ಹೋಗು ನಿನ್ನ ಮನೆಗೆ
೨೮೬೮. ಸರಿಗಟ್ಟು = ಸಾಯಿಸು, ಕೊಲ್ಲು
ಪ್ರ : ಒಂದಲ್ಲ ಒಂದಿನ ನಾನೇ ಅವನ್ನ ಸರಿಗಟ್ತೀನಿ ನೋಡು
೨೮೬೯. ಸರಿಗಟ್ಟಿಕೊಳ್ಳು = ತನ್ನಂತೆ ಮಾಡಿಕೊಳ್ಳು, ರಾಜಿಯಾಗು
ಪ್ರ : ಆ ಪಕ್ಷದೋರು ಇವನನ್ನು ಸರಿಗಟ್ಟಿಕೊಂಡಿದ್ದಾರೆ ಅಂತ ಪುಕಾರು.
೨೮೭೦. ಸರಿದುಕೊಳ್ಳು = ಏರಿಕೊಳ್ಳು, ನೆಟ್ಟುಕೊಳ್ಳು
ಪ್ರ : ಮೀನಿನ ಮುಳ್ಳು ಗಂಟ್ಲಿಗೆ ಸರಿದುಕೊಂಡು ಬಿಟ್ಟು ವಿಲಿವಿಲಿ ಒದ್ದಾಡಿದೆ.
೨೮೭೧. ಸರಿದೂಗಿಸು = ನಿಭಾಯಿಸು, ಎಟುಕುವಂತೆ ಮಾಡು
ಪ್ರ :ಪಂಕ್ತಿಗೆಲ್ಲ ಅನ್ನ ಸಾರನ್ನು ಸರಿದೂಗಿಸಿದೆ.
೨೮೭೨. ಸರಿಬೆಸ ಗರಗಸ ಕೇಳದಿರು = ಇಲ್ಲಸಲ್ಲದ್ದನ್ನು ಪ್ರಶ್ನಿಸದಿರು.
(ಸರಿ = ಸಮ ಸಂಖ್ಯೆ; ಬೆಸ = ಅಸಮ ಸಂಖ್ಯೆ; ಗರ = ಗ್ರಹ. ಗರಗತಿ ಎಂಬುದು ಹಿಂದಿನ ಸರಿಬೆಸದ ಸಾದೃಶ್ಯದ ಮೇಲೆ ಗರಗಸ ಆಗಿದೆ)
ಪ್ರ : ನೀನು ಸರಿಬೆಸ ಗರಗಸ ಎಲ್ಲ ಕೇಳಿದ್ರೆ, ನನಗೆ ಹೇಳೋಕೆ ಪುರಸತ್ತಿಲ್ಲ.
೨೮೭೩. ಸರೀಕರ ಮುಂದೆ ಅಗ್ಗವಾಗು = ನೆರೆಹೊರೆಯವರ ಮುಂದೆ ಮಾನ ಹೋಗು.
(ಸರೀಕರು = ನೆರೆಹೊರೆಯವರು ; ಅಗ್ಗವಾಗು = ಹಗುರವಾಗು, ಕೀಳಾಗು)
ಪ್ರ : ಸರೀಕರ ಮುಂದೆ ಅಗ್ಗವಾಗೋ ಕೆಲಸ ಮಾಡೋಕೆ ನಾನು ತಯಾರಿಲ್ಲ.
೨೮೭೪. ಸಲಕ್ಕೆ ಬರು= ಪ್ರಯೋಜನಕ್ಕೆ ಬರು, ಸಾರ್ಥಕವಾಗು
(ಸಲ < ಸೂಲು ? = ಫಲ ; ಸಲ < ಸೂಳ್ = ಸರ -ದಿ)
ಪ್ರ : ಗಾದೆ – ಸಲಕ್ಕೆ ಬರದೋರು ಸಾವಿರಾಳಿದ್ದೇನು ಫಲ?
೨೮೭೫. ಸಲಸಲಕ್ಕೂ ಬರು = ಮತ್ತೆ ಮತ್ತೆ ಬರು
(ಸಲ < ಸಾಲು = ವರ್ಷ, ಬಾರಿ, ಸರದಿ)
ಪ್ರ : ಸಲಸಲಕ್ಕೂ ಬಂದು ಸಾಲ ಕೇಳಿದರೆ ನಾನೆಲ್ಲಿಂದ ತರಲಿ?
೨೮೭೬. ಸಲಿಗೆ ಕೊಡು = ಸದರ ಕೊಡು, ಹೆಚ್ಚು ಪ್ರೀತಿ ತೋರಿಸು
ಪ್ರ : ಗಾದೆ – ಸಲಿಗೆ ಕೊಟ್ಟಿದ್ಕೆ ಮೊಲೆಗೆ ಕೈ ಹಾಕಿದ.
೨೮೭೭. ಸವಕಲು ನಾಣ್ಯವಾಗು = ಬೆಲೆ ಕಳೆದುಕೊಳ್ಳು, ಚಲಾವಣೆಯಾಗದಿರು
ಪ್ರ : ಅವನು ಸವಕಲು ನಾಣ್ಯವಾಗಿದ್ದಾನೆ, ಅವನ ಮಾತು ನಡೆಯಲ್ಲ.
೨೮೭೮. ಸವರಿ ಹಾಕು = ಕೊಚ್ಚಿ ಹಾಕು, ತುಂಡರಿಸು
(ಸವರು = ಕೊಚ್ಚು)
ಪ್ರ : ಮೊದಲು ಗಿಡಗೆಂಟೆ ಎಲ್ಲ ಸವರಿ ಹಾಕು, ಆಮೇಲೆ ನೇಗಿಲು ಕಟ್ಟಿ ಉಳು.
೨೮೭೯. ಸವರಿಸಿಕೊಂಡು ಹೋಗು = ಸರಿದೂಗಿಸಿಕೊಂಡು ಹೋಗು, ಎಲ್ಲವನ್ನು ಸಹಿಸಿಕೊಂಡು ಹೋಗು
(ಸವ-ರಿ-ಸು <ಸಂವ-ರಿ-ಸು = ಒಟ್ಟು-ಗೂ-ಡಿ-ಸು, ಹಿಂ-ಡಾ-ಗಿ ಕರೆ-ದೊ-ಯ್ಯಿ)
ಪ್ರ : ಎತ್ತು ಏರಿಗೆ ಕೋಣ ನೀರಿಗೆ ಅಂತ ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಮುಖ ಮಾಡಿದರೆ ಇವರನ್ನೆಲ್ಲ ಸವರಿಸಿಕೊಂಡು ಹೋಗೋಕೆ ನನ್ನ ಕೈಯಿಂದ ಆಗಲ್ಲ.
೨೮೮೦. ಸವೆದು ಹೋಗು = ಬಡವಾಗು
(ಸವೆ < ಸಮೆ = ನವೆ, ಕ್ಷೀಣಿಸು)
ಪ್ರ : ಸವೆದು ಹೋಗಿ ತಟ್ಟಾಡ್ತಾ ಇದ್ದಾನೆ, ನೀನೇ ಅನ್ನೋರು ಇಲ್ಲ.
೨೮೮೧. ಸವೆದು ಸಣಬಾಗು = ನವೆದು ನೂಲಾಗು, ಜೂಲುಜುಲಾಗು
(ಸಣಬು = ಹಗ್ಗ ಹೊಸೆಯಲು ಬಳಸುವ ಕತ್ತಾಳೆ, ಪುಂಡಿಕಡ್ಡಿ, ತೆಂಗಿನಕಾಯಿಯ ನಾರು, ಜುಂಜು)
ಪ್ರ : ಸವೆದು ಸಣಬಾಗಿ ಮಸಾಣಕ್ಕೆ ಹೋಗೋ ಹೆಣವಾಗಿದ್ದಾನೆ.
೨೮೮೨. ಸವಾರಿ ಮಾಡು = ಯಜಮಾನಿಕೆ ನಡೆಸು, ಹುಕುಂ ಚಲಾಯಿಸು
ವಾಹನ ಸೌಕರ್ಯಕ್ಕಿಂತ ಮೊದಲು ಪ್ರಾಣಿಗಳ ಮೇಲೆ ಕುಳಿತು ಪಯಣಿಸುವ ರೂಢಿ ಸಮಾದಲ್ಲಿತ್ತು. ಕತ್ತೆ, ಕುದುರೆ, ಎಮ್ಮೆ, ಎತ್ತುಗಳ ಮೇಲೆ ಸಾಮಾನುಗಳ ಹೇರನ್ನು ಹಾಕಿ ಸಾಗಿಸುತ್ತಿದ್ದುದೇ ಅಲ್ಲದೆ, ಮನುಷ್ಯರು ಸವಾರಿ ಮಾಡುವುದಕ್ಕೂ ಬಳಸುತ್ತಿದ್ದರು. ದೇವಾನುದೇವತೆಗಳ ವಾಹನಗಳು ಪ್ರಾಣಿ ಪಕ್ಷಿಗಳೇ ಎಂಬುದನ್ನು ಇಲ್ಲಿ ನೆನೆದುಕೊಳ್ಳಬಹುದು. ಸವಾರಿ ಮಾಡುವವರ ಕೈಯಲ್ಲಿ ಹಗ್ಗ, ಲಗಾಮು ಇರುವುದರಿಂದ ಅವರು ಹೇಳಿದಂತೆ ಪ್ರಾಣಿಗಳು ಕೇಳಬೇಕು. ಹಾಗೆಯೇ ಧನಿಕರು ಬಡವರ ಮೇಲೆ ಸವಾರಿ ಮಾಡುತ್ತಾ ತಮ್ಮ ಅಂಕೆಯಲ್ಲಿಟ್ಟುಕೊಂಡು ಬರುತ್ತಿರುವ ಸಾಮಾಜಿಕ ಸ್ಥಿತಿಯನ್ನೂ ಇದು ಸೂಚಿಸುತ್ತದೆ.
ಪ್ರ : ಇದುವರೆಗೂ ಬೇರೆಯವರಿಂದ ಸವಾರಿ ಮಾಡಿಸಿಕೊಂಡು ಸಾಕಾಗಿದೆ, ಈಗ ನಾವು ಅವರ ಮೇಲೆ ಸವಾರಿ ಮಾಡಬೇಕು, ತಪ್ಪಿದರೆ ಅವರು ನಮ್ಮ ಮೇಲೆ ಸವಾರಿ ಮಾಡೋಕೆ ಬೆನ್ನು ಕೊಡಬಾರ್ದು.
೨೮೮೩. ಸಸಾರ ಮಾಡು = ಅಲಕ್ಷ್ಯ ಮಾಡು
(ಸಸಾರ < ತಾತ್ಸಾರ = ಅಲಕ್ಷ್ಯ, ಅಸಡ್ಡೆ)
ಪ್ರ : ಗಾದೆ – ಹೆಂಡ್ರನ್ನ ಸಸಾರ ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ.
೨೮೮೪. ಸಾಕಿ ಗ್ವಾಕೆ ಮುರಿದದ್ದು ಸಾಕು = ಬೆಳೆಸಿ ಉದ್ಧಾರ ಮಾಡಿದ್ದು ಸಾಕು
(ಗ್ವಾಕೆ < ಗ್ವಾಂಕೆ < ಗೊಂಕೆ = ಗಂಟಲು, ಧ್ವನಿಪೆಟ್ಟಿಗೆ; ಗ್ವಾಕೆ ಮುರಿ = ಗೋಮಾಳೆ ಮುರಿ, ಧ್ವನಿ ಬದಲಾಗು ) ಮಕ್ಕಳು ಹರೆಯಕ್ಕೆ ಬಂದಾಗ ಅವರ ಗೋಮಾಳೆ ಮುರಿಯುತ್ತದೆ ಅಂದರೆ ಧ್ವನಿ ಬದಲಾಗುತ್ತದೆ. ಗೋಮಾಳೆಗೆ ಧ್ವನಿ ಪೆಟ್ಟಿಗೆ ಎಂದೂ ಕರೆಯುತ್ತಾರೆ. ಗೋಮಾಳೆ ಮುರಿದು ಧ್ವನಿ ಬದಲಾಗುವವರೆಗೂ ಸಾಕಿದವರನ್ನು, ಮಕ್ಕಳು ‘ಕತ್ತು ಮುರಿದದ್ದು, ಹಿಸುಕಿದ್ದು ಸಾಕು’ ಎಂದು ಧಟ್ಟಿಸಿ ಕೇಳುವಲ್ಲಿ ಕೃತಘ್ನತೆಯ ಧ್ವನಿ ಇರುವುದನ್ನು ಕಾಣುತ್ತೇವೆ.
ಪ್ರ : ನೀನು ಸಾಕಿ ಗ್ವಾಕೆ ಮುರಿದದ್ದು ಸಾಕು, ನನ್ನ ಪಾಲು ನನಗೆ ಬಿಸಾಕು, ನಾನು ಬೇರೆ ಇರ್ತೀನಿ ಎಂದ ಮಗ.
೨೮೮೫. ಸಾಕಿದ ನಾಯಿ ಕಾಲು ಕಚ್ಚು = ಸಲಹಿದವರಿಗೇ ಬೆನ್ನಿಗೆ ಇರಿ, ಎರಡೂ ಬಗೆ
ಮುದ್ದಿನಿಂದ ಸಾಕಿದ ನಾಯಿಯೇ ಒಡೆಯನ ಕಾಲು ಕಚ್ಚುವಂತೆ ಪೋಷಣೆ ಪಾಲನೆ ಮಾಡಿಸಿಕೊಂಡ ಮಕ್ಕಳೇ ವ್ಯಕ್ತಿಗಳೇ ಸಾಕಿ ಸಲಹಿದ ಹಿರಿಯರಿಗೆ ಎರಡು ಬಗೆಯುವುದನ್ನು ಈ ನುಡಿಗಟ್ಟು ಸೂಚಿಸುತ್ತದೆ.
ಪ್ರ : ಸಾಕಿದ ನಾಯಿ ಕಾಲು ಕಚ್ಚಿತು ಅನ್ನೋಂಗೆ ಮಾಡಿದೆಯಲ್ಲೋ ಚಂಡಾಲ.
೨೮೮೬. ಸಾಕು ಅನ್ನಿಸು = ತೃಪ್ತಿಯಾಗಿಸು
ಪ್ರ : ಗಾದೆ – ಅನ್ನ ಇಕ್ಕಿ ಸಾಕು ಅನ್ನಿಸಬಹುದು
ಹಣ ಕೊಟ್ಟು ಸಾಕು ಅನ್ನಿಸೋಕಾಗಲ್ಲ
೨೮೮೭. ಸಾಕು ಸಾಕು ಅನ್ನಿಸು = ಹೆಣಗಿಸು, ಬೇಸರ ತರಿಸು
ಪ್ರ : ಬೆಳಿಗ್ಗೆಯಿಂದ ಬೈರಿಗೆ ಕೊರೆದು ಸಾಕು ಸಾಕು ಇವನ ಸಾವಾಸ ಅನ್ನಿಸಿಬಿಟ್ಟ.
೨೮೮೮. ಸಾಕು ತೆಗೆದುಕೊಳ್ಳು = ದತ್ತು ತೆಗೆದುಕೊಳ್ಳು
ಮಕ್ಕಳಿಲ್ಲದವರು ಸಂಬಂಧಿಕರ ಮಕ್ಕಳನ್ನೋ ಅಥವಾ ಬೇರೆಯವರ ಮಕ್ಕಳನ್ನೋ ದತ್ತು ತೆಗೆದುಕೊಳ್ಳುವ ಪದ್ಧತಿ ನಮ್ಮ ಜನಪದರು ‘ಸಾಕುತಗೊಂಡಿದ್ದೇವೆ’ ಎನ್ನುತ್ತಾರೆ. ಇದರಿಂದಲೇ ಸಾಕು ತಾಯಿ, ಸಾಕು ತಂದೆ ಎಂಬ ಪದಗಳ ಆವಿರ್ಭಾವ ಆಗಿರುವುದು. ಉದಾಹರಣೆಗೆ ಕೃಷ್ಣನ ಹೆತ್ತತಾಯಿ ದೇವಕಿಯಾದರೆ, ಸಾಕುತಾಯಿ ಯಶೋಧೆಯಾಗಿದ್ದಾಳೆ.
ಪ್ರ : ನಮಗೆ ಮಕ್ಕಳಿಲ್ಲದ್ದಕ್ಕೆ ನಮ್ಮ ಭಾವನ ಮಗನ್ನ ಸಾಕು ತಗೊಂಡಿದ್ದೇವೆ.
೨೮೮೯. ಸಾಕು ಮಾಡು = ಕೊನೆ ಮಾಡು, ನಿಲ್ಲಿಸು
ಪ್ರ : ನಿನ್ನ ಮೇಕು ತೋರಿಸಬ್ಯಾಡ, ಸಾಕು ಮಾಡು.
೨೯೦೦. ಸಾಗಿ ಹೋಗು = ತೆಳ್ಳಗಾಗು, ಕೃಶವಾಗು
ಪ್ರ : ಅವನ ತೀರ ಸಾಗಿ ಹೋಗಿದ್ದಾನೆ, ಸಾಯೋರ ಹಾಗೆ.
೨೯೦೧. ಸಾಗು ಹಾಕು = ಕಳಿಸಿಕೊಡು
ಮನೆಗೆ ಬಂದ ನೆಂಟರನ್ನು, ಅತಿಥಿ ಅಭ್ಯಾಗತರನ್ನು ಜನಪದರು ಮನೆಯಲ್ಲಿ ಇದ್ದುಕೊಂಡೇ ಹೋಗಿ ಬನ್ನಿ ಎಂದು ಹೇಳವುದಿಲ್ಲ. ಅವರ ಜೊತೆ ಸಾಕಷ್ಟ ದೂರ ಹೋಗಿ, ಅಂದರೆ ನೀನು ಅಥವಾ ನೆರಳು ಇರುವ ಸ್ಥಳದವ-ರೆ-ಗೂ ಹೋಗಿ ‘ಹೋಗಿ ಬನ್ನಿ’ ಎಂದು ಕಳಿಸಿಕೊಟ್ಟು ಬರುತ್ತಾರೆ. ಇದು ಜನಪದ ಸಂಸ್ಕೃತಿಯ ಪ್ರತೀಕ. ಆದರೆ ಇಂದು ನಾಗರಿಕತೆಯ ನಾಗಾಲೋಟದಲ್ಲಿ ಮೈಮರೆತ ವಿದ್ಯಾವಂತ ಜನರು ಅತಿಥಿ ಅಭ್ಯಾಗತರು ಹೊರಟು ನಿಂತಾಗ, ಬಾಗಿಲವರೆಗಾದರೂ ಎದ್ದು ಬರದೆ ಕುಳಿತ ಕುರ್ಚಿಯಲ್ಲೇ ಹೋಗಿ ಬನ್ನಿ ಎಂಬಂತೆ ತಲೆಯಾಡಿಸಿಬಿಡುತ್ತಾರೆ. ಆದರೆ ‘ಸಾಕು ಹಾಕು’ ಎಂಬ ನುಡಿಗಟ್ಟು ನಂಟರಿಷ್ಟರು ಅತಿಥಿ ಅಭ್ಯಾಗತರನ್ನು ಮರ್ಯಾದೆಯಿಂದ ನಡೆಸಿಕೊಳ್ಳುವ ನಮ್ಮ ಜನಪದ ಸಂಸ್ಕೃತಿಗೆ ತೋರ್ಬೆರಳಾಗಿದೆ.
ಪ್ರ : ಈಗ ತಾನೇ ಅವರ್ನ ಕೆರೆಕೋಡಿವರೆಗೂ ಸಾಗು ಹಾಕ್ಕೊಂಡು ಹೋಗಿ ಕಳಿಸಿ ಬಂದೆವು.
೨೯೦೨. ಸಾಗು ಹುಯ್ = ಉದ್ದ ಮಾಡು, ಚಮ್ಮಟಿಗೆಯಿಂದ ಚಚ್ಚಿ ತೆಳುವಾಗಿಸು.
ಕಮ್ಮಾರರು ದಪ್ಪ ಕಬ್ಬಿಣದ ತುಂಡನ್ನು ಕುಲಮೆಯ ಒಲೆಯಲ್ಲಿಟ್ಟು ತಿದಿಯೊತ್ತಿ ಕೆಂಪಾಳ ಕಾಯಿಸಿ, ಅದನ್ನು ಇಕ್ಕುಳದಿಂದ ಹಿಡಿದೆತ್ತಿ ಅಡಿಗಲ್ಲಿನ ಮೇಲಿಟ್ಟು ಚಮ್ಮಟಿಗೆಯಿಂದ ಚಚ್ಚುತ್ತಾ ಅದನ್ನು ತೆಳುವಾಗಿಸುತ್ತಾನೆ. ಅದು ತೆಳುವಾಗಬೇಕಾದ ದೆಸೆಯಿಂದ ಉದ್ದವಾಗಿ ಸಾಗಿ ಹೋಗುತ್ತದೆ. ಮೇಲೆ ಬಂದಿರುವ “ಸಾಗಿ ಹೋಗು = ತೆಳ್ಳಗಾಗು” ಎಂಬ ನುಡಿಗಟ್ಟಿಗೆ ಕಮ್ಮಾರಸಾಲೆಯ ಕರ್ಮಾಚರಣೆಯ ಹಿನ್ನೆಲೆಯಿದೆ ಎನ್ನಬಹುದು.
ಪ್ರ : ಸೀದ ಹಂದಿಯಂತಿದ್ದ ಹುಡುಗ ಸಾಗು ಹುಯ್ದಂತಾಗಿದ್ದಾನೆ, ಸವೆದು ಹೋಗಿದ್ದಾನೆ.
೨೯೦೩. ಸಾಟಿ ಯಾಪಾರ ಮಾಡು = ವಸ್ತು ಅಥವಾ ಪ್ರಾಣಿಗಳ ವಿನಿಮಯದ ವ್ಯವಹಾರ ಮಾಡು.
(ಸಾಟಿ = ವಿನಿಮಯ ; ಯಾಪಾರ < ವ್ಯಾಪಾರ = ವ್ಯವಹಾರ)
ಪ್ರ : ಸಾಟಿ ಯಾಪಾರ ಮಾಡಿ ಕೋಟಿಗಟ್ಟಲೆ ಗಳಿಸಿದ.
೨೯೦೪. ಸಾಡೇಸಾತಾಗು = ಏಳುವರೆ ತಿಂಗಳಿಗೆ ಹುಟ್ಟಿದ ಅಶಕ್ತನಾಗು
(ಸಾಡೇ ಸಾತ್ = ಏಳುವರೆ (ತಿಂಗಳು) )
ಪ್ರ : ಸಾಡೇಸಾತ್ ಗಂಡನನ್ನು ಕಟ್ಕೊಂಡು ಪಡಬಾರದ ಪಾಡು ಪಡ್ತಾ ಅವಳೆ.
೨೯೦೫. ಸಾಣೆ ಹಿಡಿ = ಹರಿತಗೊಳಿಸು, ಚೂಪುಗೊಳಿಸು
(ಸಾಣೆ < ಶಾಣ = ಸಾಣೆ ಕಲ್ಲು ) ತಿರುಗುವ ಸಾಣೆ ಕಲ್ಲಿಗೆ ಚಾಕುವಿನ, ಚೂರಿಯ ಬಾಯನ್ನು ಹಿಡಿದು ಚೂಪುಗೊಳಿಸುವ ವಿಧಾನ ಈ ನುಡಿಗಟ್ಟಿಗೆ ಹಿನ್ನೆಲೆ
ಪ್ರ : ಚಾಕು ಚೂರಿಗಳಿಗೆ ಸಾಣೆ ಹಿಡಿದು ಚೂಪು ಮಾಡುವ ಹಾಗೆಯೇ ಅನೇಕರ ಬುದ್ಧಿಗೂ ಸಾಣೆ ಹಿಡಿದು ಚೂಪುಗೊಳಿಸಬೇಕಾಗಿದೆ.
೨೯೦೬. ಸಾಧುಗೊಳಿಸು = ಪಳಗಿಸು, ಅಗಡುತನವನ್ನು ಹೋಗಲಾಡಿಸು
ಪ್ರ : ಪ್ರೀತಿಯಿಂದ ಒಬ್ಬರನ್ನು ಸಾಧುಗೊಳಿಸಬಹುದೇ ವಿನಾ ದ್ವೇಷದಿಂದ ಸಾಧ್ಯವಿಲ್ಲ.
೨೯೦೭. ಸಾನನ್ನ ಕಟ್ಕೊಂಡು ಸಾಯು = ನಾಯಿಯಂಥ ಗಂಡನನ್ನು ಕಟ್ಕೊಂಡು ಕಷ್ಟಪಡು
(ಸಾನ < ಶ್ವಾನ = ನಾಯಿ) ಸಿಕ್ಕಿದ ಹೆಣ್ಣು ನಾಯಿಗಳ ಬೆನ್ನು ಹತ್ತಿ ಮೂಸುತ್ತಾ ಹೋಗುವ ಗಂಡುನಾಯಿಗಳ ಹಾಗೆ ಸಿಕ್ಕಿದ ಹೆಂಗಸರ ಬೆನ್ನು ಹತ್ತುವ ಗಂಡನ ವರ್ತನೆಯಿಂದ ಹೆಂಡತಿಗಾಗುವ ನೋವು ಈ ನುಡಿಗಟ್ಟಿಗೆ ಮೂಲ.
ಪ್ರ : ಸಾನನ್ನ ಕಟ್ಕೊಂಡು ಸಾಯೋದು ಹಣೇಲಿ ಬರೆದಿರುವಾಗ, ನನ್ನ ಅನ್ನ ಹುಟ್ಟಿ-ಸಿ-ಕೊಂ-ಡು ತಿಂತೇ-ನೆ.
೨೯೦೮. ಸಾಮೀಲಾಗು = ಭಾಗಿಯಾಗು
(ಸಾಮೀಲು < ಶಾಮೀಲು (ಹಿಂ) = ಭಾಗಿ)
ಪ್ರ : ಬೇರೆಯವರು ಸಾಮೀಲಾಗದೆ ಅವನೊಬ್ಬನೇ ಇಂಥ ಕೆಲಸಕ್ಕೆ ಕೈ ಹಾಕ್ತಿರಲಿಲ್ಲ.
೨೯೦೯. ಸಾಯಿಸಿ ಬಿಡು = ಹಿಂಸಿಸು, ಹೆಚ್ಚು ಸತಾಯಿಸು
ಪ್ರ : ಹೊತಾರೆಯಿಂದ ಕೊಡು ಕೊಡು ಅಂತ ಸಾಯಿಸಿಬಿಟ್ಟ.
೨೯೧೦. ಸಾಯಬೀಳ ಹೊಡಿ = ಸಕತ್ತು ಹೊಡಿ, ಹಣ್ಗಾಯಿ ನೀರ್ಗಾಯಿ ಮಾಡು
ಪ್ರ : ಸಾಯ ಬೀಳ ಹೊಡೆದು ಕಳಿಸಿದ್ದೀನಿ, ಇನ್ನು ಆ ಬಗ್ಗೆ ಬಾಯಿಬಿಟ್ಟರೆ ಕೇಳು
೨೯೧೧. ಸಾರವೇಸಾಗು = ಪಳಗು, ರೂಢಿಯಾಗು
(ಸಾರವೇಸು < Service = ಅನುಭವದಿಂದ ಪಳಗಿರು)
ಪ್ರ : ಕದ್ದು ಮೇದು ಸಾರ್ವೇಸಾಗಿರುವಾಗ ಒದ್ದರೆ ಸುಮ್ನಿರ್ತದ?
೨೯೧೨. ಸಾರಾಸಗಟು ನೀರಸ ತಿಗಟು ಎನ್ನದಿರು = ಅನಾಮತ್ತು ಅಪ್ರಯೋಜಕ ಎನ್ನದಿರು
(ಸಾರಾಸಗಟು = ಅನಾಮತ್ತು, ಪೂರ್ಣ; ತಿಗಟು > ತಿಗುಡು = ಸಿಪ್ಪೆ, ತೊಗಟೆ)
ಪ್ರ : ಯಾವುದನ್ನೇ ಆಗಲಿ ಸಾರಾಸಗಟು ನೀರಸ ತಿಗುಟು ಅನ್ನೋದು ಸ್ವಸ್ಥ ನಿಲುವಲ್ಲ.
೨೯೧೩. ಸಾರಿಸಿ ರಂಗೋಲೆ ಇಡು = ಏನೂ ಇಲ್ಲದಂತೆ ಮಾಡು, ನುಂಗಿ ನುಣ್ಣಗೆ ಮಾಡು
ಪ್ರ : ಗಯ್ಯಾಳಿ ಸೊಸೆ ಅತ್ತೆ ಮನೇನ ಸಾರಿಸಿ ರಂಗೋಲಿ ಇಕ್ಕಿಬಿಟ್ಳು.
೨೯೧೪. ಸಾರುತ್ತಾ ಹೋಗು = ಡಂಗುರ ಹೊಡೆಯುತ್ತಾ ಹೋಗು
ಪ್ರ : ಕುಟುಂಬದ ಮರ್ಯಾದೆ ಏನಾಗ್ತದೆ ಅಂತ ಯೋಚಿಸದೆ, ಲಗಾಡಿ ಹೆಂಗ್ಸು ಊರು ತುಂಬ ಸಾರುತ್ತಾ ಹೋದಳು
೨೯೧೫. ಸಾರೋಟು ಹೋಗು = ನಾಗಾಲೋಟದಲ್ಲಿ ಹೋಗು
(ಸಾರೋಟು < Chariot?)
ಪ್ರ : ನಾನೇನೂ ಮೆಲ್ಲಮೆಲ್ಲನೆ ಹೋಗಲಿಲ್ಲ, ಒಂದೇ ಉಸುರಿಗೆ ಸಾರೋಟು ಹೋದ್ಹಂಗೆ ಹೋದೆ.
೨೯೧೬. ಸಾಲಸೋಲ ಮಾಡಿ ಸಾಕು = ಭಂಗಬಡತನದಲ್ಲಿ ಕಷ್ಟಪಟ್ಟು ಬೆಳಸು
(ಸಾಲಸೋಲ < ಸಾಲಶೂಲ ಅಥವಾ ಸಾಲಸೋಲಹ್ = ಹಲವು ಹತ್ತು ಹದಿ-ನಾ-ರು ಸಾಲ ಮಾಡಿ)
ಪ್ರ : ಸಾಲಸೋಲ ಮಾಡಿ ಸಾಕಿದ್ದಕ್ಕೆ ನನ್ಮ-ಗ ಇಕ್ಕಿದ ನನಗೆ ಕೋಲ!
೨೯೧೭. ಸಾಲುಗಟ್ಟಿ ನಿಲ್ಲು = ಅಧಿಕಸಂಖ್ಯೆಯ ಜನ ನೆರೆದಿರು.
ಪ್ರ : ನನಗೆ ಬೇಕು ತನಗೆ ಬೇಕು ಅಂತ ಜನ ಸಾಲುಗಟ್ಟಿ ನಿಂತಿದ್ದರು
೨೯೧೮. ಸಾಲು ನೆಟ್ಟಗಿಲ್ಲದಿರು = ವಂಶ ಸರಿಯಿಲ್ಲದಿರು
(ಸಾಲು = ವಂಶ, ತಳಿ)
ಪ್ರ : ಗಾದೆ – ಸಾಲು ನೆಟ್ಟಗಿದ್ರೆ ಸೊಲ್ಲು ನೆಟ್ಟಗಿರ್ತದೆ.
೨೯೧೯. ಸಾಸ ಮಾಡು = ಶಕ್ತಿ ಮೀರಿ ಪ್ರಯತ್ನಿಸು
(ಸಾಸ < ಸಾಹಸ = ಹೋರಾಟ)
ಪ್ರ : ಮಗಳ ಮದುವೆ ನೀಸಬೇಕಾದ್ರೆ ಅಷ್ಟಿಷ್ಟು ಸಾಸ ಮಾಡಲಿಲ್ಲ.
೨೯೨೦. ಸಾಸೇವಿಕ್ಕು = ಆಶೀರ್ವದಿಸು, ತಲೆಯ ಮೇಲೆ ಅಕ್ಷತೆ ಹಾಕು
(ಸಾಸೇವು < ಸೇಸೇವು < ಸೇಸೆ < ಶೇಷ = ಅಕ್ಷತೆ (ಅರಿಶಿನ ಬೆರಸಿದ್ದು) ಸಾಮಾನ್ಯವಾಗಿ ಮದುವೆಯಲ್ಲಿ ಮುತ್ತೈದೆಯರು ಹೆಣ್ಣು ಗಂಡುಗಳಿಗೆ ಸಾಸೇವು ಇಕ್ಕುವ ಶಾಸ್ತ್ರ ಉಂಟು. ಎರಡು ಕೈಗಳಲ್ಲೂ ಅಕ್ಷತೆಯನ್ನು ತೆಗೆದುಕೊಂಡು ಮಂಡಿಯ ಮೇಲೆ, ಭುಜದ ಮೇಲೆ, ಕೊನೆಗೆ ತಲೆಯ ಮೇಲೆ ಅಕ್ಷತೆ ಹಾಕಿದಾಗ ಸಾಸೇವು ಇಕ್ಕುವ ಶಾಸ್ತ್ರ ಪೂರ್ಣವಾದಂತೆ. ತಲೆಯನ್ನು ಬಿಟ್ಟರೆ ಅದು ಸಾಸೇವಿಕ್ಕುವ ಶಾಸ್ತ್ರ ಎನ್ನಿಸಿಕೊಳ್ಳುವುದಿಲ್ಲ.
ಪ್ರ : ಗಾದೆ – ತಲೆ ಬಿಟ್ಟು ಸಾಸೇವಿಕ್ತಾರ?
೨೯೨೧. ಸ್ಯಾಟಸಿಂಗ್ರಿ ತೋರಿಸು = ಇಲ್ಲವೆನ್ನು, ಕೈಯೆತ್ತು
(ಸ್ಯಾಟ = ಶಪ್ಪ, ಮರ್ಮಾಂಗದ ಕೂದಲು ; ಸಿಂಗ್ರಿ < ಸಿಂಗರಿ < ಸಿಂಗಾರ = ಅಡಕೆಮರದ ಹೊಂಬಾಳೆ ; ಹೊಂಬಾಳೆ ಮರ್ಮಾಂಗದ ಕೂದಲ ಮುಸುಕಿಗೆ ಸಂಕೇತವಾಗಿದೆ)
ಪ್ರ : ಸಾಲದ ಹಣ ಕೇಳಿದ್ರೆ ಸ್ಯಾಟ ಸಿಂಗ್ರಿ ತೋರಿಸಿದ.
೨೯೨೨. ಸ್ಯಾನೆ ಹೆಚ್ಚಿಕೊಳ್ಳು = ಹೆಚ್ಚು ಅಹಂಕಾರ ಪಡು, ತನಗೆ ಎದುರಿಲ್ಲವೆಂಬ ಠೇಂಕಾರ ತೋರು
(ಸ್ಯಾನೆ < ಶ್ಯಾನೆ = ಬಹಳ; ಹೆಚ್ಚಿಕೊಳ್ಳು = ಮಿತಿಮೀರು)
ಪ್ರ : ಸ್ಯಾನೆ ಹೆಚ್ಚಿಕೊಂಡ್ರೆ ಅದಕ್ಕೆ ತಕ್ಕ ಬ್ಯಾನೆ ಅನುಭವಿಸ್ತಾನೆ.
೨೯೨೩. ಸ್ಯಾಪೇಲಿ ಸುತ್ಕೊಂಡು ಹೋಗು = ಮರಣ ಹೊಂದು
(ಸ್ಯಾಪೆ < ಚಾಪೆ = ಈಚಲುಗರಿಯಿಂದ ಹೆಣೆದ ದೊಡ್ಡದಾದ ಮಂದಲಿಕೆ)
ಮದುವೆಯಾದವರು ಸತ್ತರೆ ಚಟ್ಟದ ಮೇಲೆ ಕೊಂಡು ಹೋಗಿ ಹೂಳುತ್ತಾರೆ, ಇಲ್ಲವೆ ಸುಡುತ್ತಾರೆ. ಆದರೆ ಮದುವೆಯಾಗದವರು ಸತ್ತರೆ ಅಂಥವರನ್ನು ಚಟ್ಟದ ಮೇಲೆ ಕೊಂಡೊಯ್ಯುವುದಿಲ್ಲ. ಚಾಪೆಯಲ್ಲಿ ಸುತ್ತಿಕೊಂಡು ಹೋಗಿ ಮಣ್ಣುಮಾಡಿ ಬರುತ್ತಾರೆ. ಆದ್ದರಿಂದ ಈ ನುಡಿಗಟ್ಟು ಮದುವೆಯಾಗುವ ಮೊದಲೇ ನಿನ್ನ ಮಕ್ಕಳು ಸಾಯಲಿ ಎಂಬ ಶಾಪರೂಪದಲ್ಲಿದೆ.
ಪ್ರ : ನಿನ್ನ ಮಕ್ಕಳಿಗೆ ಆಪತ್ತು ಬಂದ ಸ್ಯಾಪೇಲಿ ಸುತ್ಕೊಂಡು ಹೋಗದಿದ್ರೆ ಕೇಳೆ, ನನ್ನದು ಮಚ್ಚನಾಲಗೆ.
೨೯೨೪. ಸ್ಯಾರೆಗಣ್ಣಲ್ಲಿ ಹೀರು = ಕಾಮತೃಷೆಯಿಂದ ನೆಟ್ಟಕಣ್ಣಲ್ಲಿ ನೋಡು
(ಸ್ಯಾರೆ < ಸೇರೆ = ಬೊಗಸೆಯಲ್ಲಿ ಅರ್ಧ, ಅಂಗೈಯಗಲ)
ಪ್ರ : ಸ್ಯಾರೆಗಣ್ಣಲ್ಲಿ ಹೀರೋ ಹಂಗೆ ಒಂದೇ ಸಮ ನೋಡಿದ, ನಾನು ಕ್ಯಾರೆ ಅನ್ನದಂಗೆ ಕ್ಯಾಕರಿಸಿ ಉಗಿದೆ.
೨೯೨೫. ಸ್ವಾಟೆ ತಿವಿ = ಮೂತಿಗೆಟ್ಟು
(ಸ್ವಾಟೆ < ಸೋಟೆ = ಕಟವಾಯಿ, ಕೆನ್ನೆ)
ಪ್ರ : ಗಾದೆ – ತೀಟೆ ತೀರಿದ ಮೇಲೆ ಸ್ವಾಟೆ ತಿವಿದ.
೨೯೨೬. ಸಿಕ್ಕಾಪಟ್ಟೆ ರೇಗು = ಹೆಚ್ಚು ಸಿಟ್ಟುಗೊಳ್ಳು, ಹಲವಾರು ನೆಪಗಳನ್ನೆತ್ತಿ ಕೋಪಕಾರು
(ಸಿಕ್ಕಾಪಟ್ಟೆ < ಸಿಕ್ಕಾಬಟ್ಟೆ = ಯಾವ ದಾರಿ ಸಿಕ್ಕಿದರೆ ಆ ದಾರಿಯಲ್ಲಿ ಅಥವಾ ಯಾವ ನೆಪ ಸಿಕ್ಕಿದರೆ ಆ ಮೂಲಕ ಎಂದರ್ಥ. ‘ಕಂಡಾಬಟ್ಟೆ ರೇಗು’ ಎಂಬ ನುಗಿಗಟ್ಟೂ ಇದೇ ಅರ್ಥವನ್ನೊಳಗೊಂಡಿದೆ)
ಪ್ರ :ಮೈದುಂಬಿದವನ ಹಾಗೆ ಸಿಕ್ಕಾಪಟ್ಟೆ ರೇಗಾಡಿ, ಕಂಡಾಬಟ್ಟೆ ಕೂಗಾಡಿ ಬುಸುಗರೀತಾ ಕೂತವ್ನೆ, ಈಗ ಹಂಗಲ್ಲ ಹಿಂಗೆ ಅಂತ ಹೇಳೋಕೆ ಹೋಗಬ್ಯಾಡ.
೨೯೨೭. ಸಿಕ್ಕಿಗೆ ಸಿಕ್ಕು = ಕಷ್ಟಕ್ಕೆ ತುತ್ತಾಗಿ ಒದ್ದಾಡು
(ಸಿಕ್ಕು = ಗೋಜಲು)
ಪ್ರ : ನಾನೇ ಸಿಕ್ಕಿಗೆ ಸಿಕ್ಕೊಂಡು ಒದ್ದಾಡ್ತಾ ಇದ್ದೀನಿ, ಬೇರೆಯವರ ಸಿಕ್ಕು ಏನು ಬಿಡಿಸಲಿ?
೨೯೨೮. ಸಿಕ್ಕಿದೋರಿಗೆ ಸೀರುಂಡೆಯಾಗು = ಬಲಾಢ್ಯರ ವಶವಾಗು, ಬಡಬಗ್ಗರಿಗೆ ಅನ್ಯಾಯವಾಗು
(ಸೀರುಂಡೆ = ಸಿಹಿ ತಿಂಡಿ) ದೇವಸ್ಥಾನಗಳಲ್ಲಿ ಅಥವಾ ಜಾತ್ರೆಗಳಲ್ಲಿ ಪ್ರಸಾದ ವಿನಿಯೋಗ ಆಗುವ ಸಂದರ್ಭದಲ್ಲಿ ಬಲಶಾಲಿಗಳು ನುಗ್ಗಿ ಪ್ರಸಾದವನ್ನು ಮೂರುನಾಲ್ಕು ಸಾರಿ ಈಸಿಕೊಂಡು ತಿಂದು ತೇಗುತ್ತಾರೆ. ಆದರೆ ಅಶಕ್ತರು ಹಾಗೆ ಆಕ್ರಮಣದಿಂದ ಮುನ್ನುಗ್ಗಿ ಈಸಿಕೊಳ್ಳಲಾಗದೆ ವಂಚಿತರಾಗುತ್ತಾರೆ. ಆದ್ದರಿಂದ ದೇವರ ಪ್ರಸಾದವಾದ ‘ಸೀರುಂಡೆ’ ಎಲ್ಲರಿಗೂ ದಕ್ಕುವುದಿಲ್ಲ. ‘ಬಲಾಢ್ಯೋ ಪೃಥಿವಿ’ ಎಂಬುದರ ಅರ್ಥವನ್ನು ಈ ನುಡಿಗಟ್ಟು ಒಳಗೊಂಡಿದೆ.
ಪ್ರ : ಬಡವನ ಆಸ್ತಿ ಸಿಕ್ಕಿದೋರಿಗೆ ಸೀರುಂಡೆ ಆಯ್ತು.

೨೯೨೯. ಸಿಕ್ಕು ಬಿಡಿಸು = ಸಮಸ್ಯೆ ಬಗೆ ಹರಿಸು
(ಸಿಕ್ಕು < ಚಿಕ್ಕು(ತ) = ಗೋಜಲು, ಗಂಟು) ತಲೆಗೂದಲು ತಿರಿಗಟ್ಟಿಕೊಂಡು ಗಂಟುಗಂಟಾಗಿದ್ದರೆ ಸಿಕ್ಕುಗಟ್ಟಿದೆ ಬಿಡಿಸು ಎನ್ನುತ್ತಾರೆ. ವಾಚಣಿಗೆಯಿಂದ ಆ ಸಿಕ್ಕನ್ನು ಬಿಡಿಸಲಾಗುತ್ತದೆ.
ಪ್ರ : ಈಗ ಸಂಸಾರದಲ್ಲಿ ಉಂಟಾಗಿರೋ ಸಿಕ್ಕು ಬಿಡಿಸದಿದ್ರೆ ಎಲ್ಲರಿಗೂ ನೆಕ್‌ನೀರೇ ಗತಿ.
೨೯೩೦. ಸಿಗಿದರೆ ಎರಡಾಳಾಗು = ತುಂಡು ತೊಲೆಯಂತಿರು
(ಆಳು – ಮನುಷ್ಯ)
ಪ್ರ : ಸಿಗಿದರೆ ಎರಡಾಳಾಗೋ ಹಂಗಿದ್ದಾನೆ, ಮೈ ಬಗ್ಗಿಸಿ ದುಡಿಯೋಕೇನು ಬಂದದೆ ದಾಡಿ?
೨೯೩೧. ಸಿಗಿದು ಊರಬಾಗಲಿಗೆ ತೋರನ ಕಟ್ಟು = ಸಾರ್ವಜನಿಕ ಪ್ರದರ್ಶನಕ್ಕಿಡು
(ಸಿಗಿ = ಸೀಳು, ಹೋಳು ಮಾಡು)
ಪ್ರ : ಅವನ ಸಂಗ ಮಾಡಿದ್ರೆ, ನಿನ್ನ ಸಿಗಿದು ಊರಬಾಗಿಲಿಗೆ ತೋರಣ ಕಟ್ಟಿಬಿಡ್ತೀನಿ.
೨೯೩೨. ಸಿಡಸಿಡಾ ಅನ್ನು = ಕಿರಿಕಿರಿಗೊಳ್ಳು, ಕೀರನಂತಾಡು
ಪ್ರ : ಯಾಕೋ ಕಾಣೆ, ಹೊತ್ತುರೆಯಿಂದ ಅಮ್ಮಾವರು ಸಿಡಸಿಡಾ ಅಂತ ಇದ್ದಾರೆ.
೨೯೩೩. ಸಿಡು-ಗು-ಟ್ಟು = ಅಸ-ಹ-ನೆ-ಯಿಂ-ದ ದುಮು-ಗು-ಟ್ಟು
ಪ್ರ : ಎದ್ದಾ-ಗ-ಲಿಂ-ದ ಒಂದೇ ಸಮ ಸಿಡ-ಗು-ಟ್ತಾ ಇದ್ದೀ-ಯ-ಲ್ಲ ಆದ-ದ್ದಾ-ದರೂ ಏ-ನು?
೨೯೩೪. ಸಿಡಿಯಾಡಿಸು = ಚಿತ್ರಹಿಂಸೆ ಕೊಡು
ಜನಜೀವನದಲ್ಲಿ ಸಿಡಿಯಾಡುವ ಒಂದು ಆಚರಣೆ ಇತ್ತು. ಈಗಲೂ ಕೆಲವು ಕಡೆ ಇರಬಹುದು. ಹರಕೆ ಹೊತ್ತುಕೊಂಡವರು ತಿರುಗುರಾಟವಾಳಕ್ಕೆ ಇಳಿಬಿಟ್ಟಿರುವ ಕಬ್ಬಿಣದ ಕೊಕ್ಕೆಯಿಂದ ವ್ಯಕ್ತಿಯ ಬೆನ್ನ ಹುರಿಗೆ ಚುಚ್ಚಿ ತಗಲು ಹಾಕುತ್ತಾರೆ. ತಿರುಗುವ ರಾಟವಾಳದ ಕೊಕ್ಕೆಯಲ್ಲಿ ನೇತುಬಿದ್ದಿರುವ ವ್ಯಕ್ತಿ ನೀರಿನಲ್ಲಿ ಮೀನು ಈಜುವಂತೆ ಅಂತರಾಟದ ಗಾಳಿಯಲ್ಲಿ ಈಜತೊಡಗುತ್ತಾನೆ. ರಾಟವಾಳ ನಿಂತ ಮೇಲೆ, ಬೆನ್ನ ಹುರಿಗೆ ಚುಚ್ಚಿ ತಗಲು ಹಾಕುತ್ತಾರೆ. ತಿರುಗುವ ರಾಟವಾಳದ ಕೊಕ್ಕೆಯಲ್ಲಿ ನೇತುಬಿದ್ದಿರುವ ವ್ಯಕ್ತಿ ನೀರಿನಲ್ಲಿ ಮೀನು ಈಜುವಂತೆ ಅಂತರಾಟದ ಗಾಳಿಯಲ್ಲಿ ಈಜತೊಡಗುತ್ತಾನೆ. ರಾಟವಾಳ ನಿಂತ ಮೇಲೆ, ಬೆನ್ನ ಹುರಿಗೆ ಹಾಕಿದ್ದ ಕೊಕ್ಕೆಯನ್ನು ತೆಗೆದು ದೇವರ ಭಂಡಾರವನ್ನು ಅಲ್ಲಿಗೆ ಹಚ್ಚುತ್ತಾರೆ. ರಕ್ತ ಬರದೆ ಬೇಗ ಮಾಯುತ್ತದೆ ಎಂದು ಜನರ ನಂಬಿಕೆ. ಏನೇ ಆಗಲಿ ಇನ್ನೂ ಇಂಥ ಆಚರಣೆಗಳು ನಡೆಯುತ್ತಿರುವುದು ‘ಅಪ್ಪ ತೋಡಿದ ಬಾವಿ ಅಂತ ಉಪ್ಪು ನೀರು ಕುಡಿಯುವ’ ಮನೋಧರ್ಮವನ್ನು ಸೂಚಿಸುತ್ತವೆ.
ಪ್ರ : ನೀನೇ ಸಿಡಿಯಾಡಲು ಒಪ್ಪದಿದ್ರೆ, ನಾವೇ ಸಿಡಿಯಾಡಿಸ್ತೇವೆ – ಬಡಿದು ಭಕ್ತನ್ನ ಮಾಡಿ, ಹಿಡಿದು ಲಿಂಗ ಕಟ್ಟಿದರು ಅನ್ನೋ ಹಂಗೆ
೨೯೩೫. ಸಿಡಿದಲೆ ಎತ್ತು = ತಲೆ ಕತ್ತರಿಸು
ಇದು ಒಂದು ಕ್ರೂರ ಪದ್ಧತಿ. ಹಿಂದೆ ಸಮಾಜದಲ್ಲಿ ಇದ್ದದ್ದು. ಒಂದು ಗಳುವನ್ನು ಭೂಮಿಯೊಳಕ್ಕೆ ನೆಟ್ಟು, ಅದರ ತುದಿಯನ್ನು ಬಗ್ಗಿಸಿ, ಸ್ವಲ್ಪ ಅಂತರದಲ್ಲಿ ನೆಲದ ಮೇಲೆ ಕೂರಿಸಲಾದ ಅಪರಾಧಿ ವ್ಯಕ್ತಿಯ ತಲೆಗೂದಲಿಗೆ ಕಟ್ಟುತ್ತಾರೆ. ಅವನ ತಲೆ ಕತ್ತರಿಸಿದಾಗ ಬಾಗಿದ ಗಳು ನೆಟ್ಟಗೆ ನಿಂತುಕೊಳ್ಳುತ್ತದೆ. ಕತ್ತರಿಸಿದ ತಲೆ ಗಳುವಿನ ತುದಿಯಲ್ಲಿ ಬಾವುಟದಂತೆ ನೇತಾಡುತ್ತದೆ. ಇಂಥ ಬರ್ಬರವಾದ ಆಚರಣೆ ಹಿಂದೆ ಇದ್ದುದರ ಪಳೆಯುಳಿಕೆ ಈ ನುಡಿಗಟ್ಟು.
ಪ್ರ : ನನ್ನೆದುರು ಸೆಟೆದು ನಿಂತು ಸೆಣಸಿದ್ರೆ, ನಿನ್ನ ಸಿಡಿದಲೆ ಎತ್ತಿಬಿಡ್ತೀನಿ, ಹುಷಾರ್ !
೨೯೩೬. ಸಿಡಿದು ಅವಲಾಗು = ಬಹಳ ಚೂಟಿಯಗಿರು
(ಅವಲು = ಕಾಳನ್ನು ಬಾಣಲಿಯಲ್ಲಿ ಹುರಿದಾಗ ಅದುಉ ಬಾಯಿಬಿಡುತ್ತದೆ. ಹಾಗೆ ಬಾಯಿ ಬಿಡುವಾಗ ಅದು ಬಾಣಲಿಯಿಂದ ಸಿಡಿದು ಬೀಳುತ್ತದೆ. ಆ ಹಿನ್ನೆಲೆಯಿಂದ ಮೂಡಿದ ನುಡಿಗಟ್ಟು ಇದು)
ಪ್ರ : ನೋಡೋಕೆ ಚೋಟುದ್ದ ಇದ್ದರೂ ಸಿಡಿದು ಅವಲಾಗ್ತಾನೆ ಹೈದ.
೨೯೩೭. ಸಿಡಿದು ಸೀಗೆಕಾಯಾಗು = ಎಗರಿ ಬೀಳು, ಸೀಗೆಕಾಯಿ ಒಣಗಿದ ಮೇಲೆ ಸಿಡಿದು ಬೀಳು
ಪ್ರ : ಬೇರೆಯವರ ಮಕ್ಕಳು ಸಿಡಿದು ಸೀಗೆಕಾಯಿ ಆಗುವಾಗ, ನೀನು ಅಪ್ಪುಗೈ ಕಟ್ಕೊಂಡು ಬೆಪ್ಪು ತಕ್ಕಡಿ ಇದ್ದಂಗಿದ್ರೆ ಸರೀಕರ ಮುಂದೆ ಬದುಕೋಕಾಗ್ತದ?
೨೯೩೮. ಸಿಡೆ ಬೀಳು = ಗುಂಪಿನಿಂದ ಬೇರೆಯಾಗು, ಚಿಲ್ಲರೆಗೊಂಡು ಒಂಟಿಯಾಗು,
(ಸಿಡೆ < ಸಿಡಿ = ಎಗರು, ನೆಗೆ)
ಪ್ರ : ಗಾದೆ – ಸೂಕ್ತಿ – ಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು.
೨೯೩೯. ಸಿದಿಗೆ ಏರು = ಚಟ್ಟ ಏರು, ಮರಣ ಹೊಂದು
(ಸಿದಿಗೆ < ಶಿಬಿಕೆ < ಶಿವಿಗೆ = ಚಟ್ಟ, ಮೇನೆ)
ಪ್ರ : ತದಿಗೆ ದಿವಸ ನಿಮ್ಮಪ್ಪ ಸಿದಿಗೆ ಏರಿದ.
೨೯೪೦. ಸಿದುಗೆ ಬುರುಡೆಯಂತಾಡು = ಇ‌ದ್ದಕಡೆ ಇರದಿರು, ಅದೂ ಇದೂ ಬೆದ-ಕುತ್ತಾ ಇರು.
(ಸಿದುಗೆ ಬುರುಡೆ < ಸಿದುಗುವ ಬುರುಡೆ ; ಸಿದುಗು = ಹುಡುಕು ; ಸಿದುಗೆ ಬುರುಡೆ = ಪಾತಾಳಗರಡಿ, ಬಾವಿಯೊಳಕ್ಕೆ ಬಿದ್ದ ಬಿಂದಿಗೆಗಳನ್ನು ಹುಡುಕಿ ಮೇಲಕ್ಕೆ ತೆಗೆಯುವ ಸಾಧನ) ಸಿದ್ದಿಗೆ ಎಂದರೆ ಚರ್ಮದ ಚೀಲ, ಅದರಲ್ಲಿ ತುಪ್ಪ, ಎಣ್ಣೆ, ಕ್ರಮೇಣ ಹೆಂಡ ಸಾಗಿಸುತ್ತಿರಬೇಕು. ಆದ್ದರಿಂದ ಸಿದ್ದಿಗೆ ಬುರುಡೆ ಎಂಬುದು ಕ್ರಮೇಣ ಸಿದುಗೆ ಬುರುಡೆ ಆಗಿರಬಹುದೆ ? ಆದರೆ ಸಿದುಗು ಎಂಬುದಕ್ಕೆ ಹುಡುಕು ಎಂಬ ಅರ್ಥ ಇರುವುದರಿಂದ ಸಿದ್ದಿಗೆಯಿಂದ ಸಿದುಗೆ ಆಗಿದೆ ಎಂದು ಹೇಳಲು ಕಷ್ಟವಾಗುತ್ತದೆ. ಇದ್ದ-ಕ-ಡೆ ಇರ-ದೆ ಎಲ್ಲಾ ಕಡೆ ತೂರಾ-ಡು-ವ, ನೆ-ಗೆ-ದಾ-ಡು-ವ ಸಣ್ಣ ಹಕ್ಕಿ-ಗೆ ಬುರು-ಡೆ, (> -ಬು-ಲ್ಡೆ) ಹಕ್ಕಿ ಎನ್ನು-ತ್ತಾ-ರೆ. ಆದ್ದ-ರಿಂ-ದ ಎಲ್ಲ ಕಡೆ ಹುಡು-ಕಾ-ಡು-ವ ಬುದ್ಧಿ (ಸಿದು-ಗು- ಬುದ್ಧಿ) ಎಂಬು-ದೇ ಸಿದು-ಗು ಬುರು-ಡೆ ಆಗಿ-ರ-ಬ-ಹು-ದೆ? ಚಿಂತ-ನೆ ಅಗ-ತ್ಯ
ಪ್ರ : ಮದುವೆ ಮನೇಲಿ ಈ ಹುಡುಗ ಒಳ್ಳೆ ಸಿದುಗೆಬುರುಡೆ ಆಡಿದಂಗೆ ಆಡಿದ.
೨೯೪೧. ಸಿರುಕಲಿಗೆ ಸಿಕ್ಕು = ಇಕ್ಕಟ್ಟಿಗೆ ಸಿಕ್ಕು
(ಸಿರುಕಲು = ಇರುಕಲು, ಇಕ್ಕಟ್ಟಾದ ಜಾಗ)
ಪ್ರ :ಸಿರುಕಲಿಗೆ ಸಿಕ್ಕಿಕೊಂಡ ಹಾವನ್ನು ಇರುವೆಗಳು ಎಲುಬುಗೂಡಾಗಿಸಿದವು.
೨೯೪೨. ಸಿಲ್ಕು ತೀರಿಸು = ಬಾಕಿ ಕೊಡು
(ಸಿಲ್ಕು < ಶಿಲ್ಕು (ಹಿಂ) = ಬಾಕಿ)
ಪ್ರ :ಸಿಲ್ಕು ತೀರಿಸಿ ನಿನ್ನ ವಸ್ತೂನ ತಗೊಂಡು ಹೋಗು.
೨೯೪೩. ಸಿಳ್ಳೆ ಹಾಕ್ಕೊಂಡು ತಿರುಗು = ಅಹಂಕಾರದಿಂದ ಅಲೆ, ಪೋಲಿ ತಿರುಗು
(ಸಿಳ್ಳೆ = ಬಾಯಿಂದ ಹೊರಡುವ ಒಂದು ಬಗೆಯ ಸದ್ದು) ಬಾಯಿಗೆ ಬೆರಳಿಟ್ಟು ಉಸಿರುಕಟ್ಟಿ ಸಿಳ್ಳೆ ಹಾಕುವುದುಂಟು. ಬೆರಳನ್ನು ಇಡದೆಯೇ ಸಿಳ್ಳೆ ಹಾಕುವುದುಂಟು. ಈ ಸಿಳ್ಳೆ ಒಬ್ಬರನ್ನು ಕರೆಯಲು, ಒಬ್ಬರಿಗೆ ಸೂಚನೆ ನೀಡು ಅಥವಾ ಒಬ್ಬರನ್ನು ಕಿಚಾಯಿಸಲು ಬಳಕೆಯಾಗಬಹುದು. ಮನೆಯೊಳಗೆ ಸಿಳ್ಳೆ ಹಾಕಬಾರದು ಎಂಬ ಜನಪದ ನಂಬಿಕೆ ಇದೆ.
ಪ್ರ : ಅವನಿಗೆ ಎದುರು ಯಾರೂ ಇಲ್ಲ, ಹಾದಿಬೀದೀಲಿ ಸಿಳ್ಳೆ ಹಾಕ್ಕೊಂಡು ತಿರುಗ್ತಾನೆ.
೨೯೪೪. ಸಿಳ್ಳೆ ಕ್ಯಾತನಂತಿರು = ಒಣಗಿಕೊಂಡರು, ಕೋಡಂಗಿಯಂತಿರು
(ಸಿಳ್ಳೆ < ಚಿಳ್ಳೆ = ಸಣ್ಣ, ಒಣಕಲ) ಸೂತ್ರದ ಬೊಂಬೆಯಾಟದಲ್ಲಿ ಸಿಳ್ಳೆಕ್ಯಾತ ಎಂಬ ಪಾತ್ರ ಬರುವುದುಂಟು. ಅದು ಯಕ್ಷಗಾನದಲ್ಲಿ ಬರುವ ಹನುಮನಾಯಕ ಅಥವಾ ಬಯಲುಸೀಮೆಯ ಬಯಲಾಟಗಳಲ್ಲಿ ಬರುವ ಕೋಡಂಗಿ ಪಾತ್ರಕ್ಕೆ ಸಮಾನವಾದದ್ದು. ಇಡೀ ನಾಟಕದ ಪಾತ್ರಗಳ ಪರಿಚಯಕ್ಕೆ, ಹಾಸ್ಯ ಉಕ್ಕಿಸುವುದಕ್ಕೆ ಈ ಪಾತ್ರ ಪ್ರಮುಖ ಮಾಧ್ಯಮ ಎನ್ನಬಹುದು. ಸಿಳ್ಳೆಕ್ಯಾತ ಎಂಬುದೇ ಉಚ್ಚಾರಣೆಯಲ್ಲಿ ಕಿಳ್ಳೆಕ್ಯಾತ ಆಗಿ, ಆ ಸೂತ್ರದ ಬೊಂಬೆಯಾಟದ ವೃತ್ತಿಯವರಿಗೆ ಕಿಳ್ಳೆಕ್ಯಾತರು ಎಂಬ ಹೆಸರು ಬರಲು ಕಾರಣವಾಗಿದೆ.
ಪ್ರ : ಸಿಳ್ಳೆ ಕ್ಯಾತನಂಥ ಗಂಡನಿಗೂ ಮರದ ದಿಮ್ಮಿಯಂಥ ಹೆಂಡ್ರಿಗೂ ಬ್ರಹ್ಮಗಂಟು ಬಿತ್ತಲ್ಲೋ ಗೋವಿಂದ !
೨೯೪೫. ಸೀಕಲಾಗು = ಬತ್ತಿ ಹೋಗು
(ಸೀಕಲು < ಚೀಕಲು = ಬತ್ತಿದ ಕಾಳು, ಗುಳ್ಳೆ)
ಪ್ರ : ಬಾಕಲು ಹಿಡಿಸಲಾರದಂಥವಳಿಗೆ ಸೀಕಲು ಗಂಡ ಸಿಗಬೇಕ?
೨೯೪೬. ಸೀಕುಪಾಕು ತಿಂದು ಕಾಲ ಹಾಕು = ಭಂಗಬಡತನದ ಕಷ್ಟದ ಜೀವನ ನಡೆಸು
(ಸೀಕು = ತಳ ಹೊತ್ತಿದ ಕರಿಕು; ಕಾಲ ಹಾಕು = ಜೀವನ ಸಾಗಿಸು)
ಪ್ರ : ನಾವು ಸೀಕು ಪಾಕು ತಿಂದು ಕಾಲ ಹಾಕಿದೆವು, ಈಗಿನ ಮಕ್ಕಳು ‘ಒಳಗಿಲ್ಲ ಅಂದ್ರೆ ದೊಗೆದಿಕ್ಕು’ ಅಂತಾರೆ.
೨೯೪೭. ಸೀತಾಳ ಪಾತಾಳವಾಗು = ಹೆಚ್ಚು ಸೀತವಾಗು, ತಣ್ಣಗೆ ಕೊರೆಯುತ್ತಿರು
(ಸೀತಾಳ < ಶೀತಲ (ಸಂ) = ತಂಪು ; ಸೀತಾಳ ಪಾತಾಳ = ಶೈತ್ಯದ ಆಧಿಕ್ಯ)
ಪ್ರ : ಮೈಯೆಲ್ಲ ಸೀತಾಳಪಾತಾಳವಾಗಿದೆ, ಒಲೆ ಮುಂದೆ ಕುಳಿತು ಬೆಂಕಿ ಕಾಯಿಸಿಕೊ.
೨೯೪೮. ಸೀದ ಹಂದಿಯಂತಿರು = ಧಡೂತಿಯಾಗಿರು, ಪಟ್ಟೆಂದು ಒಡೆದುಕೊಳ್ಳುವಂತೆ ಊದಿಕೊಂಡಿರು
(ಸೀಯು = ಬೆಂಕಿಯ ಶಾಖದಲ್ಲಿ ಹಿಡಿದು ಮೈಮೇಲಿನ ಪುಕ್ಕವನ್ನು ಹೆರೆ) ಹಂದಿಯನ್ನು ಕುಯ್ದ ಮೇಲೆ ಬೆಂಕಿ ಹಾಕಿ ಅದನ್ನು ಸೀಯುತ್ತಾರೆ. ಆಗ ಚರ್ಮದ ಸುಕ್ಕು ಹೋಗಿ, ತಗ್ಗು ಉಬ್ಬುಗಳು ಒಂದಾಗಿ ಊದಿಕೊಳ್ಳುತ್ತದೆ. ಹಾಗೆಯೇ ಕೋಳಿಯನ್ನು ಸೀಯುತ್ತಾರೆ. ತಗ್ಗು ಉಬ್ಬುಗಳು ಇಲ್ಲವೇ ಇಲ್ಲ ಎನ್ನುವಂತೆ ಸಮತಟ್ಟಾಗಿ ಊದಿಕೊಳ್ಳುತ್ತದೆ. ಆ ಹಿನ್ನೆಲೆಯಿಂದ ಮೂಡಿದ ನುಡಿಗಟ್ಟಿದು.
ಪ್ರ : ಸೀದ ಹಂದಿಯಂಗವನೆ, ದುಡಿದುಕೊಂಡು ತಿನ್ನೋಕೆ ಅವನಿಗೇನು ದಾಡಿ?
೨೯೪೯. ಸೀದು ಬಿಡು = ಮಾರಿ ಬಿಡು, ವಿಕ್ರಯಿಸು
(ಸೀಯು ಎಂಬುದಕ್ಕೆ ಸುಡು ಎಂಬ ಅರ್ಥವಿದ್ದರೂ ಮಾರು ಎಂಬ ಅರ್ಥದಲ್ಲಿಯೂ ಬಳಸುತ್ತಾರೆ)
ಪ್ರ : ಶಿವಗಂಗೆ ದನಗಳ ಜಾತ್ರೆಗೆ ಹೋಗಿ, ಎತ್ತುಗಳನ್ನು ಹೋದಷ್ಟಕ್ಕೆ ಸೀದು ಬಂದುಬಿಟ್ಟೆ.
೨೯೫೦. ಸೀಬು ಎಬ್ಬಿಸು = ಗಾರು ಮಾಡು, ಹದಗೆಡಿಸು.
(ಸೀಬು = ಸಿಬರು, ಸಿವುರು) ಮಾತಿಗೆ ಮಾತು ಅಣಿ ಬಿದ್ದರೆ, ಸಾಮರಸ್ಯ ಕುದುರುವುದಿಲ್ಲ. ಒಂದು ಸಿಬರನ್ನು ಬಾಚಿಯಿಂದ ಕೆತ್ತಿ ನಯಗೊಳಿಸಬೇಕೆಂದು ಹೊರಟರೆ ಮತ್ತೊಂದು ಸಿಬರು ಏಳುತ್ತದೆ. ಆದ್ದರಿಂದಲೇ ‘ಕೆತ್‌ಕೆತ್ತ’ ಎಂಬ ಗಾದೆ ಹುಟ್ಟಿರುವುದು. ಮಾತಿಗೆ ಎದುರು ಮಾತಿನ ಕೆತ್ತನೆಯಿಂದ ಸೀಬು ಏಳುತ್ತದೆ ಎಂಬುದು ಈ ನುಡಿಗಟ್ಟಿನ ಅರ್ಥ. ಇದಕ್ಕೆ ಮೂಲ ಮರಗೆಲಸ ಮಾಡುವ ಬಡಗಿಯ ವೃತ್ತಿ.
ಪ್ರ : ಇವನೊಬ್ಬ, ನಯಸ್ಸು ಮಾಡ್ತೀನಿ ಅಂತ ಹೋಗಿ, ಸೀಬು ಎಬ್ಬಿಸಿದ.
೨೯೫೧. ಸೀಬು ಹೆಟ್ಟಿಕೊಳ್ಳು = ಸಿವುರು ಚುಚ್ಚಿಕೊಳ್ಳು
(ಸೀಬು = ದಸಿ)
ಪ್ರ : ಗಾದೆ – ಹುಡುಗ ಗಂಡ ಬಟ್ಟೆಗೆ ತೊಡರಿಕೊಂಡ ಊಬು
ತುಡುಗ ಮಿಂಡ ಮೈಗೆ ಹೆಟ್ಟಿಕೊಂಡ ಸೀಬು
೨೯೫೨. ಸೀಬಿ ಬಂದಂಗೆ ಬರು = ಸಪ್ಪಳವಾಗದಂತೆ ಬರು
(ಸೀಬಿ = ಬೆಕ್ಕು) ಬೆಕ್ಕಿನ ಅಂಗಾಲಲ್ಲಿ ಮೆತ್ತೆ ಇರುವುದರಿಂದ ನಡೆದು ಬಂದರೂ ಸದ್ದಾಗುವುದಿಲ್ಲ. ಸದ್ದಾದರೆ ಇಲಿಗಳು ಓಡಿ ಹೋಗುತ್ತವೆ ಎಂದು ದೇವರು ಅದಕ್ಕನುಗುಣವಾದ ಪಾದವನ್ನು ಸೃಷ್ಟಿಸಿದ್ದಾನೆ. ‘ಸೊರಗಿ ಹೋದ ಸೀಬಿ ಕಂಡು, ಎರಗಿ ಬಂದವಂತೆ ಇಲಿದಂಡು’ ಎಂಬ ಗಾದೆ ಸೀಬಿ ಎಂದರೆ ಬೆಕ್ಕು ಎಂಬುದನ್ನು ರುಜುವಾತು ಪಡಿಸುತ್ತದೆ. ಅಷ್ಟೆ ಅಲ್ಲ ಬೆಕ್ಕನ್ನು ಕರೆಯಬೇಕಾದರೆ ‘ಬಾ, ಸೀಬಿ, ಸೀಬಿ’ ಎಂದೇ ಕರೆಯುವುದು – ಹೇಗೆ ನಾಯಿಯನ್ನು ಕುರೊಕುರೊ ಎಂದು ಕರೆಯುತ್ತಾರೋ, ಕೋಳಿಗಳನ್ನು ‘ಕೊಕೊ’ ಎಂದು ಕರೆಯುತ್ತಾರೋ ಹಾಗೆ. ಏಕೆಂದರೆ ಕುರಕುರ ಎಂದರೆ ನಾಯಿ, ಕೋಕ ಎಂದರೆ ಕೋಳಿ. ಹಾಗೆ ಸೀಬಿ ಎಂದರೆ ಬೆಕ್ಕು. ಆದ್ದರಿಂದ ಆ ಹೆಸರು ಹಿಡಿದು ಸಾಮಾನ್ಯವಾಗಿ ಜನ ಕೂಗುತ್ತಾರೆ.
ಪ್ರ : ಗಂಡ ಇಲ್ಲೇನೋ ಮಾಡಬಾರದ್ದು ಮಾಡ್ತಾನೆ ಅಂತ ಒಳ್ಳೆ ಸೀಬಿ ಬಂದಂಗೆ ಬಂದೆಯಲ್ಲೇ ಮಾಯಾಂಗನೆ.
೨೯೫೩. ಸೀಮೆ ಮುಳುಗಿಸು = ದೇಶ ಕೆಡಿಸು
(ಸೀಮೆ = ದೇಶ, ಪ್ರದೇಶ, ರಾಜ್ಯ)
ಪ್ರ : ಸೀಮೆ ಮುಳುಗಿಸೋನ್ನ ನಂಬಿದ್ರೆ ನೀನು ಕೆಟ್ಟೆ.
೨೯೫೪. ಸೀಯಾಳದಂತಿರು = ಎಳೆ ನೀರಿನ ತಿಳಿಯಂತೆ ಹದವಾಗಿರು, ನಿರ್ಮಲ ಮನಸ್ಸಿನಿಂದ ಕೂಡಿರು
(ಸೀಯಾಳ = ಎಳೆನೀರು)
ಪ್ರ : ಸೀಯಾಳದಂಥ ಗಂಡನಿಗೆ ಬಲಿತು ಕೊಬ್ಬರಿಯಾದ ಗಯ್ಯಾಳಿ ಹೆಂಡ್ರು
೨೯೫೫. ಸೀರುಡಿಕೆ ಮಾಡಿಕೊಳ್ಳು = ಮರುಮದುವೆ ಮಾಡಿಕೊಳ್ಳು.
ಹೆಂಡ್ರು ಸತ್ತರೆ ಗಂಡ ಕೂಡಲೇ ಮರುಮದುವೆ ಮಾಡಿಕೊಳ್ಳುತ್ತಾನೆ. ಆದರೆ ಗಂಡ ಸತ್ತರೆ ಹೆಂಡ್ರು ಮರು ಮದುವೆ ಮಾಡಿಕೊಳ್ಳುವಂತಿಲ್ಲ ಬ್ರಾಹ್ಮಣರಲ್ಲಿ. ಅದರಲ್ಲೂ ವಿಧವೆಯ ತಲೆ ಬೋಳಿಸಿ ಮದುವೆಯಾಗಲು ನಾಲಾಯಕ್ಕು ಎಂದು ವಿಕೃತಗೊಳಿಸುತ್ತಾರೆ. ಈ ತಲೆ ಬೋಳಿಸುವ ಪದ್ಧತಿ ಅಮಾನವೀಯತೆಗೆ ಪ್ರಬಲ ಪುರಾವೆಯಂತಿದೆ. ಆದರೆ ವೇದೋಪನಿಷತ್ತುಗಳನ್ನು ಓದದ, ಆದರೆ ಮಾನವೀಯತೆಯ ಶ್ರೀಮಂತಿಕೆ ತುಂಬಿ ತುಳುಕುವ ಶೂದ್ರರು, ಗಂಡಿಗೆ ಮರುಮದುವೆಯಾಗುವ ಸ್ವಾತಂತ್ಯ್ರವಿರುವಾಗ ಹೆಣ್ಣಿಗೇಕೆ ಇರಬಾರದು ಎಂದು ಮರುಮದುವೆಗೆ ಅವಕಾಶ ನೀಡಿದರು. ಅದನ್ನು ‘ಸೀರುಡಿಕೆ’ ‘ಕೂಡಾವಳಿ’ ಎಂದು ಕರೆಯುತ್ತಾರೆ. ಹಾಗೆ ಮದುವೆಯಾದವರನ್ನು ‘ಕೂಟಿಗೆ ಸಾಲಿನವರು’ ಎಂದು ಕರೆಯುವಲ್ಲಿ ಭೇದ ಇಣಿಕಿ ಹಾಕುತ್ತದೆ.
ಪ್ರ : ಸೀರುಡಿಕೆ ಮಾಡಿಕೊಂಡ್ರೂ ಗಂಡ ಹೆಂಡ್ರು ಎಷ್ಟು ನೇರುಪ್ಪಾಗಿ ಬಾಳ್ತಾ ಅವರೆ ನೋಡು, ನೀನೂ ಇದ್ದೀಯ ‘ಗಂಟ್ಲು ಮಾರೆ ಬಡ್ಡಿ ತಂದು ಎಂಟೆಂಟು ದಿನಕೂ ಕದನ’ ಅಂತ.
೨೯೫೬. ಸೀರಿಗೆ ಸೀರಣಿಗೆ ಹಾಕು = ಹೇನಿನ ಸಂತತಿ ಬೆಳೆಯದಂತೆ ಸಾಯಿಸು. ಮೊಟ್ಟೆಯ
ಹಂತದಲ್ಲೇ ಮೂಲೋತ್ಪಾದನೆ ಮಾಡು
(ಸೀರು = ಹೇನಿನ ಮೊಟ್ಟೆ) ಹೇನಿನ ಸಂತತಿಯಲ್ಲಿ ಸೀರು (ಮೊಟ್ಟೆ), ನತ್ತು (ಹೇನಿನ ಮರಿ), ಪಡ್ಡೆ ಹೇನು ಹಾಗೂ ದಡಿ – ಇವು ವಿವಿಧ ಹಂತದವು. ಸಾಮಾನ್ಯವಾಗಿ ಸೀರು, ನತ್ತು ಹೆಕ್‌ಶಿರದ ಕೂದಲ ಬುಡಕ್ಕೆ ಕಚ್ಚಿಕೊಂಡಿರುತ್ತವೆ. ಬಾಚಣಿಗೆಯಿಂದ ಬಾಚಿದರೆ ಅವು ಹಲ್ಲುಗಳ ಸಂಧಿಯಲ್ಲಿ ನುಣುಚಿಕೊಂಡು ಬಿಡುತ್ತದೆ. ಅದಕ್ಕೆ ಸೀರಣಿಗೆಯೇ ಬೇಕು. ಇದು ಇಕ್ಕುಳದಂತೆ ಇರುತ್ತದೆ. ಮಧ್ಯೆ ಹಲ್ಲುಗಳಿರುತ್ತವೆ, ಆಕಡೆ ಈಕಡೆ ಒತ್ತಿ ಹಿಡಿಯಲು ದಪ್ಪ ಕಟ್ಟಿಗೆ ಇರುತ್ತವೆ. ಕೂದಲು ಬುಡಕ್ಕೆ ಸೀರಣಿಗೆಯನ್ನು ತೂರಿಸಿ, ಎರಡೂ ಕಡೆಯ ದಪ್ಪ ಕಟ್ಟಿಗೆಯನ್ನು ಪಟ್ಟಾಗಿ ಹಿಡಿದು ಒತ್ತಿ ಎಳೆದರೆ, ಬುಡದಲ್ಲಿರುವ ಸೀರು ನತ್ತುಗಳು ಸೀರಣಿಗೆಗೆ ಬರುತ್ತವೆ. ಆಗ ಸಾಯಿಸುತ್ತಾರೆ. ಆದ್ದರಿಂದ ಆಯಾ ಹಗೆಯ ನಾಶಕ್ಕೆ ಅನುಗುಣವಾದ ಆಯುಧ ಬಳಸಬೇಕೆಂಬುದು ಈ ನುಗಿಟ್ಟಿನಿಂದ ತಿಳಿಯುತ್ತದೆ.
ಪ್ರ : ಗಾದೆ – ಪಡ್ಡೆಹೇನು, ದಡಿಗೆ ಬಾಚಣಿಗೆ ಸಾಕು
ಸೀರು, ನತ್ತಿಗೆ ಸೀರಣಿಗೆ ಬೇಕು
೨೯೫೭. ಸೀಲ ಹೊತ್ತುಕೊಳ್ಳದಿರು = ಸೀಲವನ್ನು ನಡತೆಯಲ್ಲಿ ತೋರಿಸು, ತಲೆ ಮೇಲೆ
ಹೊತ್ತು ಮೆರವಣಿಗೆ ಮಾಡದಿರು
(ಸೀಲ < ಶೀಲ = ಸನ್ನಡತೆ, ಸದಾಚಾರ, ಸುಗುಣ)
ಪ್ರ : ಗಾದೆ – ಶೀಲ ಹೊತ್ಕೊಂಡು ಶಿವಗಂಗೆಗೆ ಹೋಗಿದ್ಕೆ
ಹೊಲೆಸ್ಯಾಲೆ ಬಂದು ತಲೆ ಮೇಲೆ ಕೂತ್ಕೊಂಡು
೨೯೫೮. ಸೀಸಿ ಹೊಡಿ = ಓಲೈಸು, ತಾಜಾ ಮಾಡು
(ಸೀಸಿ < ಸಿಹಿಸಿಹಿ, ಸಿಹಿ ಸಾರು ಎಂಬುದು ಸೀಸಾರು ಆಗುತ್ತದೆ. ಆದ್ದರಿಂದ ಸಿಹಿಸಿಹಿ ಸೀಸೀ ಆಗಿದೆ)
ಪ್ರ : ಮೇಲಾಧಿಕಾರಿಗೆ ಸೀಸಿ ಹೊಡೆದು ಬಡ್ತಿ ಗಿಟ್ಟಿಸಿದ.
೨೯೫೯. ಸೀಳುಕ್ಕೆ ಅಡ್ಡುಕ್ಕೆ ಮುಗಿ = ಬಿತ್ತನೆಗೆ ಸಿದ್ಧವಾಗು, ಹದಗೊಳ್ಳು
(ಸೀಳುಕ್ಕೆ = ಉದ್ದುದ್ದವಾಗಿ ಉಳುವ ಉಕ್ಕೆ (ಉಳುಮೆ); ಅಡ್ಡುಕ್ಕೆ = ಅಡ್ಡಡ್ಡವಾಗಿ ಉಳುವ ಉಕ್ಕೆ(ಉಳುಮೆ))
ಪ್ರ : ಸೀಳುಕ್ಕೆ ಅಡ್ಡುಕ್ಕೆ ಮುಗಿದಿದ್ರೆ ಬಿತ್ತನೆಗೆ ಏಕೆ ಹಿಂದು ಮುಂದು ನೋಡ್ತೀಯ?
೨೯೬೦. ಸೀಳುದಾರಿಯಲ್ಲಿ ಹೋಗು = ಹತ್ತಿರದ ದಾರಿಯ್ಲಲಿ ಸಾಗು
(ಸೀಳುದಾರಿ = Short cut)
ಪ್ರ : ಹೆದ್ದಾರಿ ಬಿಟ್ಟು ಕೆಲವು ಸಾರಿ ಸೀಳುದಾರೀನೂ ಹಿಡೀಬೇಕಾಗ್ತದೆ.
೨೯೬೧. ಸೀಳ್ನಾಯಿಯಂತಾಡು = ಮೇಲೆ ಬೀಳು, ಮೇಲೆರಗಲು ರಂಗಳಿಸು
(ಸೀಳ್ನಾಯಿ = ಕಾಡಿನಲ್ಲಿರುವ ಒಂದು ಬಗೆಯ ನಾಯಿ)
ಪ್ರ : ನನಗೆ ಆ ಸೀಳುನಾಯಿಯಂಥೋನ ಸಂಗ ಬೇಡವೇ ಬೇಡ.
೨೯೬೨. ಸುಗ್ಗಿಯಾಗು = ಹಬ್ಬವಾಗು, ಸಮೃದ್ಧಿಯ ಸಂತೋಷ, ಎದುರಾಗು
(ಸುಗ್ಗಿ = ಬೆಳೆಯ ಒಕ್ಕಣೆಯ ಕಾಲ) ಕಣದಲ್ಲಿ ಬೆಳೆಯನ್ನು ಒಕ್ಕು, ಧಾನ್ಯದ ರಾಶಿಯನ್ನು ಮನೆಗೆ ತಂದಾಗ ಸಂತೋಷವೋ ಸಂತೋಷ. “ಸಾಸುವೆ ಕಾಳುಗಾತ್ರ ಹಸ, ಮಾವಿನಕಾಯಿ ಗಾತ್ರ ಕೆಚ್ಚಲು, ಅದು ಈದು ಮನೆಗೆ ಬಂದರೆ ಹೆಚ್ಚಳವೊ ಹೆಚ್ಚಳ” ಎಂಬ ಒಗಟು ಸುಗ್ಗಿಯನ್ನೇ ಕುರಿತದ್ದು. ಸಾಸುವೆಕಾಳು ಗಾತ್ರ ಹಸ ಎಂದರೆ ಬಿತ್ತನೆಯ ರಾಗಿ, ಮಾವಿನಕಾಯಿ ಗಾತ್ರ ಕೆಚ್ಚಲು ಎಂದರೆ ರಾಗಿ ತೆನೆ, ಅದು ಈದು ಮನೆಗೆ ಬರೋದು ಎಂದರೆ ಧಾನ್ಯದ ರಾಶಿ ಮನೆಗೆ ಬರುವುದು, ಹೆಚ್ಚಳ ಎಂದರೆ ಸಂತೋಷ. ಆದ್ದರಿಂದ ಸುಗ್ಗಿ ಹಿಗ್ಗಿಗೆ ಮೂಲ.
ಪ್ರ : ಸುಗ್ಗಿಯಾದಾಗ ಹಿಗ್ಗದೆ ಇರೋರು ಯಾರು?
೨೯೬೩. ಸುಗುಡಿ ಕೈ ಹಿಡಿದಂತಾಗು = ಸಂಭೋಗ ಸುಖ ಇಲ್ಲವಾಗು, ಬರಡು ಬಾಳಾಗು
(ಸುಗುಡಿ = ಮೈನೆರೆಯದ ಹೆಣ್ಣು, ಹೆಣ್ಣೂ ಅಲ್ಲದ ಗಂಡೂ ಅಲ್ಲದ ಎಡಬಿಡಂಗಿ)
ಪ್ರ : ಸುಗುಡಿಗೆ ಬುಗುಡಿ ಬೇರೆ ಕೇಡು.
೨೯೬೪. ಸುಟಿಗೆ ಹಾಕು = ಚುರುಕು ಮುಟ್ಟಿಸು, ಬರೆ ಹಾಕು
(ಸುಟಿಗೆ > ಸುಡಿಗೆ > ಸುಡುಗೆ = ಬಳೆ ಓಡನ್ನು ಕಾಯಿಸಿ ಹಾಕುವ ಬರೆ) ಮಕ್ಕಳಿಗೆ ‘ಮಂದ’ ವಾಗಿ ‘ಸಂದು’ ಆಗುತ್ತದೆ. ಅಂದರೆ ಕಿವಿಯೆಲ್ಲ ತಣ್ಣಗಿರುತ್ತವೆ, ಆಹಾರ ಅರಗುವುದಿಲ್ಲ. ಆಗ ಬಳೆಯ ಓಡನ್ನು ಕಾಯಿಸಿ ಹೆಕ್‌ಶಿರದ ನರದ ಮೇಲೆ ಸುಟಿಗೆ ಹಾಕುತ್ತಾರೆ. ಅದರಿಂದ ಸಂದು ವಾಸಿಯಾಗುತ್ತದೆ ಎಂದು ಜನರ ನಂಬಿಕೆ. ಇದು ಮೌಢ್ಯದ ಆಚರಣೆ ಎನ್ನಿಸುತ್ತದೆ. ಅದರಿಂದ ಮಗುವಿನ ಕಾಯಿಲೆ ವಾಸಿಯಾಗಲಿ ಬಿಡಲಿ, ಈ ನುಡಿಗಟ್ಟಿನ ಆಶಯ ಸಂಬಂಧಪಟ್ಟವರಿಗೆ ಚುರುಕು ಮುಟ್ಟಿಸುವುದು, ಎಚ್ಚರದಿಂದ ನಡೆದುಕೊಳ್ಳುವಂತೆ ಮಾಡುವುದು
ಪ್ರ : ಮುಟ್ಟಿ ನೋಡಿಕೊಳ್ಳೋ ಹಂಗೆ ಅವನಿಗೆ ಸುಟಿಗೆ ಹಾಕಿ ಕಳಿಸಿದ್ದೀನಿ, ಮತ್ತೆ ಇತ್ತ ಮಕ ಇಕ್ಕಲ್ಲ ಅಂದ್ಕೊಂಡಿದ್ದೀನಿ.
೨೯೬೫. ಸುಟ್ಟ ಹಕ್ಕಿ ಹಾರಿಸು = ಬೊಗಳೆ ಬಿಡು, ನಿಜದ ನೆತ್ತಿಯ ಮೇಲೆ ಹೊಡೆದಂತೆ ಸುಳ್ಳು ಹೇಳು
ಹಕ್ಕಿಯನ್ನು ಕುಯ್ದಾಗಲೇ ಅದರ ಪ್ರಾಣ ಹೋಗಿರುತ್ತದೆ. ಅದನ್ನು ಸುಟ್ಟ ಮೇಲೆ, ಅಂದರೆ ಬೆಂಕಿಯ ಉರಿಯಲ್ಲಿ ಸೀದ ಮೇಲೆ ಅದರ ಕತೆ ಮುಗಿದಂತೆ. ಅಂಥದನ್ನೂ ಹಾರಿಸುತ್ತೇನೆ ಎಂದು ಹಾರಾಡುವ ಸುಳ್ಳಿನ ಸರಮಾಲೆಯ ಸರದಾರನನ್ನು ಲೇವಡಿ ಮಾಡುವ ನುಡಿಗಟ್ಟಿದು.
ಪ್ರ : ಸುಟ್ಟ ಹಕ್ಕಿ ಹಾರಿಸೋನ ಮಾತ್ನ ನೀನು ನಂಬಿದರೆ ಕೆಟ್ಟೆ.
೨೯೬೬. ಸುಟ್ಟು ಬೊಟ್ಟಿಟ್ಟುಕೊಳ್ಳು = ಧ್ವಂಸ ಮಾಡು, ನಿರ್ನಾಮ ಮಾಡು
(ಬೊಟ್ಟು = ತಿಲಕ)
ಪ್ರ : ಶೋಷಿತರ ಸಿಟ್ಟು ಶೋಷಕರನ್ನು ಸುಟ್ಟು ಬೊಟ್ಟಿಟ್ಟುಕೊಳ್ಳುವಂಥದು.
೨೯೬೭. ಸುಟ್ಟು ಮಾರು = ದುಬಾರಿ ಬೆಲೆಗೆ ಮಾರು
ಪ್ರ: ಮಾರ್ಕೆಟ್ಟನಲ್ಲಿ ಎಲ್ಲ ಹಣ್ಣು ಹಂಪಲನ್ನು ಸುಟ್ಟು ಮಾರ್ತಾರೆ, ಆದರೆ ರೈತರಿಂದ ಸಸ್ತಾ ಬೆಲೆಗೆ ತಂದಿರ್ತಾರೆ.
೨೯೬೮. ಸುಡುರಿಕೊಳ್ಳು = ರಸ ಬತ್ತಿ ಸುರುಳಿ ಸುತ್ತಿಕೊಳ್ಳು, ಜರಿದುಕೊಳ್ಳು
(ಸುಡುರು < ಸುರುಡು < ಸುರುಟು < ಚುರುಟ್ಟು (ತ) = ಸುಕ್ಕುಗಟ್ಟು, ಕೃಶವಾಗು)
ಪ್ರ : ಮಳೆಯಿಲ್ಲದೆ ಬಿಸಿಲಿಗೆ ಪೈರೆಲ್ಲ ಸುಡುರಿಕೊಂಡಿವೆ.
೨೯೬೯. ಸುಡುಗಾಡಿಗೆ ಹೋಗು = ಮರಣ ಹೊಂದು
(ಸುಡಗಾಡು = ಶ್ಮಶಾನ)
ಪ್ರ : ಸುಡುಗಾಡಿಗೆ ಹೋಗ್ತೀನಿ, ಎಲ್ಲಿಗೆ ಹೋಗ್ತೀಯ ಅಂತ ಕೇಳೋಕೆ ನೀನ್ಯಾರು?
೨೯೭೦. ಸುತರಾಂ ಒಪ್ಪದಿರು = ಬಿಲ್‌ಕುಲ್ ಅನುಮತಿಸದಿರು
(ಸುತರಾಂ = ಬಿಲ್‌ಕುಲ್, ಖಂಡಿತ)
ಪ್ರ : ಸುತರಾಂ ಒಪ್ಪದೆ ಇರುವಾಗ, ಮತ್ತೆ ಬೆಣ್ಣೆ ಒತ್ತೋದು ಯಾಕೆ?
೨೯೭೧. ಸುತಿ ಇಕ್ಕು = ಎತ್ತಿ ಕೊಡು, ಸೂಚನೆ ಕೊಡು
(ಸುತಿ < ಶ್ರುತಿ = ಮುಖ್ಯ ಹಾಡಿಗೆ ದನಿ ಇಕ್ಕುವುದು)
ಪ್ರ : ಅವನು ಮೆಲ್ಲಗೆ ಸುತಿ ಇಕ್ಕಿದ್ದೇ ತಡ, ಇವನು ಮಾರೆ ನೋಡದೆ ರಾಚಿಬಿಟ್ಟ.
೨೯೭೨. ಸುತ್ತಿ ಸುಣ್ಣವಾಗು = ಅಲೆದಾಡಿ ಸುಸ್ತಾಗು
ಪ್ರ : ಇದಕ್ಕಾಗಿ ಸುತ್ತಿ ಸುಣ್ಣವಾದೆ, ಅಲೆದಾಡಿ ಹಣ್ಣಾದೆ.
೨೯೭೩. ಸುತ್ತು ಬರಿಸು = ಪ್ರದಕ್ಷಿಣೆ ಹಾಕಿಸು
ಪ್ರ : ಈ ತಾಯಿತವನ್ನು ಮೂರು ಸಾರಿ ಮಕದಿಂದ ಕೆಳಕ್ಕೆ ಇಳೇದೆಗೆದು, ಸುತ್ತು ಬರಿಸಿ, ಕೊರಳಿಗೆ ಕಟ್ಟು.
೨೯೭೪. ಸುತ್ತುಬಳಸಿ ಮಾತಾಡು = ನಿಜವನ್ನು ಮರೆಮಾಚಲು ಯತ್ನಿಸು
ಪ್ರ : ಸುತ್ತುಬಳಸಿ ಮಾತಾಡಬೇಡ, ಇದ್ದದ್ದನ್ನು ನೇರವಾಗಿ ಹೇಳು
೨೯೭೫. ಸುತ್ತು ಹಾಕು = ಬಳಸು, ಇಕ್ಕೆಲದಲ್ಲೂ ಹಾದು ಹೋಗು
ಪ್ರ : ಜನಪದ ನಂಬಿಕೆ – ಹುತ್ತವನ್ನು ಸುತ್ತು ಹಾಕಬಾರದು
೨೯೭೬. ಸುನಾಯಸವಾಗಿ ಅಪಾಯ ತಂದುಕೊಳ್ಳು = ನಿರಾಯಾಸವಾಗಿ ಹಾನಿ ತಂದುಕೊಳ್ಳು
(ಸುನಾಯಸ < ಸು + ಅನಾಯಾಸ = ಆಯಾಸವಿಲ್ಲದೆ, ಸುಲಭವಾಗಿ)
ಪ್ರ : ಹೆಣ್ಮಕ್ಕಳು ಸುನಾಯಸವಾಗಿ ಮಾಡ್ಕೊಂಡದ್ದನ್ನು ಮುಚ್ಚಿ ಹಾಕಬೇಕಾದ್ರೆ ಅಪ್ಪ ಅಮ್ಮಂದಿರು ಸತ್ತು ಹುಟ್ಟಿದಂತಾಗ್ತದೆ.
೨೯೭೭. ಸುನಿ ಬೆನ್ ಹತ್ತು = ಬಿಡಾಡಿ ಹೆಣ್ಣು ಗಂಟು ಬೀಳು
(ಸುನಿ < ಶುನಿ = ಹೆಣ್ಣುನಾಯಿ)
ಪ್ರ : ಏನು ಶನಿಕಾಟವೋ, ಈ ಸುನಿ ಬೆನ್ ಹತ್ತಿದ್ದು ಬಿಡದು.
೨೯೭೮. ಸುಮಾನ ಬಂದು ಬಣ್ಣದ ಗುಂಡಿಗೆ ಬೀಳು = ಚೆಲ್ಲಾಟವಾಡಿ ನಳ್ಳಾಟಕ್ಕೊಳಗಾಗು
(ಸುಮಾನ < ಸುಮ್ಮಾನ = ಸಂತೋಷ)
ಪ್ರ : ಪ್ರಾಯದ ಸುಮಾನದ-ಲ್ಲಿ ಸುಣ್ಣದ ಗುಂಡಿಗೆ ಬಿದ್ದು, ಬಾಯಿ ಬಾಯಿ ಬಿಡ್ತಾಳೆ.
೨೯೭೯. ಸುಲಿದೆಗೆ = ಚರ್ಮ ಸುಲಿ, ಹಿಂಸಿಸು
(ಸುಲಿದೆಗೆ < ಸುಲಿ + ತೆಗೆ ; ಸುಲಿ = ಚರ್ಮ (ಸುಲಿದದ್ದು) ಅಥವಾ ಸುಲಿದೆಗೆ < ಸುಳಿದೆಗೆ = ವಂಶನಾಶ ಮಾಡು)
ಪ್ರ : ಈ ವಿಷಯದಲ್ಲಿ ನೀನು ತಲೆ ಹಾಕಿದರೆ, ನಿನ್ನ ಸುಲಿದೆಗೆದುಬಿಡ್ತೀನಿ.
೨೯೮೦. ಸುವ್ವಿ ಎನ್ನುವಾಗಲೇ ರಾಗ ತಿಳಿದುಕೊಳ್ಳು = ಬಾಯಿ ತೆರೆಯುವಾಗಲೇ ಆಂತರ್ಯ
ತಿಳಿದುಕೊಳ್ಳು, ಮಾತಿನಿಂದಲೇ ಮರ್ಮ ತಿಳಿದುಕೊಳ್ಳು.
ಪ್ರ : ಸುವ್ವಿ ಎನ್ನುವಾಗಲೇ ರಾಗ ಯಾವುದು ಅಂತ ಅರ್ಥ ಮಾಡಿಕೊಳ್ಳೋ ಶಕ್ತಿ ನನಗಿದೆ.
೨೯೮೧. ಸುಳಿ ಒಣಗಿ ಹೋಗು = ವಂಶ ನಾಶವಾಗು
(ಸುಳಿ = ಕುಡಿ, ಸಂತಾನ, ವಂಶ)
ಪ್ರ : ನೆತ್ತಿ ಸುಳಿಗೆ ಹೊಡೆದನಲ್ಲೇ, ಇವನ ಸುಳಿ ಒಣಗಿ ಹೋಗ!
೨೯೮೨. ಸೂಗೂರಿ ಕರ್ಕೊಂಡು ಬೇಗೂರಿಗೆ ಹೋದಂತಾಗು = ಎಡವಟ್ಟಾಗು, ಇಕ್ಕಟ್ಟಿಗೆ ಸಿಕ್ಕು
(ಸೂಗೂರಿ < ಸುಗುವರಿ < ಸುಗುಮಾರಿ < ಸುಕುಮಾರಿ = ಕೋಮಲ ಕನ್ಯೆ ಬೇಗೂರು = ಬೇಯುವ ಊರು, ಬೇಗೆಯ ಊರು)
ಪ್ರ : ಸೂ-ಗೂ-ರಿ ಕರ್ಕೊಂ-ಡು ಬೇಗೂ-ರಿ-ಗೆ ಹೋ-ದದ್ದು, ಅರ್ಜು-ನ ಉತ್ತ-ರ-ನ-ನ್ನು ಕರ್ಕೊಂ-ಡು ಯುದ್ಧ-ರಂ-ಗ-ಕ್ಕೆ ಹೋ-ದಂ-ತಾ-ಯ್ತು.
೨೯೮೩. ಸೂಜಿ ಕಣ್ಣಷ್ಟಿರು = ಕಿಂಚಿತ್ತಿರು, ಚಿಂತರವಿರು
(ಸೂಜಿ < ಸೂಚಿ = ಬಟ್ಟೆ ಹೊಲಿಯುವ ಸಾಧನ)
ಪ್ರ : ಮುರ್ಕೊಂಡ ಮುಳ್ಳು ಸೂಜಿಕಣ್ಣಷ್ಟಿದ್ದರೂ ತುಂಬ ಹಿಜ ಕೊಡ್ತದೆ.
೨೯೮೪. ಸೂಜಿ ಕಣ್ಣಾಗೆ ತುಪ್ಪ ಬಿಡು = ಜಿಪುಣತನ ಮಾಡು, ಕಿಲುಬುತನ ತೋರು
ಪ್ರ : ಸೂಜಿ ಕಣ್ಣಾಗೆ ತುಪ್ಪ ಬಿಡೋ ಮನೇಲಿ ಮದುವೆಯಾಗ್ತೀಯಾ?
ಖಂಡಿತ ಬೇಡ.
೨೯೮೫. ಸೂಜಿ ಕಣ್ಣಾಗೆ ಬರು = ಸಣ್ಣ ಪ್ರಮಾಣದಲ್ಲಿ ಬರು
(ಸೂಜಿಕಣ್ಣು = ದಾರ ಏರಿಸುವ ರಂದ್ರ)
ಪ್ರ : ಗಾದೆ – ಸೂಜಿ ಕಣ್ಣಾಗೆ ಬಂದದ್ದು ಬಚ್ಚಲ ಬಾಯಾಗೆ ಹೋಯ್ತು.
೨೯೮೬. ಸೂಜಿಗಲ್ಲಾಗು = ಅನ್ಯರನ್ನು ಆಕರ್ಷಿಸುವ ವರ್ಚಸ್ಸು ಹೊಂದು
(ಸೂಜಿಗಲ್ಲು = ಅಯಸ್ಕಾಂತ)
ಪ್ರ : ಊರ ಹುಡುಗರಿಗೆ ಅವಳು ಸೂಜಿಗಲ್ಲಾಗಿದ್ದಾಳೆ.
೨೯೮೭. ಸೂಜಿ ಬಿದ್ದು ಸದ್ದು ಕೇಳಿಸು = ನಿಶ್ಯಬ್ದವಾಗಿರು, ಸದ್ದಿಲಿಯಾಗಿರು
ಪ್ರ : ಸಭೆ ಎಷ್ಟು ನಿಶ್ಯಬ್ದವಾಗಿತ್ತು ಎಂದರೆ ಸೂಜಿ ಬಿದ್ದ ಸದ್ದೂ ಸಹ ಕೇಳಿಸುವ ಹಾಗಿತ್ತು.
೨೯೮೮. ಸೂಜಿ ಮದ್ದು ಕೊಡು = ಸಂಭೋಗಿಸು
(ಸೂಜಿ ಮದ್ದು = ಚುಚ್ಚು ಮದ್ದು)
ಪ್ರ : ಬಾಯಿಗೆ ಗುಳಿಗೆ ಕೊಡೋದ್ಕಿಂತ ಕುಂಡಿಗೆ ಸೂಜಿಮದ್ದು ಕೊಡೋದೇ ಸರಿ.
೨೯೮೯. ಸೂಜಿ ಹಾಕಿ ದಬ್ಬಳ ತೆಗಿ = ಒಂದಕ್ಕೆ ಎರಡುಪಟ್ಟು ಕೀಳು
ಸಮಾಜದಲ್ಲಿದ ಹೊಲಿಗೆ ಕಾಲಿಕ್ಕಿದಾಗ – ತೊಂಗಲು ತೊಡುವ, ಕಂಬಳಿ ಉಡುವ ಕಾಲ ಹೋಗಿ ಬಟ್ಟೆ ಅಸ್ತಿತ್ವಕ್ಕೆ ಬಂದಾಗ = ಮೂಡಿದ ನುಡಿಗಟ್ಟಿದು. ಹರಿದು ಹೋದ ಬಟ್ಟೆಯನ್ನು ಹೊಲಿಯುವಾಗ ಈ ಕಡೆಯಿಂದ ಸೂಜಿಯನ್ನು ತೂರಿಸಿ, ಆ ಕಡೆಯಿಂದ ಅದನ್ನು ಎಳೆಯುತ್ತೇವೆ. ಆದರೆ ಇಲ್ಲಿ ತೂರಿಸುವುದು ಸೂಜಿ, ಎಳೆಯುವುದು ದಬ್ಬಳ – ಅಂದರೆ ಒಬ್ಬರಿಗೆ ಹತ್ತು ರೂಪಾಯಿ ಕೊಟ್ಟು ಅವರಿಂದ ನೂರು ರೂಪಾಯಿ ಕೀಳುವ ದುರಾಶೆಯ ಪ್ರವೃತ್ತಿಯನ್ನು ಇದು ಬಯಲು ಮಾಡುತ್ತದೆ.
ಪ್ರ : ಸೂಜಿ ಹಾಕಿ ದಬ್ಬಳ ತೆಗಿಯೋ ಬಿನ್ನಾಣಗಿತ್ತಿ, ನನ್ನ ಮುಂದೆ ನಿನ್ನಾಟ ನಡೆಯಲ್ಲ.
೨೯೯೦. ಸೂಡು ಹಾಕು = ಬರೆ ಹಾಕು
(ಸೂಡು < ಸುಡು = ಬರೆ)
ಪ್ರ : ಹಿಂಗೇ ಕಾಡಿಸಿದರೆ, ಹಿಡಿದು ಸೂಡು ಹಾಕೋದು ಒಂದೇ ದಾರಿ
೨೯೯೧. ಸೂತರದ ಗೊಂಬೆಯಾಗು = ಸ್ವಂತ ವ್ಯಕ್ತಿತ್ವ ಇಲ್ಲದಿರು, ಅನ್ಯರು ಕುಣಿಸಿದಂತೆ ಕುಣಿ
(ಸೂತರದ < ಸೂತ್ರದ = ದಾರದ, ಹುರಿಯು) ಕಿಳ್ಳೆಕ್ಯಾತರು ಗೊಂಬೆಗಳ ಕೈಕಾಲುಗಳಿಗೆ ಸೂತ್ರಗಳನ್ನು ಹಾಕಿ ತಮ್ಮ ಬೆರಳಲ್ಲಿ ಹೇಗೆಂದರೆ ಹಾಗೆ ಕುಣಿಸುತ್ತಾ ಕಥೆಯನ್ನು ಹೇಳುವ ಅಥವಾ ನಾಟಕವನ್ನು ಜರುಗಿಸುವ ಜನಪದ ‘ಸೂತ್ರದಗೊಂಬೆಯಾಟ’ ಈ ನುಡಿಗಟ್ಟಿಗೆ ಮೂಲ.
ಪ್ರ : ಹೆಂಡ್ರ ಕೈಯಾಗಳ ಸೂತರದ ಗೊಂಬೆಯಾಗಿದ್ದಾನೆ ಗಂಡ.
೨೯೯೨. ಸೂನಂಗಿಯಂತಿರು = ಕೆಲಸಕ್ಕೆ ಬಾರದ ನಿಷ್ಪ್ರಯೋಜಕ ವಸ್ತುವಾಗಿರು
(ಸೂನಂಗಿ = ಕಬ್ಬಿನ ಹೂವು, ತೆನೆ) ಸಾಮಾನ್ಯವಾಗಿ ತೆನೆ ಎಂದಾಕ್ಷನ ಅದರಲ್ಲಿ ಕಾಳಿರುತ್ತವೆ. ಹೂವು ಎಂದಾಕ್ಷಣ ಅದು ಸುವಾಸನಾಯುಕ್ತವಾಗಿ ಮುಡಿಯಲು ಅರ್ಹವಾಗಿರುತ್ತದೆ ಎಂಬ ಗ್ರಹಿಕೆ ಇದೆ. ಆದರೆ ಈ ಸೂನಂಗಿ ಯಾವ ಗುಣವನ್ನು ಹೊಂದಿಲ್ಲ, ನಿರುಪಯುಕ್ತ.
ಪ್ರ : ಗಾದೆ – ಆನೆ ಹೊಟ್ಟೇಲಿ ಸೂನಂಗಿ ಹುಟ್ಟಿದಂಗೆ.
೨೯೯೩. ಸೂಪರ್ಲಕ್ಕಿಯಂತಾಡು = ಹೆಮ್ಮಾರಿಯಂತಾಡು, ರಾಕ್ಷಸಿಯಂತಾಡು
(ಸೂಪರ್ಲಕ್ಕಿ < ಶೂರ್ಪನಖಿ = ರಾವಣನ ತಂಗಿ; ಶೂರ್ಪ = ಮೊರ ಅಥವಾ ಗೆರಸೆ, ನಖ = ಉಗುರು) ಮೊರದಗಲ ಕಿವಿಯುಳ್ಳ ಗಣಪನನ್ನು ಶೂರ್ಪಕರ್ಣ ಎಂದು ಕರೆಯುವಂತೆ ಮೊರದಗಲ ಉಗುರುಳ್ಳ ರಾವಣನ ತಂಗಿಯನ್ನು ಶೂರ್ಪನಖಿ ಎಂದು ಕರೆಯಲಾಗಿದೆ. (ಆದರೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಸೀತೆಯ ಸಾಹಚರ್ಯದಿಂದ ಸಂಸ್ಕಾರ ಹೊಂದಿ ಚಂದ್ರನಖಿಯಾಗುವುದನ್ನು ಕಾಣುತ್ತೇವೆ.) ಅದು ಜನರ ಬಾಯಲ್ಲಿ ಸೂಪರ್ಲಕ್ಕಿಯಾಗಿದೆ.
ಪ್ರ : ನೀನು ಸೂಪರ್ಲಕ್ಕಿಯಂತಾಡಿದರೆ ಕಿವಿ ಮೂಗು ಕುಯ್ಸಿಕೊಳ್ತಿ ಅಷ್ಟೆ.
೨೯೯೪. ಸೂರ್ಜ ಉರುದ್ಹಂಗುರಿ = ಸೂರ್ಯ ಹೊಳೆಯುವಂತೆ ಹೊಳೆ, ಥಳಥಳಿಸು, ಪಳಪಳ ಬೆಳಕು ನೀಡು
(ಸೂರ್ಜ < ಸೂರ್ಯ = ಹೊತ್ತು)
ಪ್ರ : ಹೆಣ್ಣು ಅಂದ್ರೆ ಅಂಥಿಂಥ ಹೆಣ್ಣಲ್ಲ, ಸೂರ್ಜ ಉರಿದಂಗೆ ಉರೀತಾಳೆ.
೨೯೯೫. ಸೂಲುದಪ್ಪು = ಕ್ರಮ ತಪ್ಪು, ಹೆರಿಗೆಯ ಸರದಿ ತಪ್ಪು
(ಸೂಲು = ಹೆರಿಗೆ, ಅವಧಿ, ವೇಳೆ)
ಪ್ರ : ಗಾದೆ – ಸೂಲುದಪ್ಪಿದರೆ ಗೊಡ್ಡ ?
೨೯೯೬. ಸೂಸ್ತ್ರದಂತಿರು = ತೆಳುವಾಗಿರು, ಜಾಳುಜಾಳಾಗಿರು
(ಸೂಸ್ತ್ರ < ಸೂತ್ರ = ದಾರ, ಎಳೆ)
ಪ್ರ : ಸೂಸ್ತ್ರದಂಥ ಬಟ್ಟೆ ತಡೆಯಲ್ಲ, ಗಟ್ಟಿಯಾದದ್ದು ಬೇಕು.
೨೯೯೭. ಸೆಡ್ಡೆ ಇಲ್ಲದೆ ಬಿತ್ತು = ನಿಷ್ಕಾರಣವಾಗಿ ವಿರಸ ಮೂಡಿಸು
(ಸೆಡ್ಡೆ = ಕಾಳು ಸಾಲಿಕ್ಕಲು ಬಳಸುವ ಬಿದಿರುಕೊಳ-ವೆ-ಯ ಉಪ-ಕ-ರ-ಣ)
ಪ್ರ : ಅವನು ಬಿಡಪ್ಪ, ಸೆಡ್ಡೆ ಇಲ್ಲದೆ ಬಿತ್ತಿ, ಗೆಡ್ಡೆ ಸಹಿತ ನಾಶ ಮಾಡಿಬಿಡ್ತಾನೆ.
೨೯೯೮. ಸೆಣೆದು ಅಣಿಸು = ಹೊಡೆದು ಒಪ್ಪಿಸು
(ಸೆಣೆ = ಹೊಡೆ, ಚಚ್ಚು ; ಅಣಿ = ಒಪ್ಪು, ಹದಿ)
ಪ್ರ : ಸೆಣೆದು ಅಣಿಸೋಕಾಗಲ್ಲ, ಮಣಿದು ಅಣಿಸಬಹುದು
೨೯೯೯. ಸೆತ್ತೆ ಕೀಳು = ಕಳೆ ಕೀಳು
(ಸೆತ್ತೆ = ಕಳೆ, ಅನುಪಯೋಗಿ ವಸ್ತು)
ಪ್ರ : ಸೆತ್ತೆ ಕೀಳದಿದ್ರೆ ನಿನ್ನ ಸ್ವತ್ತೆ ಹಾಳಾಗ್ತದೆ.
೩೦೦೦. ಸೆತ್ತೆ ಬೀಳು = ಮಾಸು ಬೀಳು, ಗರ್ಭದ ಪೊರೆ ಕಸ ಬೀಳು
ಪ್ರ : ಹೆರಿಗೆಯಾದಾಗ ಬೀಳುವ ಸೆತ್ತೆಯನ್ನು ಗುಂಡಿ ತೆಗೆದು ಹೂಳಬೇಕು, ತುಳೀಬಾರ್ದು. ಅದಕ್ಕೇ ಸೆತ್ತೆ ಬೀಳೋದನ್ನೇ ಕಾಯ್ತಾ ಇದ್ದೀನಿ.
೩೦೦೧. ಸೆಬೆ ಒಡ್ಡು = ಸಿಡಿ ಒಡ್ಡು
(ಸೆಬೆ = ಸಿಡಿ, ಬೋನು)
ಪ್ರ : ಸೆಬೆ ಒಡ್ಡೋದು ಒಡ್ಡು, ಬಿದ್ದರೆ ಬೀಳಲಿ ಬೀಳದಿದ್ರೆ ಹೋಗಲಿ.
೩೦೦೨. ಸೆಬ್ಬೆಗೆ ಬರು = ಹದಕ್ಕೆ ಬರು
(ಸೆಬ್ಬೆ = ಹದ) ಬಿತ್ತನೆಗಾಗಲೀ ಹರ್ತನೆಗಾಗಲೀ ಹೆಚ್ಚು ಒಣಗಲೂ ಆಗಬಾರದು, ಹೆಚ್ಚು ತೇವವೂ ಆಗಬಾರದು. ಅಂತಹ ಹದವಾದ ಸ್ಥಿತಿಗೆ ಸೆಬ್ಬೆ ಎಂದು ಕರೆಯುತ್ತಾರೆ.
ಪ್ರ : ಸೆಬ್ಬೆಗೆ ಬಂದಾಗ ಬಿತ್ತದಿದ್ರೆ ದಡ್ಡ ಅಂತಾರೆ.
೩೦೦೩. ಸೆಮೆ ಬೀಳು = ಕಷ್ಟ ಬೀಳು
(ಸೆಮೆ < ಶೆಮ < ಶ್ರಮ = ಆಯಾಸ, ಕಷ್ಟ)
ಪ್ರ : ಮನೆಯನ್ನು ಈ ಮಟ್ಟಕ್ಕೆ ತರಬೇಕಾದರೆ ಎಷ್ಟು ಸೆಮೆ ಬಿದ್ದಿದ್ದೀನಿ ಅನ್ನೋದ ಶಿವನಿಗೆ ಒಬ್ಬನಿಗೇ ಗೊತ್ತು.
೩೦೦೪. ಸೆರಗೊಡ್ಡು = ಬೇಡು, ಅಂಗಲಾಚು
ಪ್ರ : ಇನ್ನೊಬ್ಬರ ಮುಂದೆ ಸೆರಗೊಡ್ಡುವ ಸ್ಥಿತಿ ಬರೋದು ಬೇಡ, ಕಷ್ಟಪಟ್ಟು ದುಡಿ
೩೦೦೫. ಸೆರಗನ್ನು ಬಾಯಿಗೆ ತುರುಕಿಕೊಳ್ಳು = ನಗು ತಡೆಹಿಡಿಯಲು ಯತ್ನಿಸು
ಪ್ರ : ತುಂಬಿದ ಸಭೇಲಿ ಅವನಾಡಿದ ಮಾತನ್ನು ಕೇಳಿ, ಆಕೆ ಸೆರಗನ್ನು ಬಾಯಿಗೆ ತುರುಕಿಕೊಂಡಳು.
೩೦೦೬. ಸೆರಗನ್ನು ಹರಿ = ಸಂಬಂಧ ಕಡಿದುಕೊಳ್ಳು
(ಸೆರಗು = ಸೀರೆಯ ಕೊನೆ, ಹೆಗಲ ಮೇಲೆ ಇಳಿಬಿಡುವ ಭಾಗ)
ಪ್ರ : ಸೆರಗನ್ನು ಹರಿದದ್ದೂ ಆಯ್ತು, ಹೊರಕ್ಕೆ ಬಂದದ್ದೂ ಆಯ್ತು.
೩೦೦೭. ಸೆರಗು ಹಾಸು = ದೇಹ ಒಪ್ಪಿಸು, ಸುರತಕ್ರೀಡೆಯಲ್ಲಿ ತೊಡಗು
ಪ್ರ : ಬಂದು ಬಂದೋರಿಗೆಲ್ಲ ಸೆರಗು ಹಾಸೋ ಸೂಳೆ ಅಂತ ತಿಳ್ಕೊಂಡ ನನ್ನನ್ನು?
೩೦೦೮. ಸೆಲೆ ಅಡಗು = ಮರಣ ಹೊಂದು, ಮಾತು ನಿಲ್ಲು
(ಸೆಲೆ < ಸೊಲ್ಲು = ಮಾತು)
ಪ್ರ : ಅವನ ಸೆಲೆ ಅಡಗಿದಾಗ, ನಾನು ಸಲೀಸಾಗಿದ್ದೇನು.
೩೦೦೯. ಸೆಲೆ ಹೊಡಿ = ಪ್ರತಿಧ್ವನಿಗೊಳ್ಳು
(ಸೆಲೆ < ಚಿಲೈ (ತ) = ಪ್ರತಿಧ್ವನಿ)
ಪ್ರ : ಮನೆಯಾದ ಮನೆಯೇ ಸೆಲೆ ಹೊಡಿಯೋ ಹಾಗೆ ಆಕರಿಸಬೇಡ, ಮೆಲ್ಲಗೆ ಮಾತಾಡು.
೩೦೧೦. ಸೆಲೆತುಕೊಳ್ಳು = ಊದಿಕೊಳ್ಳು, ಗುಳ್ಳೆಗಳೇಳು
(ಸೆಲೆ < ಶೆಲೆ = ನೀರಲ್ಲಾಡುವುದರಿಂದ ಚರ್ಮ ಬಿಳಿಚಿಕೊಂಡು ಸಣ್ಣ ಸಣ್ಣ ಗುಳ್ಳೆಗಳಾಗುವುದು)
ಪ್ರ : ಕಾಲು ಸೆಲೆತುಕೊಂಡರೂ ವೈದ್ಯರಿಗೆ ತೋರಿಸದೆ ಸುಮ್ಮನೆ ಇದ್ದೀಯಲ್ಲ?
೩೦೧೧. ಸೇದಿಕೊಳ್ಳು = ಮುನಿಸಿಕೊಳ್ಳು, ಸೆಟೆ-ದು-ಕೊ-ಳ್ಳು, ಮಾತಾಡದಿರು
ಪ್ರ : ಹಬ್ಬಕ್ಕೆ ಸ್ಯಾಲೆ ತರಲಿಲ್ಲ ಅಂತ ಸೊಸೆ ಸೇದಿಕೊಂಡು ಕುಂತವಳೆ.
೩೦೧೨. ಸೇದಿ ಹೋಗು = ಸೆಟೆದುಕೊಳ್ಳು, ಮರಣ ಹೊಂದು
(ಸೇದು = ನೆಟ್ಟಗಾಗು) ಪ್ರಾಣ ಹೋದ ಮೇಲೆ ಕೈಕಾಲು ಸೇದಿಕೊಳ್ಳುತ್ತವೆ, ನಾಲಗೆ ಸೇದಿಕೊಳ್ಳುತ್ತದೆ. ಅವುಗಳನ್ನು ಮಡಿಚಲಾಗುವುದಿಲ್ಲ. ಗೂಟದಂತೆ ನೆಟ್ಟಗೆ ಇರುತ್ತವೆ.
ಪ್ರ : ಕೋಲಿಗೆ ಜಾಗ ಕೊಡು ಅಂತಾನಲ್ಲೆ, ಇವನ ನಾಲಗೆ ಸೇದಿ ಹೋಗ!
೩೦೧೩. ಸೇಪು ತೆಗೆ = ಛೀಮಾರಿ ಮಾಡು, ಮುಖದಲ್ಲಿ ನೀರಿಳಿಸು
(ಸೇಪು < Shape = ರೂಪ, ವ್ಯಕ್ತಿತ್ವ)
ಪ್ರ : ಅವನಿಗೆ ಇವುತ್ತ ಚೆನ್ನಾಗಿ ಸೇಪು ತೆಗೆದು ಕಳಿಸಿದ್ದೀನಿ.
೩೦೧೪. ಸೇರಿಗೆ ಸವಾಸೇರಾಗು = ಸೆಣಸಿ ನಿಲ್ಲು, ನೀನು ಅಂದ್ರೆ ನಿಮ್ಮಪ್ಪ ಎನ್ನು
(ಸವಾಸೇರು = ಒಂದೂಕಾಲು ಸೇರು)
ಪ್ರ : ಆಳು ದಣೀಗೆ ಸೇರಿಗೆ ಸವಾಸೇರು ಉತ್ತರಕೊಟ್ಟಾಗ, ದಣಿ ದಣಿದಂತೆ ಕಂಡರು
೨೦೧೫. ಸೈ ಅನ್ನಿಸಿಕೊಳ್ಳು = ಮೆಚ್ಚುಗೆಗೆ ಪಾತ್ರವಾಗು, ಕೊಂಡಾಡಿಸಿಕೊಳ್ಳು
(ಸೈ < ಸಯಿ(ಹಿಂ) = ಸರಿ)
ಪ್ರ : ಗಾದೆ – ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು
ಗಂಡನ ಮನೇಲೂ ಸೈ ಅನ್ನಿಸಿಕೊಳ್ತಾಳೆ.
೨೦೧೬. ಸೊಕ್ಕ ಸೊರಗ ನಿದ್ದೆ ಹೋಗು = ಗಾಢ ನಿದ್ರೆ ಮಾಡು
(ಸೊಕ್ಕಸೊರಗ = ಸೊಕ್ಕಿ ಹೋದಂತೆ ಸೊರಗಿ ಹೋದಂತೆ)
ಪ್ರ : ಸೊಕ್ಕ ಸೊರಗ ನಿದ್ದೆ ಹೋಗಿದ್ದೋನಿಗೆ, ನಾನು ಬಂದು ಹೋಗಿದ್ದು ಹೆಂಗೆ ಗೊತ್ತಾಗಬೇಕು?
೩೦೧೭. ಸೊಕ್ಕಿ ಸೊಲಗೆ ನೀರು ಕುಡಿ = ಅಹಂಕಾರದಿಂದ ಮೆರೆ
(ಸೊಲಗೆ = ಒಂದು ಚಿಕ್ಕ ಅಳತೆಯ ಪ್ರಮಾಣ; ಸೇರು, ಅಚ್ಚೇರು, ಪಾವು, ಅರೆಪಾವು, ಚಟಾಕು ಇದ್ದ ಹಾಗೆ ಇದೂ ಒಂದು ಅಳತೆಯ ಉಪಕರಣ)
ಪ್ರ : ಸಿಕ್ಕಿ ಸಿಕ್ಕಿದ್ದನ್ನು ಮುಕ್ಕಿ, ಸೊಕ್ಕಿ ಸೊಲಗೆ ನೀರು ಕುಡೀತಾಳೆ
೩೦೧೮. ಸೊಕ್ಕಿ ಹೋಗು = ಸುಸ್ತಾಗು, ಜೀವ ದಿಳ್ಳಿಸಿದಂತಾಗು
ಪ್ರ : ಓಡಿ ಓಡಿ ಸೊಕ್ಕಿದಂತಾಗಿ ಕೆಳಕ್ಕೆ ಬಿದ್ದುಬಿಟ್ಟ.
೩೦೧೯. ಸೊಕ್ಕು ಮದ್ದು ಹಾಕು = ಪ್ರಜ್ಞೆ ತಪ್ಪಿಸುವ ಮದ್ದನ್ನು ಕೊಡು
ಹೊಂಡದಲ್ಲಿರುವ ಮೀನುಗಳನ್ನು ಹಿಡಿಯಲು ಒಂದು ಬಗೆಯ ಸೊಕ್ಕು ಬರುವ ಸೊಪ್ಪನ್ನು ಅರೆದು ನೀರಿಗೆ ಹಾಕಿದರೆ, ಮೀನುಗಳು ಪ್ರಜ್ಞೆ ತಪ್ಪಿ ಹೊಟ್ಟೆ ಮೇಲಾಗಿ ನೀರಿನ ಮೇಲೆ ತೇಲುತ್ತವೆ. ಆಗ ಮೀನು ಬೇಟೆಗಾರ ಅವುಗಳನ್ನು ಹಿಡಿದು ಬುಟ್ಟಿಗೆ ಹಾಕಿಕೊಳ್ಳುತ್ತಾನೆ. ಆ ಹಿನ್ನೆಲೆಯಿಂದ ಮೂಡಿರುವ ನುಡಿಗಟ್ಟು ಇದು.
ಪ್ರ : ಸೊಕ್ಕು ಮದ್ದು ಹಾಕಿದೇಟಿಗೇ ಮೀನುಗಳೆಲ್ಲ ಹೊಟ್ಟೆ ಮೇಲಾಗಿ ತೇಲತೊಡಗಿದವು.
೩೦೨೦. ಸೊಕ್ಕು ಮುರಿ = ಅಹಂಕಾರ ಧ್ವಂಸ ಮಾಡು
(ಸೊಕ್ಕು = ನೆಣ, ಗರ್ವ)
ಪ್ರ : ಸೊಕ್ಕು ಮುರಿದ ಮೇಲೆ ಹಲ್ಲು ಕಿತ್ತು ಹಾವಿನಂತಾದ.
೩೦೨೧. ಸೊಟ್ಟಗ ಇದ್ದೂ ಕೈ ಸುಟ್ಟುಕೊಳ್ಳು = ಉಪಾಯ ಇದ್ದೂ ಅಪಾಯ ತಂದುಕೊಳ್ಳು
(ಸೊಟ್ಟಗ < ಸಟ್ಟುಗ = ಸೌಟು)
ಪ್ರ : ಸೊಟ್ಟಗ ಇದ್ದೂ ಕೈ ಸುಟ್ಟುಕೊಳ್ಳೋದು ಹೆಡ್ಡತನ
೩೦೨೨. ಸೊಣಮಣ ಎನ್ನು = ಕೆಲಸಕ್ಕೆ ಬರದ ಮಾತಾಡು, ವಿನಾಕಾರಣ ತಡಮಾಡು
ಪ್ರ : ಗಾದೆ – ಸೊಣಮಣ ಅನ್ನುವಾಗ್ಗೆ ಸರೊತ್ತಾಯ್ತು
ಗಣಗಣ ಕಾದ ಗುಳಾನ ನೀರಿಗದ್ದೋದು ಯಾವಾಗ?
೩೦೨೩. ಸೊಣಗ ಬುದ್ಧಿ ತೋರಿಸು = ಸಾಕಿದವರ ಕಾಲು ಕಚ್ಚುವ ಕೆಲಸ ಮಾಡು
(ಸೊಣಗ < ಶುನಕ = ನಾಯಿ)
ಪ್ರ : ಸಾಕಿದವರ ಕಾಲು ಕಚ್ಚೋ ಸೊಣಗ ಬುದ್ಧಿ ತನ್ನದು ಅಂತ ತೋರಿಸ್ಕೊಂಡ, ಕ್ರಿಯಾಭ್ರಷ್ಟ!
೩೦೨೪. ಸೊಣೆ ತೊಣಕು = ಹೊಂಡದ ನೀರು ಎರಚಿ ಮೀನು ಹಿಡಿ
(ಸೊಣೆ < ದೊಣೆ = ಕೊಳ, ಹೊಂಡ; ತೊಣಕು = ನೀರು ಬತ್ತಿಸಿ ಮೀನು ಹಿಡಿ)
ಪ್ರ : ಜಾನಪದದ ಸೊಣೆ ತೊಣಕಿದವನು, ಎಂದೂ ಭಾವಾಭಿವ್ಯಕ್ತಿಗಾಗಿ ತಿಣುಕುವುದಿಲ್ಲ.
೩೦೨೫. ಸೊನ್ನೆ ಬೀಳು = ಏನೂ ಸಿಗದಂತಾಗು, ಏನೂ ಇಲ್ಲದಂತಾಗು
(ಸೊನ್ನೆ < ಶೂನ್ಯ = ಬಯಲು, ಖಾಲಿ)
ಪ್ರ : ನಿನ್ನ ಜೊತೆ ಆಡ್ಕೊಂಡು ರಾತ್ರಿ ಊಟಕ್ಕೆ ಸೊನ್ನೆ ಬೀಳ್ತು.
೩೦೨೬. ಸೊಪ್ಪು ಹಾಕದಿರು = ಲಕ್ಷ್ಯ ಕೊಡದಿರು, ಕಿವಿ ಮೇಲೆ ಹಾಕಿಕೊಳ್ಳದಿರು
ರೇಷ್ಮೆ ಬೇಸಾಯ ಬೇಸಾಯ ಈ ನುಡಿಗಟ್ಟಿಗೆ ಮೂಲ ರೇಷ್ಮೆ ಹುಳುಗಳನ್ನು ಸಾಕಣೆ ಮಾಡುವವರು ನಿಗದಿತ ವೇಳೆಗೆ ಸರಿಯಾಗಿ ಅವುಗಳಿಗೆ ಸೊಪ್ಪನ್ನು ಉತ್ತರಿಸಿ ಹಾಕಿ, ಅವು ಮೇಯಲು ಅನುವು ಮಾಡಿಕೊಡಬೇಕು. ಹಾಗೆ ಮೈಯೆಲ್ಲ ಎಚ್ಚರವಾಗಿ ಸಾಕಿದರೆ ಉತ್ತಮ ಬೆಳೆ ಬರುತ್ತದೆ. ಅಂದರೆ ಲಕ್ಷ್ಯವಿಲ್ಲದಿದ್ದರೆ ಆ ಬೆಳೆ ನಾಶವಾಗುತ್ತದೆ ಎಂಬ ಭಾವ ಅನುಕ್ತ.
ಪ್ರ : ಸೊಪ್ಪು ಹಾಕದಿದ್ದರೆ, ಅವನೇ ಸಪ್ಪೆ ಮೋರೆ ಹಾಕ್ಕೊಂಡು ಬಂದು ಅಂಗಲಾಚ್ತಾನೆ.
೩೦೨೭. ಸೊಬಾವ ಸರಿಬೀಳದಿರು = ವರ್ತನೆ ಹಿಡಿಸದಿರು
(ಸೊಬಾವ < ಸ್ವಭಾವ = ವರ್ತನೆ)
ಪ್ರ : ಗಾದೆ – ಸೊಬಾವ ಸರಿಬೀಳದೆ ಸೊರೂಪ ಹುಳಿ ಹುಯ್ಕೊಂತೀಯ?
೩೦೨೮. ಸೊರಗಿ ಸೊಪ್ಪಾಗು = ಬಾಡಿ ಬತ್ತಿ ಹೋಗು
(ಸೊರಗು = ಬಾಡು, ಶಕ್ತಿಗುಂದು)
ಪ್ರ : ಸೊರಗಿ ಸೊಪ್ಪಾಗಿ ಕುಳಿತಿರೋನ ಮೇಲೆ ಎರಗಿ ಬೀಳ್ತಿಯಲ್ಲ?
೩೦೨೯. ಸೊರ ಇರುಕಿಸಿಕೊಳ್ಳು = ಮೇಲೆ ತೊಟ್ಟಿನಿಂದ ಹಾಲು ಜಿನುಗದಂತೆ ತಡೆಹಿಡಿದುಕೊಳ್ಳು
(ಸೊರ < ಸೊರೆ < ತೊರೆ = ಹಾಲು ಸುರಿಯುವಿಕೆ, ಜಿನುಗುವಿಕೆ) ದನಗಳಿಗೂ ತಾಯ್ತನ ಅನ್ನುವ ಪ್ರೀತಿ ಇರುತ್ತದೆ. ಕರುವನ್ನು ಮೊದಲು ಕುಡಿಯಲು ಬಿಡದೆ ದುರಾಸೆಯ ಜನ ತಾವು ಮೊದಲು ಕರೆದುಕೊಳ್ಳಲು ಹೋದರೆ ಹಸು ಹಾಲನ್ನು ಇರುಕಿಸಿಕೊಳ್ಳುತ್ತದೆ. ಅದರ ವತ್ಸ ಪ್ರೇಮ ನಿಸರ್ಗಸಹಜವಾದದ್ದು.
ಪ್ರ : ಕರೆದರೆ ಹಾಲು ಬರಲ್ಲ, ಲಗಾಡಿ ಹಸ ಸೊರ ಇರುಕಿಸಿಕೊಂಡಿದೆ.
೩೦೩೦. ಸೊರ ಬಿಡು = ಹಾಲಿಳಿದ ಕೆಚ್ಚಲು ತುಂಬಿದ ಕೊಡವಾಗು
ಪ್ರ : ಹಸು ಸೊರ ಬಿಡಬೇಕಾದರೆ ಮೊದಲು ಕುಡಿಯೋಕೆ ಕರು ಬಿಡಬೇಕು.
೩೦೩೧. ಸೊರ್ರ‍ಬುಸ್ಸ ಎನ್ನು = ಅಳು, ದುಃಖಿಸು
ಜನಪದ ನುಡಿಗಟ್ಟುಗಳು ಚಿತ್ರಕ ಶಕ್ತಿಯನ್ನು ಒಳಗೊಂಡಿವೆ. ಅಳುವಾಗ ಮೂಗಿನಿಂದ ಗೊಣ್ಣೆ ತೊಟ್ಟಿಕ್ಕುತ್ತದೆ. ಅದನ್ನು ಮೇಲಕ್ಕೆ ‘ಸೊರ್’ ಎಂದು ಎಳೆದುಕೊಳ್ಳುತ್ತಾರೆ. ದುಃಖದ ಆವೇಗದಿಂದ ಭುಸ್ ಭುಸ್ ಎಂದು ಉಸಿರು ಬಿಡುತ್ತಾರೆ, ತಿದಿ ಒತ್ತಿದಂತೆ. ಅಳುವಾಗಿನ ಆ ಕ್ರಿಯೆಗಳ ಪಡಿಯಚ್ಚಿನಿಂದಲೇ ಎರಕಗೊಂಡಿದೆ ಈ ನುಡಿಗಟ್ಟು.
ಪ್ರ : ಹೆಣದ ಸುತ್ತ ಕುಳಿತವರೆಲ್ಲ ಸೊರ್ರ‍ಬುಸ್ಸ ಎನ್ನುವವರೇ.
೩೦೩೨. ಸೊಲ್ಲಡಗು = ಮಾತು ನಿಲ್ಲು, ಸಾಯು
(ಸೊಲ್ಲು < ಶೊಲ್ (ತ) = ಮಾತು, ಶಬ್ದ)
ಪ್ರ : ನನ್ನ ಮೇಲೆ ಇಲ್ಲದ ಗುಲ್ಲೆಬ್ಬಿಸಿದ ಅವನ ಸೊಲ್ಲಡಗುವಂತೆ ಮಾಡಪ್ಪ ದೇವರೇ ಅಂತ ನಿತ್ಯ ಮೊರೆ ಇಡ್ತೀನಿ.
೩೦೩೩. ಸೋಕಿದರೆ ಸುಂಕ ತೆಗೆದುಕೊಳ್ಳು = ಸುಲಿದು ತಿನ್ನು
(ಸೋಕು = ಸ್ಪರ್ಶಿಸು; ಸುಂಕ = ತೆರಿಗೆ) ಸಂಭೋಗಿಸಿದರೆ ಸುಂಕ ತೆಗೆದುಕೊಳ್ಳುವುದಿರಲಿ, ಮೈ ಸೋಕಿದರೂ ಸುಂಕ ವಸೂಲ್ ಮಾಡುವ ವೇಶ್ಯಾವಾಟಿಕೆಗಳ ವ್ಯವಹಾರದ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟಿದು.
ಪ್ರ : ಅವಳ್ನ ಸಾಮಾನ್ಯ ಅಂತ ತಿಳ್ಕೋಬೇಡ, ಸೋಕಿದರೆ ಸುಂಕ ತಗೊಳ್ತಾಳೆ.
೩೦೩೪. ಸೋಗು ಹಾಕು = ವೇಷ ಕಟ್ಟು, ನಟನೆ ಮಾಡು
(ಸೋಗು = ವೇಷ)
ಪ್ರ : ಸೋಗು ಹಾಕಿ ಹೊಟ್ಟೆ ಹೊರೆಯೋದ್ಕಿಂತ ದೇವರು ಕೊಟ್ಟ ರೆಟ್ಟೇಲಿ ದುಡಿದುಣ್ಣೋರು ವಾಸಿ.
೩೦೩೫. ಸೋಜಿಗವಾಗು = ವಿಸ್ಮಯವಾಗು
ಪ್ರ : ಸೂಜೀಲಿ ಹೊಡೆದದ್ದಕ್ಕೆ ಸೊರಗಿ ಬಿದ್ದ ಮಾಯಾಂಗನೆ ಕಂಡು ಸೋಜಿಗವಾಯ್ತು.
೩೦೩೬. ಸೋಟೆಗೆಟ್ಟು = ಕಟಬಾಯಿಗೆ ತಿವಿ
(ಸೋಟೆ = ಕಟವಾಯಿ, ಕೆನ್ನೆ ; ಹೆಟ್ಟು = ತಿವಿ)
ಪ್ರ : ಗಾದೆ – ತೀಟೆ ತೀರಿದ ಮೇಲೆ ಸೋಟೆಗೆಟ್ಟಿದ.
೩೦೩೭. ಸೋಡಾಚೀಟಿ ಕೊಡು = ವಿವಾಹ ವಿಚ್ಛೇದನವಾಗು
ಪ್ರ : ಮೊದಲನೆ ಹೆಂಡ್ರಿಗೆ ಸೋಡಾ ಚೀಟಿ ಕೊಟ್ಟು, ಇವಳ್ನ ಮದುವೆಯಾದ.
೩೦೩೮. ಸೋಬನ ಮಾಡು = ತಕ್ಕ ಶಾಸ್ತಿ ಮಾಡು
(ಸೋಬನ < ಶೋಭನ = ಪ್ರಸ್ತ, ನಿಷೇಕ)
ಪ್ರ : ನಾಳೆ ಬರಲಿ, ಅವನಿಗೆ ಸೋಬನ ಮಾಡಿ ಕಳಿಸ್ತೀನಿ.
೩೦೩೯. ಸೋರಿ ಹೋಗು = ನಷ್ಟವಾಗು
ಪ್ರ : ಬಂದ ಆದಾಯವೆ‌ಲ್ಲ ಸೋರಿ ಹೋಗಿ ತಲೆ ಮೇಲೆ ಕೈಹೊತ್ಕೊಂಡು ಕೂತವನೆ.
೩೦೪೦. ಸೋಸಿ ಹಾಕಿದಂತಿರು = ಕೃಶವಾಗು, ಬತ್ತಿ ಹೋಗು
(ಸೋಸು < ಶೋಧಿಸು = ಕಲ್ಲು ಮಣ್ಣು ಕಸ ಕಡ್ಡಿ ತೆಗೆದು ಶುದ್ಧಗೊಳಿಸು)
ಪ್ರ : ಅಷ್ಟು ದೊಡ್ಡಾಳು ಈಗ ಸೋಸಿ ಹಾಕಿದಂಗಾಗಿದ್ದಾನೆ.
೩೦೪೧. ಸೋಸಿ ನೋಡು = ಮೂಲ ಚೂಲವನ್ನೆಲ್ಲ ಸಮಗ್ರವಾಗಿ ಪರಿಶೀಲಿಸಿ ನೋಡು
ಪ್ರ : ಅವನ ಜಾಯಮಾನವನ್ನೆಲ್ಲ ಜಾಲಾಡಿದ್ದೇ ಅಲ್ಲದೆ ಸೋಸಿಯೂ ನೋಡಿದ್ದೇನೆ.
೩೦೪೨. ಸೌರಣೆ ಮಾಡು = ಸರಿದೂಗಿಸು
(ಸೌರಣೆ < ಸವರಣೆ < ಸಂವರಣೆ < ಸಂವರಣ < ಸಂಭರಣ = ಸರಿದೂಗಿಸುವಿಕೆ)
ಪ್ರ : ಈ ಮನೆಯ ಎಲ್ಲವನ್ನೂ ಎಲ್ಲರನ್ನೂ ಸೌರಣೆ ಮಾಡೋಕೆ ನನ್ನಿಂದಾಗಲ್ಲ.
೩೦೪೩. ಸಂಗನಂತಾಡು = ನಪುಂಸಕನಂತಾಡು
(ಸಂಗ = ಷಂಡ ; ನಪುಂಸಕ)
ಪ್ರ : ಸಂಗನಂತಾಡೋನ್ನ ಕೈಹಿಡಿಯೋ ಬದಲು ಮಂಗನಂತಾಡೋನ್ನ ಕೈಹಿಡಿಯೋದು ಮೇಲು.
೩೦೪೪. ಸಂಚಕಾರವಾಗು = ಕೇಡಾಗು, ಮೋಸವಾಗು
ಪ್ರ : ಸಂಚುಗಾರರ ಮಾತಿಗೆ ಒಪ್ಪಿದರೆ ಮುಂದೆ ನಿನಗೇ ಸಂಚಕಾರವಾಗ್ತದೆ.
೩೦೪೫. ಸಂಚಿ ತುಂಬು = ಮಡಿಲುದುಂಬು
(ಸಂಚಿ = ಚೀಲ, ಎಲೆಅಡಿಕೆ ಚೀಲ)
ಪ್ರ : ಸಂಚಿ ತುಂಬುವ ಶಾಸ್ತ್ರ ಆದ ಮೇಲೆ, ಉಳಿದದ್ದು ಮಾಡಿಕೊಂಡರಾಯ್ತು.
೩೦೪೬. ಸಂಜೇಲಿ ಬಂದ ನಂಟನಾಗು = ಉಳಿದುಕೊಳ್ಳು, ಠಿಕಾಣಿ ಹೂಡು
ಪ್ರ : ಗಾದೆ – ಸಂಜೇಲಿ ಬಂದ ಮಳೆ, ಸಂಜೇಲಿ ಬಂದ ನಂಟ ಬೇಗ ಹೋಗಲ್ಲ.
೩೦೪೭. ಸಂತೆ ಮಾತು ಕಟ್ಟಿಕೊಳ್ಳು = ಗಾಳಿ ಸುದ್ದಿ ನಂಬಿಕೊಳ್ಳು
ಪ್ರ : ಸಂತೆ ಮಾಡು ನಂಬ್ಕೊಂಡು ಸಂಸಾರದಲ್ಲಿ ಕಂಟು ಮಾಡ್ಕೊಂತೀಯ?
೩೦೪೮. ಸಂತೆ ಯಾಪಾರ ಮುಗಿಸು = ಮರಣ ಹೊಂದು.
(ಯಾಪಾರ < ವ್ಯಾಪಾರ = ಖರೀದಿ, ಮಾರಾಟ) ಸಂತೆ ಮುಂಜೇಲಿ ಕೂಡಿ ಸಂಜೇಲಿ ಖಾಲಿಯಾಗುವಂಥದು. ಮೊದಲು ಬಂದವರು ಸಂತೆ ಮುಗಿಸಿ ವಾಪಸ್ಸು ಹೋಗುತ್ತಿದ್ದರೆ, ಇನ್ನೂ ಕೆಲವರು ತಡವಾಗಿ ಸಂತೆಗೆ ಬರುತ್ತಿರುತ್ತಾರೆ. ಹಾಗೆಯೇ ಮನುಷ್ಯ ಜೀವನವೂ ಸಹ. ಬರುವವರು ಬರುತ್ತಿರುತ್ತಾರೆ ಹೋಗುವವರು ಹೋಗುತ್ತಿರುತ್ತಾರೆ, ಸಂತೆ ವ್ಯಾಪಾರ ಮುಗಿಸಿಕೊಂಡು.
ಪ್ರ : ಅವನು ಸಂತೆ ಯಾಪಾರ ಮುಗಿಸಿ ವಾಪಸ್ಸು ಹೋದದ್ದೇ ಗೊತ್ತಾಗಲಿಲ್ಲ.
೩೦೪೯. ಸಂತೆ ಸೇರು = ಗುಂಪು ಕೂಡು
(ಸಂತೆ < ಸಂಸ್ಥೆ < ಸಂಸ್ಥಾ = ಕೂಟ)
ಪ್ರ : ಗಾದೆ – ಸಂತೆ ಸೇರೋಕೆ ಮೊದಲು ಗಂಟುಕಳ್ಳರು ಸೇರಿದರು.
೩೦೫೦. ಸಂದಿಗೊಂದಿಯೆಲ್ಲ ಸಿದುಗು = ಮೂಲೆ ಮುಡುಕನ್ನೆಲ್ಲ ಹುಡುಕು
(ಸಿದುಗು = ಹುಡುಕು)
ಪ್ರ : ಸಂದಿಗೊಂದಿನೆಲ್ಲ ಸಿದುಗಿದೆ, ಆದರೂ ಸಿಗಲಿಲ್ಲ.
೩೦೫೧. ಸಂಧೀಲಿ ಸಮಾರಾಧನೆ ಮಾಡು = ಇಕ್ಕಟ್ಟಿನಲ್ಲಿ ಸ್ವಾರ್ಥವನ್ನು ಸಾಧಿಸಿಕೊಳ್ಳು
(ಸಮಾರಾಧನೆ = ಸಂತರ್ಪಣೆ)
ಪ್ರ : ಈ ಕಾಲದಲ್ಲಿ ಸಂಧೀಲಿ ಸಮಾರಾಧನೆ ಮಾಡೋರೆ ತುಂಬಿ ತುಳುಕ್ತಾರೆ.
೩೦೫೨. ಸಂದು ಆಗು = ಮಂದವಾಗು
(ಸಂದು = ಮಕ್ಕಳಿಗೆ ಅಜೀರ್ಣದಿಂದ ಕಿವಿಯೆಲ್ಲ ತಣ್ಣಗಾಗಿ ಭೇದಿಯಾಗುವುದು)
ಪ್ರ : ಮಗುವಿಗೆ ಸಂದು ಆಗಿದೆ, ಸಂದು ಹಾಕಿ.
೩೦೫೩. ಸಂದು ಹಾಕು = ಸುಟಿಗೆ ಹಾಕು
ಮಕ್ಕಳಿಗೆ ಮಂದವಾಗಿ, ಅಜೀರ್ಣವಾಗಿ ಭೇದಿಯಾಗತೊಡಗಿದರೆ ಸಂದು ಆಗಿದೆಯೆಂದು ಹಳ್ಳಿಯ ಜನ ಬಳೆಯ ಓಡನ್ನು ಕಾಯಿಸಿ ಕಳಗುಣಿಗೆ (ಹೆಕ್‌ಶಿರದಲ್ಲಿರುವ ಕೆಳಗುಣಿಗೆ) ಸುಡಿಗೆ ಹಾಕುವುದಕ್ಕೆ ಸಂದು ಹಾಕವುದು ಎನ್ನುತ್ತಾರೆ. ಇದು ಅವೈಜ್ಞಾನಿಕ. ಇತ್ತೀಚೆಗೆ ಈ ಮೌಢ್ಯಾಚರಣೆ ಮಾಯವಾಗುತ್ತಿರುವುದು ಸಂತೋಷದ ವಿಷಯ.
ಪ್ರ : ಮೊದಲು ನೀನು ಸಂದು ಹಾಕು, ಮಗು ಹುಷಾರಾಗ್ತದೆ.
೩೦೫೪. ಸುಂಕು ಮುರಿಯದಿರು = ಗರಿಗರಿಯಾಗಿರು, ಬಳಸಿ ಸವಕಲಾಗದಿರು
(ಸುಂಕು = ತಾಜಾತನ, ಮೇಲುಗಡೆಯ ಉರುಕು)
ಪ್ರ : ಜನಪದರ ನುಡಿಗಟ್ಟುಗಳೂ ಒಂದೇ, ಸುಂಕು ಮುರಿಯದ ನಾಣ್ಯಗಳೂ ಒಂದೆ.
೩೦೫೫. ಸುಂಟರಗಾಳಿ ಏಳು = ಮಣ್ಣ ಕಣಕ್ಕೂ, ಹುಲ್ಲಿನ ಗರಿಗೂ ಮೇಲೇರುವ ಭಾಗ್ಯ ಬರು.
ಪ್ರ : ಸುಂಟರಗಾಳಿ ಎದ್ದರೆ, ಹುಲ್ಲುಕಡ್ಡೀನೂ ಮುಗಿಲಿಗೇರ್ತದೆ, ಮರೀಬೇಡ.
೩೦೫೬. ಸೊಂಟದ ಕೆಳಗಿನ ಮಾತಾಡು = ಮರ್ಮಾಂಗಗಳ ಮಾತಾಡು, ಅಶ್ಲೀಲ ಮಾತಾಡು.
ಪ್ರ : ದಯವಿಟ್ಟು ನೀನು ಸೊಂಟದ ಕೆಳಗಿನ ಮಾತಾಡಬೇಡ.
೩೦೫೭. ಸೊಂಟ ಮುರಿಯ ಗೇಯು = ನಡುಮುರಿಯುವಂತೆ ಕೆಲಸ ಮಾಡು, ಶ್ರಮಿಸು
ಪ್ರ : ಗಾದೆ – ಸೊಂಟ ಮುರಿಯ ಗೇಯೋಳಿಗಿಂತ
ಸೊಂಟವೇರಿ ----ಳೆ ಹೆಚ್ಚು.

*********

3 ಕಾಮೆಂಟ್‌ಗಳು: