ನನ್ನ ಪುಟಗಳು

04 ನವೆಂಬರ್ 2017

ಅಕ್ಷರ ಜಾತ್ರೆ

ಸುಖನಿದ್ರೆಯೊಳು ನಿದ್ರಿಸುತಿರಲು ನಸುಕಿನ ಕನಸೊಳು
 ಅಕ್ಷರ ಜಾತ್ರೆಯಲಿ ತಾಯಿ ಭುವನೇಶ್ವರಿಯ ನುಡಿತೇರು
ವೈಭವದೋಳು ಭರದಿಂ ಸಾಗುತ್ತಿತ್ತು//1//

ನುಡಿತೇರನೆಳೆಯುವಾಸೆಯಿಂದ ಕರಚಾಚಿದೆನಾನಾಗ
 ಎನ್ನೊಳಮನಸು ಕೇಳಿತು
 ಶ್ರೀವಿಜಯ ಬಸವ ಮುದ್ದಣ್ಣ ಕುವೆಂಪು ಬರಗೂರರಂತೆ
ಆರ ತರದಿ ನೀ ಎಳೆವೆಯೆಂದು?
ಶ್ರೀವಿಜಯನೆಂತೆಳೆಯಲು ಅಮೋಘವರ್ಷನ ಆಶ್ರಯವಿಲ್ಲ
 ಬಸವರೆಂತೆಳೆಯಲು ಶರಣರ ಸಂಗವಿಲ್ಲ
ಮುದ್ದಣ್ಣರಂತೆಳೆಯಲು ಮನೋರಮೆಯಂತ ಮಡದಿಯಿಲ್ಲ
ಕುವೆಂಪುರಂತೆಳೆಯಲು ವಿಶ್ವ ಬ್ರಾತೃತ್ವವಿಲ್ಲ
ಇನ್ನು ಬರಗೂರರಂತೆಳೆಯಲು ಬಂಡಾಯದ ಗುಂಡಿಗೆ ಎನಗಿಲ್ಲ
ನುಡಿತೇರನೆಳೆವಶಕ್ತಿ ಎನಗಿಲ್ಲ//2 ॥

ಅಷ್ಟಭುಜಗಳಿಗೊಂದರಂತೆ
ಅಷ್ಟಜ್ಞಾನಪೀಠಗಳಿಂದ ಶೋಭಿಸುತ್ತಿರುವ
ಕನ್ನಡಾಂಬೆಯ ಭವ್ಯ ಮೂರ್ತಿಗೆ ಪೂಜಿಪಲೊರಟಾಗ
ಮತ್ತೆ ಎನ ಒಳ ಮನಸೇ ಕೇಳಿತು
ಪಂಪ ಕೇಶಿರಾಜ ನಾಗವರ್ಮ ಕುಮಾರವ್ಯಾಸ
ಆರ ತೆರದಿ ನೀ ಪೂಜಿಪೆಯೆಂದು ಪಂಪನ ತೆರದಿ ಪೂಜಿಪಲು ನಾ ಕವಿಯು ಅಲ್ಲ
ಕಲಿಯೂ ಅಲ್ಲ ಕೇಶಿರಾಜನ ತೆರದಿ ಸ್ವರಾಭಿಷೇಕ ಮಾಡಲು ವ್ಯಾಕರಣ ತಿಳಿದಿಲ್ಲ
ನಾಗವರ್ಮನ ತೆರದಿ ಛಂದೋಮಾಲೆಯಾಕಲು ನಿಯಮಗಳು ಗೊತ್ತಿಲ್ಲ
ಕುಮಾರವ್ಯಾಸನಂತೆ ಹಾಡಿ ಹೊಗಳಲು ಗಾಯನಕಲೆ ತಿಳಿದಿಲ್ಲ//3//

ತೃಣಸಮಾನ ಜ್ಞಾನ ತುಂಬಿಹ
ಎನಮಸ್ತಿಷ್ಕದೊಳು ಸರ್ವಜ್ಞನಂತೆ
ನಿನ ಮೂರ್ತಿಗೆ ಪೂಜಿಪ ಪುಣ್ಯ ಎನಗಿಲ್ಲವೆಂದು ಕೊರಗುತಿರಲು
ನೆರೆದಿದ್ದ ಜನಸ್ತೊಮ ಜೈಕಾರವಾಕಿದಾಗ
ಕನಸೆಂಬುದ ಮರೆತು ಎನಗರಿಯದೆ ನಾ ಕೂಗಿದ್ದೆ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ//4//

ರಚನೆ:- ಕಾಂತರಾಜು ಬುಕ್ಕಪಟ್ಟಣ 
ಪ.ಪ್ರಾ.ಶಿಕ್ಷಕ 
ಉ.ಸ.ಹಿ.ಪ್ರಾ.ಪಾಠಶಾಲೆ, ಮಧ್ಯವೆಂಕಟಾಪುರ 
ಕೊರಟಗೆರೆ ತಾ. ಮಧುಗಿರಿ ಶೈ.ಜಿಲ್ಲೆ


*********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ