ನನ್ನ ಪುಟಗಳು

05 ಜನವರಿ 2018

9ನೆಯ ತರಗತಿ- ಪದ್ಯ-7-ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು

ರಾಘವಾಂಕನ ಪರಿಚಯ

      
ರಾಘವಾಂಕ ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.
ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ.
 ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ವೀರಶೈವ ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ. ಈತನ ಜೀವನ ಹಾಗೂ ಕೃತಿಗಳು ಇವನ ಅನಂತರದ ಕೆಲವು ಕವಿಗಳಿಗೆ ಕುತೂಹಲದ, ಗೌರವದ ವಿಷಯಗಳಾಗಿದ್ದವು.ಇವನ ಜೀವನ ಸಂಗತಿಗಳು ತಕ್ಕಮಟ್ಟಿಗೆ ಚೆನ್ನಬಸವಪುರಾಣದಲ್ಲಿ, ಗುರುರಾಜ ಚಾರಿತ್ರದಲ್ಲಿ, ಭೈರವೇಶ್ವರಕಾವ್ಯ ಕಥಾಮಣಿ ಸೂತ್ರರತ್ನಾಕರದಲ್ಲಿ, ಪದ್ಮರಾಜ ಪುರಾಣದಲ್ಲಿ , ಹರಡಿಕೊಂಡಿವೆ.
ಎಲ್ಲಕ್ಕೂ ಮಿಗಿಲಾಗಿ ರಾಘವಾಂಕನ ಕವಿಕಾವ್ಯ ಜೀವನವನ್ನೇ ವಸ್ತುವಾಗಿ ಮಾಡಿಕೊಂಡ ಸಿದ್ದನಂಜೇಶನ ರಾಘವಾಂಕ ಚಾರಿತ್ರ ಒಂದು ವೆಶೇಷ ರೀತಿಯ ಕೃತಿಯಾಗಿದೆ.

ಜೀವನ
           
ರಾಘವಾಂಕ ಹಂಪೆಯಲ್ಲಿ ಹುಟ್ಟಿ ಬೆಳೆದವ. ಇವನ ತಂದೆ ಮಹಾದೇವಭಟ್ಟ ,ತಾಯಿ ರುದ್ರಾಣಿ. ಹರಿಹರ ಇವನ ಸೋದರ ಮಾವ ಮತ್ತು ಗುರು. ಆತ ದೀಕ್ಷಾಗುರು, ಕಾವ್ಯಗುರುವೂ ಹೌದು. ಹರಿಹರನಂತೆ ರಾಘವಾಂಕನೂ ಪಂಪಾ ವಿರೂಪಾಕ್ಷನ ಪರಮಭಕ್ತ. ಹಂಪೆಯ ಶಂಕರಪ್ರಭು , ಹಂಪೆಯ ಮಾದಿರಾಜ, ಹಂಪೆಯ ಹರೀಶ್ವರ ಇದು ರಾಘವಾಂಕನ ಗುರುಪರಂಪರೆ.ತಾನು ಹರಿಹರನ ವರಸುತ ಎಂದು ಈತ ಹೇಳಿಕೊಂಡಿದ್ದಾನೆ.ಈತ ಸಂಸ್ಕೃತ ಭಾಷೆಗಳಲ್ಲಿಯೂ ಸಮಸ್ತ ಲೌಕಿಕ ವೈದಿಕ ವಿದ್ಯೆಗಳಲ್ಲಿಯೂ ಪರಿಣಿತನಾಗಿದ್ದ . 'ಉಭಯಕವಿ ಕಮಲರವಿ'ಯಾದ ಈತ ಹರಿಶ್ಚಂದ್ರಕಾವ್ಯವನ್ನು ರಚಿಸಿ ಪಂಪಾಪುರದ ದೇವರಾಜನ ಸಭೆಯಲ್ಲಿ ಓದಿ ವಿದ್ವಾಂಸರನ್ನೊ ರಾಜನನ್ನೂ ಮೆಚ್ಚಿಸಿದ್ದ್ದ.. ರಾಜ ಇವನಿಗೆ 'ಕವಿಶರಭಭೇರುಂಡ' ಎಂಬ ವಾದದ ಪೆಂಡೆಯವನ್ನು ಕೊಟ್ಟು ಸನ್ಮಾನಿಸಿದ. ರಾಜಸಭೆಯಲ್ಲಿ ಹೀಗೆ ಮೆಚ್ಚುಗೊಂಡ ಹರಿಶ್ಚಂದ್ರಕಾವ್ಯವನ್ನು ರಾಘವಾಂಕ ಹೊನ್ನ ಹರಿವಾಣದಲ್ಲಿರಿಸಿ ತಂದು ತನ್ನ ಗುರುವು ಮಾವನೂ ಆದ ಹರಿಹರನ ಮುಂದಿರಿಸಿ ಅವನ ಆಶೀರ್ವಾದಗಳನ್ನು ಬೇಡಿದಾಗ , ಆತ ಮೆಚ್ಚಲೊಲ್ಲದೆ , ನರಸ್ತುತಿ ಮಾಡಿದ ತಪ್ಪಿಗಾಗಿ ರಾಘವಾಂಕನ ಹಲ್ಲುಗಳನ್ನು ಮುರಿದ. ಅನಂತರ ಶೈವಕೃತಿಪಂಚಕಗಳನ್ನು ರಚಿಸಿ ಮರಳಿ ತನ್ನ ಹಲ್ಲುಗಳನ್ನು ಪಡೆದ. ಒಮ್ಮೆ ಓರಂಗಲ್ಲಿನ ಪ್ರತಾಪರುದ್ರದೇವನ ಸಭೆಯಲ್ಲಿ ಏಕದ್ವಿತ್ರಿಸಂಧಿಗ್ರಾಹಿಗಳೆಂಬ ಕುಕವಿಗಳನ್ನು ತನ್ನ ಮೀಸಲು ಕವಿತೆಯಾದ ವೀರೇಶ ಚರಿತ್ರೆಯನ್ನು ಓದುವುದರ ಮೂಲಕ ಭಂಗಿಸಿ ಪ್ರತಾಪರುದ್ರನಿಂದ ಉಭಯಕವಿ ಶರಭಭೇರುಂಡ ಎಂಬ ಹೆಸರು ಪಡೆದ.ಅನಂತರ ಹಂಪೆಗೆ ಬಂದು ಹರಿಹರನ ಆಜ್ಞಾನುಸಾರವಾಗಿ ಬೇಲೂರಿಗೆ ಹೋಗಿ ಅಲ್ಲಿ ಬಯಲಾದ.
ಇದರಲ್ಲಿ ಐತಿಹಾಸಿಕತೆ ಹಾಗು ಸಾಂಕೇತಿಕತೆಗಳೆರಡೂ ಬೆರೆತಿವೆ. ರಾಘವಾಂಕ ಹರಿಹರನ ವರಸುತನೆಂಬ ಹೆಮ್ಮೆಯ ಶಿಷ್ಯ . ಉಭಯ ಭಾಷಾಪಂಡಿತ ತನ್ನ ಪ್ರತಿವಾದಿಗಳೊಂದಿಗೆ ಸೆಣಸಿ ಬದುಕುವ ಛಲ ಉಳ್ಳವ ಎನ್ನುವ ಅಂಶಗಳು ಹೆಚ್ಚು ವಾಸ್ತವಸಮೀಪವಾದವು. ರಾಘವಾಂಕನ ಹಲ್ಲುಗಳನ್ನು ಹರಿಹರ ಮುರಿದದ್ದು ಅನಂತರ ರಾಘವಾಂಕನು ಶೈವಕೃತಿ ಪಂಚಕಗಳನ್ನು ಬರೆದು ಹಲ್ಲುಗಳನ್ನು ಪಡೆದದ್ದು ಈ ದಂತಕತೆ ವಸ್ತು ರೀತಿಗಳೆರಡರಲ್ಲೂ ಹರಿಹರನ ಪರಂಪರೆಗೆ ವಿರೋಧವಾಗಿ ನಡೆದುಕೊಂಡ ರಾಘವಾಂಕನ ಬಗೆಗೆ ಹರಿಹರ ಪರಂಪರೆ ತೋರಿಸಿದ ಪ್ರತಿಕ್ರಿಯೆಯನ್ನೂ ಅನಂತರ ರಾಘವಾಂಕ ಹರಿಹರ ಪರಂಪರೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸಾಂಕೇತಿಸುತ್ತದೆ ಎನ್ನಬಹುದು.

ಕೃತಿಗಳು
ರಾಘವಾಂಕನ ಕಾವ್ಯಗಳು ಆರು.
೧.ಹರಿಶ್ಚಂದ್ರ ಕಾವ್ಯ.
೨.ಸಿದ್ಧರಾಮ ಪುರಾಣ
೩.ಸೋಮನಾಥ ಚರಿತೆ
೪. ವೀರೇಶ ಚರಿತೆ
೫.ಶರಭ ಚಾರಿತ್ರ
೬.ಹರಿಹರ ಮಹತ್ವ - ಈ ಕೃತಿ ಇನ್ನೂ ಸಿಕ್ಕಿಲ್ಲ.
            ಇವಗಳಲ್ಲಿ ಮೊದಲ ನಾಲ್ಕು ದೊರೆತು ಪ್ರಕಟವಾಗಿದೆ.ಶರಭ ಚಾರಿತ್ರ ಹಾಗೂ ಹರಿಹರ ಮಹತ್ವ ಇನ್ನೂ ದೊರೆತಿಲ್ಲ.ಇದೂ ಅಲ್ಲದೆ "ದೇವಾಂಗ ದಾರಿಮಯ್ಯನ ಪುರಾಣ"ಎಂಬ ಸಾಂಗತ್ಯ ಗ್ರಂಥವೊಂದು ದೊರಕಿದ್ದು , ರಾಘವಾಂಕನ ಅಂಕಿತದಲ್ಲಿದೆ. ಇದನ್ನು ರಾಘವಾಂಕ ಬರೆದನೇ ಇಲ್ಲವೆ ಎನ್ನುವ ಬಗ್ಗೆ ಖಚಿತವಾಗಿ ತಿಳಿಯಬೇಕಾಗಿದೆ.

ವಿಮರ್ಶೆ:
ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಪ್ರಧಾನವಾಗಿ ಪ್ರಯೋಗಶೀಲನಾದ ಸ್ವತಂತ್ರ ಮನೋಧರ್ಮದ ಕವಿ.' ಜನ ಬದುಕಬೇಕೆಂದು ಕಾವ್ಯಮುಖದಿಂಪೇಳ್ದನನಪೇಕ್ಶೆಯಿಂದ' ಎಂಬುದು ಇವನ ಕಾವ್ಯೋದ್ದೇಶವಾಗಿತ್ತು. ಮಹಾಕವಿ ಹರಿಹರನ ಸಮಕಾಲೀನನೂ , ವರಸುತನೂ ಆದ ಈತ ಹರಿಹರನ ಪ್ರಭಾವದ ಸೆಳೆತಕ್ಕೆ ಪ್ರತಿಯಾಗಿ ನಿಂತು ತನ್ನದೇ ಆದೊಂದು ಪರಂಪರೆಯನ್ನು ನಿರ್ಮಿಸಿಕೊಂಡವ.ತನಗೆ ಹಿನ್ನೆಲೆಯಲ್ಲಿದ್ದ ಹರಿಹರನ ರಗಳೆಯ ರೀತಿಯನ್ನು ಅನುಸರಿಸದೆ ಮೊತ್ತಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ ದೀರ್ಘ ಕಥಾನಿರೂಪಣೆಗೆ ಸೊಗಸಾಗಿ ಅಳವಡಿಸಿಕೊಂಡದ್ದು ಇವನ ಮಹತ್ವದ ಸಾಧನೆ.ಕನ್ನಡ ಸಾಹಿತ್ಯದಲ್ಲಿ ಕವಿ ರನ್ನನನ್ನು ಬಿಟ್ಟರೆ ಅಷ್ಟೇ ನಾಟ್ಯ ಪ್ರತಿಭೆಯನ್ನು ಪ್ರಕಟಿಸಿದ ಮತೊಬ್ಬ ಕವಿ ರಾಘವಾಂಕ.

ಹರಿಶ್ಚಂದ್ರಕಾವ್ಯ
ಹರಿಶ್ಚಂದ್ರಕಾವ್ಯ ರಾಘವಾಂಕನ ಕೃತಿಗಳಲ್ಲಿಯೇ ಶ್ರೇಷ್ಥವಾದುದು ಮಾತ್ರವಲ್ಲ . ಕನ್ನಡ ಸಾಹಿತ್ಯದಲ್ಲಿಯೇ ಅಪೂರ್ವವಾದ ಕೃತಿ.ರಾಘವಾಂಕನಿಗಿಂತ ಹಿಂದಿನ ಎಲ್ಲ ಆಕಾರಗಳೊಡನೆ ಇದರ ಸಂವಿಧಾನವನ್ನು ಹೋಲಿಸಿದರೆ ಭಾರತೀಯ ಸಾಹಿತ್ಯದಲ್ಲಿಯೇ ಕಾಣದೊರೆಯುವ ನೂತನ ಸನ್ನಿವೇಶಸೃಷ್ಟಿ , ಕೃತಿಬಂಧೆ ಇಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ವಿದ್ವಾಂಸರು ಈ ಕಾವ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು' ಎನ್ನುವ ತತ್ವವನ್ನು ಜೀವನಕ್ಕೆ ಅಳವಡಿಸಿ ಬದುಕಿದ ಸತ್ಯಸಾಧಕ ಹರಿಶ್ಚಂದ್ರನ ಕರುಣಾದ್ಭುತವಾದ ಕಥೆಯೇ ಹರಿಶ್ಚಂದ್ರಕಾವ್ಯ.. ಇದರಲ್ಲಿ ಹದಿನಾಲ್ಕು ಸ್ಥಳಗಳಿದ್ದು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದೆ.ಹರಿಶ್ಚಂದ್ರನ ಪಾತ್ರ ಸತ್ಯ ಸಾಕ್ಷಾತ್ಕಾರಕ್ಕಾಗಿ ನಿರಂತರವೂ ಹೂರಾಡುವ ಆದರ್ಶಾಭೀಪ್ಸೆಯ ಪ್ರತಿಮೆಯಾಗಿದೆ. ಈ ಕೃತಿಯಲ್ಲಿ ಕಂಡುಬರುವ ಶೈಲಿಹದ , ನಾಟ್ಯಮಯವಾದ ಸನ್ನಿವೇಶಗಳು , ಪಾತ್ರಗಳಲ್ಲಿ ಕಂಡುಬರುವ ವೈವಿಧ್ಯ , ಇವೆಲ್ಲವನ್ನೂ ವ್ಯಾಪಿಸಿರುವ ದರ್ಶನ ಇವುಗಳಿಂದ ಈ ಕೃತಿಯನ್ನು ರಾಘವಾಂಕನ ಮಹಾಕಾವ್ಯವೆಂದು ಹೇಳಬಹುದು.
 
ಸಿದ್ಧರಾಮ ಪುರಾಣ
'ಕಾಯಕವೇ ಕೈಲಾಸ' ಎಂಬ ಶರಣರ ವಚನಕ್ಕೆ ಜೀವಂತ ವ್ಯಾಖ್ಯಾನದಂತೆ ಬಾಳಿದ ಸಿದ್ಧರಾಮನ ಜೀವನವನ್ನು ಕುರಿತ ಕೃತಿ . ' ಸಾಕಾರ ನಿಷ್ಠೆ ಭೂತಂಗಳೊಳಗನುಗುಕಂಪತಾನೆ ಪರಬೊಮ್ಮ' ಎಂಬ ಸೂತ್ರವೆ ಸಿದ್ಧರಾಮ ಚರಿತ್ರೆಯಲ್ಲಿ ಅಡಕವಾಗಿರುವ ತತ್ವ. ಇದು ರಾಘವಾಂಕನ ಧರ್ಮ ಶ್ರದ್ಧೆಯ ಸಾತ್ವಿಕ ಪ್ರತಿನಿಧಿಯಾಗಿದೆ.

ಸೋಮನಾಥ ಚರಿತೆ
ಸೌರಾಶ್ಟ್ರದ ಶಿವಭಕ್ತನಾದ ಆದಯ್ಯ ಪುಲಿಗೆರೆಗೆ ಬಂದು ಸೌರಾಶ್ಟ್ರದ ಸೋಮನಾಥನನ್ನು ಅಲ್ಲಿಯ ಜೈನ ಬಸದಿಯಲ್ಲಿ ಪ್ರತಿಷ್ಠಾಪಿಸಿದ ವೀರಮಾಹೆಶ್ವರ ಮನೋಧರ್ಮವನ್ನು ವ್ಯಗ್ರವಾಗಿ ನಿರೂಪಿಸುವ ಕೃತಿ.

ವೀರೇಶ ಚರಿತೆ ಹಾಗೂ ಶರಭ ಚಾರಿತ್ರ ಶಿವಪುರಾಣದ ಕಥೆಗಳು. ವೀರೇಶ ಚರಿತೆಯನ್ನು ಕವಿ ಮೀಸಲುಗವಿತೆ ಎಂದು ಕರೆದಿದ್ದಾನೆ.ಈ ಕೃತಿಯಲ್ಲಿ ರಾಘವಾಂಕ ಪ್ರಯೋಗಿಸಿ ನೋಡಿರುವ ಉದ್ದಂಡ ಷಟ್ಪದಿ ರೌದ್ರರಸವನ್ನು ಅಲೆಅಲೆಯಾಗಿ ಅಭಿವ್ಯಕ್ತಪಡಿಸುವ ಪ್ರಯತ್ನವನ್ನು ತೋರಿಸುತ್ತದೆ.ಶಿವನ ಅವತಾರದ ವೀರಭದ್ರನಿಂದ ದಕ್ಷಯಜ್ಞ ದ್ವಂಸವಾದ ಕಥೆಯೇ ಇದರ ವಸ್ತು. ಇತರೆ ದೇವತೆಗಳಿಗಿಂತ ಶಿವನೇ ಶ್ರೇಶ್ಠ ಎಂಬುದನ್ನು ಸಾರುವ ಉದ್ದೇಶ ಇಲ್ಲಿದೆ.ಶರಭ ಚಾರಿತ್ರ ಹೆಸರೇ ಸೂಚಿಸುವಂತೆ ಮಹಾವಿಷ್ಣುವಿನ ಅವತಾರವನ್ನು ಇಕ್ಕಿಮೆಟ್ಟಿದ ಶಿವನ ಶರಭಾವತಾರದ ಮಹಿಮೆಯನ್ನು ಕುರಿತದ್ದೆಂದು ತೋರುತ್ತದೆ.
(ಮಾಹಿತಿ ಕೃಪೆ: ಕಣಜ) 



ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ಸಾರಾಂಶ


ಸಂದ ಕಾರಿರುಳು ಕನ್ನೆಯರು ಹಗಲಂ ನೋಡ
ಲೆಂದು ಬಂದರೊ ಸುರಾಸುರರಬುಧಿಯಂ ಮಥಿಸು
ವಂದು ಹೊಸ ವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ
ನೊಂದು ಮಾನಿಸರಾದರೋ ಕಮಲಜಂ ನೀಲ   
ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ       
ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ     || || 
ಸಂದ (ಬಂದ) ಕಾರಿರುಳು (ಗಾಢಕತ್ತಲೆಯ ರಾತ್ರಿ) ಕನ್ನೆಯರು (ಕುಮಾರಿಯರು) ಹಗಲಂ (ಹಗಲನ್ನು) ನೋಡಲೆಂದು (ನೋಡುವುದಕ್ಕೆಂದು) ಬಂದರೊ. ಸುರಾಸುರರು (ದೇವತೆಗಳು ಮತ್ತು ರಾಕ್ಷಸರು) + ಅಂಬುಧಿಯಂ (ಸಮುದ್ರವನ್ನು) ಮಥಿಸುವಂದು (ಮಂಥನ ಮಾಡುವಾಗ) ಹೊಸ ವಿಷದ ಹೊಗೆ ಹೊಯ್ದು (ಸುರಿದು) ಕಗ್ಗನೆ (ಕಪ್ಪಗೆ) ಕಂದಿ (ಕಂದುಹೋಗಿ) ಜಲದೇವಿಯರು ಮನದಲಿ (ಮನದಲ್ಲಿ) ನೊಂದು ಮಾನಿಸರ್ (ಮನುಷ್ಯರು) + ಆದರೋ, ಕಮಲಜಂ (ಬ್ರಹ್ಮನು) ನೀಲದಿಂದ (ನೀಲಿ ಬಣ್ಣದಿಂದ) ಮಾಡಿದ ಸಾಲಭಂಜಿಕೆಗಳ್ (ಗೊಂಬೆಗಳು/ವಿಗ್ರಹಗಳು) + ಒದವಿ (ಹುಟ್ಟಿ) ಜೀವಂ (ಜೀವ) + ತಳೆದವೋ(ಪಡೆದವೋ) ಎನಿಪ್ಪಂದದಿಂ (ಎನ್ನಿಸುವಂತೆ) ಬಂದರ್ + ಅಂಗನೆಯರ್ (ಅಂಗನೆಯರು / ಗಾನರಾಣಿಯರು) + ಅವನೀಶನ (ರಾಜನ) + ಎಡೆಗೆ (ಕಡೆಗೆ)
ಕಾಳರಾತ್ರಿಯ ಕನ್ಯೆಯರು ಹಗಲನ್ನು ನೋಡುವುದಕ್ಕೆಂದು ಬಂದರೋ! ದೇವತೆಗಳು ಮತ್ತು ರಾಕ್ಷಸರು ಸಮುದ್ರವನ್ನು ಮಂಥನ ಮಾಡುವ ಸಮಯದಲ್ಲಿ ಹೊರಹೊಮ್ಮಿದ ಹೊಸ ವಿಷದ ಹೊಗೆ ಸುರಿದು, ಕಪ್ಪಾಗಿ ಘನೀಕೃತವಾದಂತೆ ಜಲದೇವಿಯರು ಮನದಲ್ಲಿ ನೊಂದು, ಮನುಷ್ಯರಾದರೋ! ಬ್ರಹ್ಮನು ನೀಲಿ ಬಣ್ಣದಿಂದ ಮಾಡಿದ ಗೊಂಬೆಗಳು ಜೀವವನ್ನು ಪಡೆದವೋ! ಎನ್ನುವಂತೆ ಗಾನರಾಣಿಯರು ಮಹಾರಾಜ ಹರಿಶ್ಚಂದ್ರ ಇರುವಲ್ಲಿಗೆ ಬಂದರು.

ಮಾಯದಬಲೆಯರು ಕಾಣುತ್ತ ಮಝ ಭಾಪದಟ
ರಾಯ ಮಝರೇ ರಾಯ ರಾಯದಳವುಳಕಾಱ
ರಾಯಕಂಟಕ ರಾಯಜಗಜಟ್ಟಿ ರಾಯದಲ್ಲಣ ರಾಯಕೋಳಾಹಳ
ರಾಯಭುಜಬಲಭೀಮ ರಾಯಮರ್ಧನ ರಾಯ
ಜೀಯ ಸ್ಥಿರಂಜೀವಯೆಂದು ಕೀರ್ತಿಸಿ ಗಾಣ
ನಾಯಕಿಯರೊಲಿದು ದಂಡಿಗೆವಿಡಿದು ಪೊಡಮಟ್ಟು ಹಾಡಲುದ್ಯೋಗಿಸಿದರು  || ||
      
ಮಾಯದ + ಅಬಲೆಯರು (ಹೆಣ್ಣುಮಕ್ಕಳು) ಕಾಣುತ್ತ ಮಝ (ಇದು ಹೊಗಳಿಕೆಯ ಒಂದು ಮಾತು/ ಒಂದು ಉದ್ಗಾರವಾಚಕ) ಭಾಪು (ಇದು ಹೊಗಳಿಕೆಯ ಒಂದು ಮಾತು/ ಒಂದು ಉದ್ಗಾರವಾಚಕ) + ಅದಟ (ಶೂರ / ಪರಾಕ್ರಮಿ) ರಾಯ (ರಾಜ) ಮಝರೇ ರಾಯ ರಾಯದಳವುಳಕಾರ (ಶತ್ರು ರಾಜರನ್ನು ಸೂರೆ ಮಾಡುವವನು) ರಾಯಕಂಟಕ (ಶತ್ರುರಾಜರಿಗೆ ಕಂಟಕಪ್ರಾಯ ನಾದವನು) ರಾಯಜಗಜೆಟ್ಟಿ (ರಾಜರಲ್ಲಿ ಜಗಜಟ್ಟಿ) ರಾಯದಲ್ಲಣ (ಶತ್ರುರಾಜರನ್ನು ತಲ್ಲಣಗೊಳಿಸುವವನು) ರಾಯಕೋಳಾಹಳ (ಶತ್ರುರಾಜರಲ್ಲಿ ಕೋಲಾಹಲವನ್ನು ಉಂಟು ಮಾಡುವವನು) ರಾಯಭುಜಬಲಭೀಮ(ಭೀಮನಂತೆ ಬಲಶಾಲಿ) ರಾಯಮರ್ದನ (ಶತ್ರುರಾಜರನ್ನು ನಾಶಮಾಡುವವನು) ರಾಯಜೀಯ (ರಾಜ ಒಡೆಯ) ಸ್ಥಿರಂಜೀವ (ಚಿರಂಜೀವಿಯಾಗು) + ಎಂದು ಕೀರ್ತಿಸಿ ಗಾಣನಾಯಕಿಯರು (ಗಾನನಾಯಕಿಯರು) + ಒಲಿದು (ಪ್ರೀತಿಯಿಂದ) ದಂಡಿಗೆ (ಒಂದು ತಂತಿವಾದ್ಯ) + ಹಿಡಿದು ಪೊಡಮಟ್ಟು (ನಮಸ್ಕರಿಸಿ) ಹಾಡಲು + ಉದ್ಯೋಗಿಸಿದರು (ಪ್ರಾರಂಭಿಸಿದರು)
ಆ ಮಾಯದ ಹೆಣ್ಣುಮಕ್ಕಳಿಬ್ಬರು ಮಹಾರಾಜ ಹರಿಶ್ಚಂದ್ರನನ್ನು ಕಂಡು; ಮಝ, ಭಾಪು, ಅದಟರಾಯ, ಮಝರೇ ರಾಯ, ರಾಯದಳವುಳಕಾರ, ರಾಯಕಂಟಕ, ರಾಯಜಗಜೆಟ್ಟಿ, ರಾಯದಲ್ಲಣ, ರಾಯಕೋಳಾಹಳ, ರಾಯಭುಜಬಲಭೀಮ, ರಾಯಮರ್ದನ ಎಂದು ಗುಣಗಾನ ಮಾಡುತ್ತಾ ಒಡೆಯನೇ ಚಿರಂಜೀವಿಯಾಗು ಎಂದು ಕೀರ್ತಿಸಿದರು. ಆನಂತರ ಆ ಗಾನನಾಯಕಿಯರು ಪ್ರೀತಿಯಿಂದ ನಮಸ್ಕರಿಸಿ ದಂಡಿಗೆ ಹಿಡಿದು ಹಾಡಲು ಪ್ರಾರಂಭಿಸಿದರು.
      
ಎಕ್ಕಲವ ಬಳಿಬಿಡಿದು ಸುತ್ತಿದಾಸಱನು ಮುನಿ
ರಕ್ಕಸನ ಬನಕೆ ಬಂದಂಜಿಕೆಯನೆರಡನೆಯ
ಮುಕ್ಕಣ್ಣನೆನಿಪ ಗುರುವಾಜ್ಞೆಗೆಟ್ಟಳಲನಲ್ಲದೆ ಕನಸ ಕಂಡ ಭಯವ
ಮಿಕ್ಕು ಮಱವಂತಡಸಿ ಕವಿವ ಗತಿಗಳ ಸೊಗಸ
ನಕ್ಕಿಸದೆ ಸಮಯೋಚಿತದ ಪಸಾಯಕ್ಕೆ ಮನ
ವುಕ್ಕಿ ಸರ್ವಾಭರಣಮಂ ಗಾಣರಾಣಿಯರಿಗಿತ್ತನು ಹರಿಶ್ಚಂದ್ರನು        || ||
ಎಕ್ಕಲವ (ಕಾಡುಹಂದಿಯ) ಬಳಿ (ದಾರಿ) + ಹಿಡಿದು ಸುತ್ತಿದ + ಆಸರನು (ದಣಿವನ್ನು / ಬಳಲಿಕೆಯನ್ನು) ಮುನಿ ರಕ್ಕಸನ ಬನಕೆ ಬಂದು + ಅಂಜಿಕೆಯನು (ಅಂಜಿಕೆಯನ್ನು) + ಎರಡನೆಯ ಮುಕ್ಕಣ್ಣನ್ (ಶಿವ) + ಎನಿಪ ಗುರುವಾಜ್ಞೆ + ಕೆಟ್ಟು ಅಳಲನ್ (ದುಃಖವನ್ನು) + ಅಲ್ಲದೆ ಕನಸ ಕಂಡ ಭಯವ (ಭಯವನ್ನು) ಮಿಕ್ಕು (ಅತಿಶಯವಾಗಿ) ಮರೆವಂತೆ ಅಡಸಿ (ಪ್ರಾಪ್ತವಾಗಿ) ಕವಿದ (ಆವರಿಸಿದ) ಗತಿಗಳ (ಸಂಗೀತದ ಗತಿಗಳ) ಸೊಗಸನ್ (ಸೊಗಸನ್ನು) + ಅಕ್ಕಿಸದೆ (ಅಡಗಿಸಿಕೊಳ್ಳದೆ) ಸಮಯೋಚಿತದ ಪಸಾಯಕ್ಕೆ (ಬಹುಮಾನಕ್ಕೆ / ಉಡುಗೊರೆಗೆ) ಮನ + ಉಕ್ಕಿ ಸರ್ವಾಭರಣಮಂ ಗಾಣರಾಣಿಯರಿಗೆ + ಇತ್ತನು (ಕೊಟ್ಟನು)
       ಹರಿಶ್ಚಂದ್ರನು ಕಾಡುಹಂದಿಯನ್ನು ಹಿಂಬಾಲಿಸಿ ಬಂದ ಬಳಲಿಕೆಯನ್ನು, ವಿಶ್ವಾಮಿತ್ರನ ಬನಕ್ಕೆ ಬಂದ ಅಂಜಿಕೆಯನ್ನು, ಎರಡನೆಯ ಶಿವನೆನಿಸಿದ ಗುರು ವಾಲ್ಮೀಕಿಯ ಆಜ್ಞೆಯನ್ನು ಮೀರಿದ ದುಃಖವನ್ನು ಹಾಗೂ ಕಾಡಿನಲ್ಲಿ ಕನಸು ಕಂಡ ಭಯವನ್ನು ಅತಿಶಯವಾಗಿ ಮರೆಯುವಂತೆ ಆವರಿಸಿದ ಸಂಗೀತದ ತಾಳಲಯಗತಿಗಳ ಸೊಗಸನ್ನು ಅಡಗಿಸಿಕೊಳ್ಳದೆ ಹರಿಶ್ಚಂದ್ರನು ಮನದಲ್ಲಿ ಸಂತಸಮೂಡಿಸಿದ ಗಾನರಾಣಿಯರಿಗೆ ಸಮಯೋಚಿತವಾದ ಸರ್ವಾಭರಣವನ್ನು ಬಹುಮಾನವಾಗಿ ಕೊಟ್ಟನು.

ಬಡತನದ ಹೊತ್ತಾನೆ ದೊರಕಿ ಫಲವೇನು ನೀ
ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ
ಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು ಸಾವ ಹೊತ್ತು
ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಿಲು
ಹೊಡೆದು ಬೆಂಡಾಗಿ ಬೀಳ್ವೆಮಗೆ ನೀನೊಲಿದು ಮಣಿ
ದೊಡಿಗೆಗಳನಿತ್ತು ಫಲವೇನು ಭೂಪಾಲ ಹೇಳೆನುತ ಮತ್ತಿಂತೆಂದರು || ||
ಬಡತನದ ಹೊತ್ತು (ಸಮಯದಲ್ಲಿ) + ಆನೆ ದೊರಕಿ ಫಲವೇನು ನೀರಡಸಿರ್ದ (ಬಾಯಾರಿಕೆಯಾದ) ಹೊತ್ತು (ಸಮಯದಲ್ಲಿ) + ಆಜ್ಯ (ತುಪ್ಪವು) ದೊರಕಿ ಫಲವೇನು ರುಜೆಯಡಸಿ (ರೋಗಬಂದು) ಕೆಡೆದಿಹ (ಬಿದ್ದಿರುವ) ಹೊತ್ತು (ಸಮಯದಲ್ಲಿ) ರಂಭೆ ದೊರೆಕೊಂಡಲ್ಲಿ (ದೊರೆತರೆ) ಫಲವೇನು ಸಾವ (ಸಾಯುವ) ಹೊತ್ತು (ಸಮಯದಲ್ಲಿ) ಪೊಡವಿಯ (ಭೂಮಿಯ / ರಾಜ್ಯದ) + ಒಡೆತನ (ದೊರೆತನ) ದೊರಕಿ ಫಲವೇನು ಕಡು + ಬಿಸಿಲು ಹೊಡೆದು ಬೆಂಡಾಗಿ ಬೀಳ್ವ (ಬೀಳುವ) + ಎಮಗೆ (ನಮಗೆ) ನೀನು + ಒಲಿದು ಮಣಿ + ತೊಡಿಗೆಗಳನು (ಆಭರಣಗಳನ್ನು) + ಇತ್ತು (ಕೊಟ್ಟು) ಫಲವೇನು ಭೂಪಾಲ (ಹರಿಶ್ಚಂದ್ರ) ಹೇಳು + ಎನುತ (ಎನ್ನುತ್ತಾ) ಮತ್ತೆ + ಇಂತೆಂದರು (ಹೀಗೆ ಹೇಳಿದರು).
ಬಡತನದ ಸಮಯದಲ್ಲಿ ಆನೆಯು ದೊರೆತು ಫಲವೇನು? ಬಾಯಾರಿಕೆಯ ಸಮಯದಲ್ಲಿ ತುಪ್ಪವು ದೊರಕಿ ಫಲವೇನು? ರೋಗಬಂದು ಬಿದ್ದಿರುವಾಗ ರಂಭೆಯು ದೊರಕಿ ಫಲವೇನು? ಸಾಯುವ ಸಮಯದಲ್ಲಿ ರಾಜ್ಯದ ದೊರೆತನ ದೊರಕಿ ಫಲವೇನು? ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ಸಮಯದಲ್ಲಿ ನಮಗೆ ನೀನು ಪ್ರೀತಿಯಿಂದ ಆಭರಣಗಳನ್ನು ಕೊಟ್ಟು ಫವೇನು?? ಎಂದು ಹೇಳುತ್ತಾ ಗಾನರಾಣಿಯರು ಮತ್ತೆ ಹೀಗೆ ಹೇಳಿದರು.

ಕಡಲೊಳಾಳ್ವಂಗೆ ತೆಪ್ಪವನು ದಾರಿದ್ರಂಗೆ
ಕಡವರವನತಿರೋಗಿಗಮೃತಮಂ ಕೊಟ್ಟಡವ
ರಡಿಗಡಿಗದಾವ ಹರುಷವನೆಯ್ದು ತಿಪ್ಪರವರಂ ಪೋಲ್ವರೀ ಪೊತ್ತಿನ
ಸುಡುಸುಡುನೆ ಸುಡುವ ಬಿಱುಬಿಸಿಲ ಸೆಕೆಯುಸುರ ಬಿಸಿ
ಹೊಡೆದುದುರಿಹತ್ತಿ ಬಾಯ್ ಬತ್ತಿ ಡಗೆ ಸುತ್ತಿ ಸಾ  
ವಡಸುತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು          || ||
ಕಡಲೊಳ್ (ಸಮುದ್ರದಲ್ಲಿ) ಆಳ್ವಂಗೆ (ಮುಳುಗುವವನಿಗೆ) ತೆಪ್ಪವನು (ತೆಪ್ಪವನ್ನು) ದರಿದ್ರಂಗೆ (ಬಡವನಿಗೆ) ಕಡವರವನು (ಚಿನ್ನವನ್ನು / ಸಂಪತ್ತನ್ನು) + ಅತಿರೋಗಿಗೆ + ಅಮೃತಮಂ (ಅಮೃತವನ್ನು) ಕೊಟ್ಟಡೆ (ಕೊಟ್ಟರೆ) ಅವರ್ (ಅವರು) + ಅಡಿಗಡಿಗೆ (ಮತ್ತೆಮತ್ತೆ) ಅದಾವ (ಅದೆಂತಹ) ಹರುಷವನು (ಸಂತೋಷವನ್ನು) + ಎಯ್ದುತಿಪ್ಪರ್ (ಹೊಂದುವರು) + ಅವರಂ (ಅವರನ್ನು) ಪೋಲ್ವರ್ (ಹೋಲುವವರು) + ಈ ಪೊತ್ತಿನ (ಈ ಸಮಯದ) ಸುಡುಸುಡುನೆ ಸುಡುವ ಬಿರುಬಿಸಿಲ ಸೆಕೆಯುಸುರ (ಬಿಸಿ ಉಸಿರು) ಬಿಸಿ ಹೊಡೆದುದು + ಉರಿಹತ್ತಿ ಬಾಯ್ ಬತ್ತಿ ಡಗೆ (ಸೆಕೆ) ಸುತ್ತಿ ಸಾವು + ಅಡಸುತಿದೆ (ಆವರಿಸುತ್ತಿದೆ) ನಿನ್ನ ಮುತ್ತಿನ ಸತ್ತಿಗೆಯನು (ರಾಜ ಲಾಂಛನವಾದ ಶ್ವೇತ ಛತ್ರವನ್ನು) + ಇತ್ತು (ಕೊಟ್ಟು) ಸಲಹು (ಕಾಪಾಡು) ಭೂಭುಜ (ರಾಜ) + ಎಂದರು.
ಆ ಗಾನರಾಣಿಯರು ರಾಜ ಹರಿಶ್ಚಂದ್ರನನ್ನು ಕುರಿತು ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪವನ್ನು, ಬಡವನಿಗೆ ಚಿನ್ನವನ್ನು, ಅತಿರೋಗಿಗೆ ಅಮೃತವನ್ನು ಕೊಟ್ಟರೆ ಅವರು ಸಂತೋಷವನ್ನು ಹೊಂದುವರು. ಅವರನ್ನು ಹೋಲುವ ನಮಗೆ ಸುಡುಸುಡನೆ ಸುಡುವ ಈ ಬಿರುಬಿಸಿಲ ಸೆಕೆಯಲ್ಲಿ ಉಸಿರಿನ ಬಿಸಿ ಹೆಚ್ಚಾಗಿ ಉರಿಯಹತ್ತಿದೆ, ನಮ್ಮ ಬಾಯಿ ಬತ್ತಿಹೋಗಿದೆ, ಬಿಸಿಲ ಝಳದಿಂದ ಸಾವು ಆವರಿಸುತ್ತಿದೆ, ಆದ್ದರಿಂದ ನಮಗೆ ನಿನ್ನ ಮುತ್ತಿನ ಸತ್ತಿಗೆಯನ್ನು(ಮುತ್ತಿನಿಂದ ಮಾಡಿದ ಬಿಳಿಯ ಛತ್ರಿ. ಇದು ಪವಿತ್ರವಾದ ರಾಜಲಾಂಛನಗಳಲ್ಲಿ ಒಂದಾಗಿದೆ) ಕೊಟ್ಟು ನಮ್ಮನ್ನು ಕಾಪಾಡು ಎಂದರು.

ರವಿಕುಲದ ಪೀಳಿಗೆಯೊಳೊಗೆದ ರಾಯರ್ಗೆ ಪ
ಟ್ಟವ ಕಟ್ಟುವಂದಿದಿಲ್ಲದಡರಸುತನ ಸಲ್ಲ
ದವನಿಯೊಳು ಯುದ್ಧರಂಗದೊಳಿದಂ ಕಂಡ ಹಗೆಗಳು ನಿಲ್ಲರಿದಱ ಕೆಳಗೆ
ಕವಿವ ನೆಳಲೊಳಗಾವನಿರ್ದನಾತಂಗೆ ತಾಂ       
ತವಿಲೆಡರು ಬಡತನಂ ರೋಗವಪಕೀರ್ತಿ ಪರಿ
ಭವ ಭಯಂ ಹರೆವುದಿದನಱದಱದು ಸತ್ತಿಗೆಯ ಕೊಡಬಹುದೆ ಹೇಳೆಂದನು      || ||
ರವಿಕುಲದ ಪೀಳಿಗೆಯೊಳು (ಪರಂಪರೆಯಲ್ಲಿ) + ಒಗೆದ (ಹುಟ್ಟಿದ) ರಾಯರ್ಗೆ (ರಾಜರಿಗೆ) ಪಟ್ಟವ (ಪಟ್ಟವನ್ನು) ಕಟ್ಟುವಂದು (ಕಟ್ಟುವ ಸಮಯದಲ್ಲಿ) + ಇದು + ಇಲ್ಲದಡೆ (ಇಲ್ಲದಿದ್ದರೆ) + ಅರಸುತನ ಸಲ್ಲದು (ಸಲ್ಲುವುದಿಲ್ಲ) + ಅವನಿಯೊಳು (ಭೂಮಿಯಲ್ಲಿ) ಯುದ್ಧರಂಗದೊಳು (ಯುದ್ಧರಂಗದಲ್ಲಿ) + ಇದಂ (ಇದನ್ನು) ಕಂಡ (ನೋಡಿದ) ಹಗೆಗಳು (ಶತ್ರುಗಳು) ನಿಲ್ಲರು (ನಿಲ್ಲುವುದಿಲ್ಲ) + ಇದರ ಕೆಳಗೆ ಕವಿವ (ಆವರಿಸುವ) ನೆಳಲೊಳಗೆ (ನೆರಳಿನಲ್ಲಿ) + ಆವನ್ (ಯಾವನು) + ಇರ್ದನ್ (ಇರುವನೋ) + ಆತಂಗೆ (ಆತನಿಗೆ) ತಾಂ (ಅದು) ತವಿಲ್ (ತೊಂದರೆ) + ಎಡರು (ಅಡಚಣೆಗಳು / ಅಡ್ಡಿಗಳು) ಬಡತನಂ (ಬಡತನ) ರೋಗ + ಅಪಕೀರ್ತಿ (ಕೆಟ್ಟಹೆಸರು) ಪರಿಭವ (ಸೋಲು) ಭಯಂ (ಭಯವು) ಹರೆಯುವುದು (ಇಲ್ಲದಂತಾಗುವುದು) ಇದನ್ (ಇದನ್ನು) + ಅರಿದು (ತಿಳಿದು) ಸತ್ತಿಗೆಯ (ರಾಜ ಲಾಂಛನವಾದ ಛತ್ರಿಯನ್ನು) ಕೊಡಬಹುದೆ ಹೇಳು + ಎಂದನು.
ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ್ಲ. ಈ ಭೂಮಿಯ ಮೇಲೆ, ಯುದ್ಧರಂಗದಲ್ಲಿ ಸತ್ತಿಗೆಯನ್ನು ನೋಡಿದ ಶತ್ರುಗಳು ನಿಲ್ಲುವುದಿಲ್ಲ. ಈ ಸತ್ತಿಗೆಯ ನೆರಳಿನಲ್ಲಿ ಯಾವನು ಇರುವನೋ ಅತನಿಗೆ ವಿಪತ್ತು, ಅಡಚಣೆಗಳು, ಬಡತನ, ರೋಗ, ಅಪಕೀರ್ತಿ, ಸೋಲು, ಭಯ ಕಳೆದುಹೋಗುವುದು. ಇದನ್ನು ತಿಳಿದು ತಿಳಿದು ಸತ್ತಿಗೆಯನ್ನು ಕೊಡಬಹುದೇ ಹೇಳಿ ಎಂದನು.

ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು
ಜನನಿಯಂ ಜನಕನಂ ನಲ್ಲಳಂ ದೈವವಂ
ಮನವಾರೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು
ಜನರೊಳಗೆ ಜನಿಸರೆಂದೆನಲು ನೀನೀಗ ಪೇ
ಳ್ದನಿತಱೊಳು ಬೇಡಿದಡೆ ಕೊಡಬೇಡ ಕೊಡೆಯನೀ
ಯೆನೆ ಲೋಭವೇಕರಸ ಎನಲಿದಲ್ಲದೆ ಬೇಱೆ ಮಾತೆಪಿತರಿಲ್ಲೆಂದನು  || ||
ಅನುನಯದೊಳು (ಬಹಳ ಪ್ರೀತಿಯಿಂದ) + ಎಲ್ಲವಂ (ಎಲ್ಲವನ್ನು) ಕೊಡಬಹುದು ಬಿಡಬಹುದು. ಜನನಿಯಂ (ತಾಯಿಯನ್ನು) ಜನಕನಂ (ತಂದೆಯನ್ನು) ನಲ್ಲಳಂ (ಸತಿಯನ್ನು) ದೈವವಂ (ದೇವರನ್ನು) ಮನವಾರೆ (ಮನಸಾರೆ) ನಂಬಿ ನಚ್ಚಿರ್ದ (ವಿಶ್ವಾಸವಿಟ್ಟಿರುವ) ಪರಿವಾರಮಂ (ಪರಿವಾರವನ್ನು) ಕೊಡುವ ಬಿಡುವ + ಅತಿಕಲಿಗಳು ಜನರೊಳಗೆ (ಈ ಲೋಕದೊಳಗೆ) ಜನಿಸರ್ (ಹುಟ್ಟರು) + ಎಂದು + ಎನಲು(ಹೇಳಲು) ನೀನು + ಈಗ ಪೇಳ್ವ (ಹೇಳುವ) + ಅನಿತರೊಳು (ಅಷ್ಟರಲ್ಲಿ) ಬೇಡಿದಡೆ (ಬೇಡಿದರೆ) ಕೊಡಬೇಡ ಕೊಡೆಯನ್ (ಸತ್ತಿಗೆಯನ್ನು) ಈಯ್ (ಕೊಡು) + ಎನೆ (ಎನಲು) ಲೋಭವು (ದುರಾಸೆ) + ಏಕೆ + ಅರಸ + ಎನಲು + ಇದಲ್ಲದೆ ಬೇರೆ ಮಾತೆಪಿತರು (ತಾಯಿತಂದೆಯರು) + ಇಲ್ಲ + ಎಂದನು
ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು ಪ್ರೀತಿಯಿಂದ ಎಲ್ಲವನ್ನು ಕೊಡಬಹುದು, ಬಿಡಬಹುದು. ತಾಯಿಯನ್ನು, ತಂದೆಯನ್ನು, ಸತಿಯನ್ನು, ದೇವರನ್ನು, ಮನಸಾರೆ ನಂಬಿ ವಿಶ್ವಾಸವಿಟ್ಟ ಪರಿವಾರವನ್ನು ಕೊಡುವ ಅತಿಶೂರರು ಜನರಲ್ಲಿ (ಲೋಕದ) ಜನಿಸರು ಎಂದನು. ಆಗ ಗಾನರಾಣಿಯರು ಹರಿಶ್ಚಂದ್ರನನ್ನು ಕುರಿತು ಮಹಾರಾಜ ನೀನು ಈಗ ಹೇಳಿದ ಅವರಲ್ಲ್ಲಿ ಯಾರನ್ನಾದರೂ ಬೇಡಿದರೆ ಕೊಡಬೇಡ. ನಿನ್ನ ಬಳಿ ಇರುವ ಮುತ್ತನ ಸತ್ತಿಗೆಯನ್ನು ಕೊಡು ಎಂದರೆ ಲಭವೇಕೆ?’ ಎಂದರು. ಆಗ ಹರಿಶ್ಚಂದ್ರನು ಇದಲ್ಲದೆ ಬೇರೆ ತಾಯಿತಂದೆಯರು ಇಲ್ಲಎಂದನು.

ಲೋಗರಿಗೆ ಕೊಡಬಾರದಾಗಿ ಸತಿ ವಂಶಗತ
ವಾಗಿ ಬಂದುದಱಂದ ತಂದೆ ಪಟ್ಟವ ಕಟ್ಟು
ವಾಗಲರ್ಚಿಸಿಕೊಂಬುದಾಗಿ ದೈವಂ ನೆಳಲ ತಂಪನೊಸೆದೀವುದಾಗಿ
ಸಾಗಿಸುವ ತಾಯ್ ಧುರದೊಳರಿಗಳಂ ನಡುಗಿಸುವು
ದಾಗಿ ಚತುರಂಗಬಲವೆನಿಸಿತೀ ಛತ್ರವೆಂ
ಬಾಗಳಿದನಱದಱದು ಬೇಡುವರನತಿಮರುಳರೆನ್ನರೇ ಮೂಜಗದೊಳು           || ||
       ಲೋಗರಿಗೆ (ಜನರಿಗೆ) ಕೊಡಬಾರದಾಗಿ ಸತಿ ವಂಶಗತವಾಗಿ (ವಂಶಪಾರಂಪರ್ಯವಾಗಿ) ಬಂದಿದ್ದರಿಂದ, ತಂದೆ ಪಟ್ಟವ (ಪಟ್ಟವನ್ನು) ಕಟ್ಟುವಾಗಲ್ (ಕಟ್ಟುವ ಸಮಯದಲ್ಲಿ) + ಅರ್ಚಿಸಿ (ಪೂಜಿಸಿ) ಕೊಂಬುದಾಗಿ (ಕೊಳ್ಳುವುದಾಗಿ) ದೈವಂ (ದೇವರು) ನೆಳಲ (ನೆರಳಿನ) ತಂಪನು + ಒಸೆದು (ಸೊಗಸಾಗಿ) + ಈವುದಾಗಿ (ಕೊಡುವುದಾಗಿ) ಸಾಗಿಸುವ (ಪೋಷಿಸುವ) ತಾಯ್ (ತಾಯಿ) ಧುರದೊಳ್ (ಯುದ್ಧದಲ್ಲಿ) + ಅರಿಗಳಂ (ಶತ್ರುಗಳನ್ನು) ನಡುಗಿಸುವುದಾಗಿ ಚತುರಂಗಬಲವು + ಎನಿಸಿತು + ಈ ಛತ್ರವು (ಸತ್ತಿಗೆಯು) ಎಂಬಾಗಳ್ (ಎಂದು ಹೇಳುವಾಗ) + ಇದನ್ (ಇದನ್ನು) + ಅರಿದರಿದು (ತಿಳಿದು ತಿಳಿದು) ಬೇಡುವರನು (ಬೇಡುವವರನ್ನು) ಅತಿಮರುಳರು (ಬಹಳ ದಡ್ಡರು) + ಎನ್ನರೇ (ಎನ್ನುವುದಿಲ್ಲವೇ?) ಮೂಜಗದೊಳು (ಮೂರುಲೋಕದಲ್ಲಿ).
ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು: ಈ ಸತ್ತಿಗೆಯು ಜನರಿಗೆ ಕೊಡಬಾರದು. ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು, ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿ ಕೊಳ್ಳುವುದರಿಂದ; ದೇವರು, ನೆರಳಿನ ತಂಪನ್ನು ಸೊಗಸಾಗಿ ಕೊಡುವುದರಿಂದ; ಪೋಷಿಸುವ ತಾಯಿ, ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಚತುರಂಗ ಬಲ ಎನಿಸಿಕೊಂಡಿದೆ. ಇದನ್ನು ತಿಳಿದುತಿಳಿದು ಬೇಡುವವರನ್ನು ಮೂರುಲೋಕದಲ್ಲಿಯೂ ಅತಿದಡ್ಡರು(ಅತಿ ಮೂರ್ಖರು) ಎನ್ನುವುದಿಲ್ಲ್ಲವೇ? ಎಂದನು.
 

 **************************************
ರಾಘವಾಂಕನ ಹರಿಶ್ಚಂದ್ರ ಕಾವ್ಯ: ಓಂದು ಚಿಂತನೆ
ಹರಿಹರ ರಘವಾಂಕರ ಬಗ್ಗೆ ಪ್ರಸಿದ್ಧವಾದ ದಂತಕಥೆಯೊಂದಿದೆ. ಹೇಳಿಕೇಳಿ ದಂತಕಥೆಯಾದ ಅದನ್ನು ಗಂಭೀರವಾಗಿ ಪರಿಗಣಿಸುವುದೂ ಕಷ್ಟವೆನಿಸೀತು. ಆದರೆ ಈ ಕಥೆ ಅವರಿಬ್ಬರ ಕಾವ್ಯದ ಬಗ್ಗೆ ಬಹಳ ಮಹತ್ವದ ಮಾತುಗಳನ್ನು ಹೇಳುತ್ತದೆಯೆಂದು ಅನಿಸುತ್ತದೆ. ಆ ಕಥೆ ಹೀಗಿದೆ:
‘ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯ ಅರಸನಿಗೆ ಬಹಳ ಮೆಚ್ಚಿಗೆಯಾಗಿ ಆ ಕಾವ್ಯವನ್ನು ಬಂಗಾರದ ಹರಿವಾಣದಲ್ಲಿಟ್ಟು, ಪಲ್ಲಕ್ಕಿಯಲ್ಲಿ ಮಡಗಿ, ರಾಘವೇಶ್ವರನನ್ನು ಗಜಮಸ್ತಕದ ಮೇಲೆ ಕುಳ್ಳಿರಿಸಿ ಆ ಊರಿನಲ್ಲೆಲ್ಲಾ ಮೆರೆಯಿಸಿದರು. ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯವನ್ನು ಪೊನ್ನ ಹರಿವಾಣದಲ್ಲಿ ಕೊಂಡೊಯ್ದು ಹರೀಶ್ವರನ ಮುಂದಿರಿಸಿ ‘ನಾನು ಬರೆದ ಹರಿಶ್ಚಂದ್ರ ಕೃತಿ’ ಎಂದು ಹೇಳಲು, ಆತನು ಅದನ್ನು ನೋಡದೆ ತನ್ನೊಡನೆ ಮಾತಾಡದೇ ಇರಲು ಅಡಿಗೆರಗಿ ‘ದೇವ ನಿಮ್ಮಿಂದಲೇ ಕಾವ್ಯ ಜಸವೆಡೆಯಲೀ ಜಗದೊಳು’ ಎಂದು ಪ್ರಾರ್ಥಿಸಲು, ಅದಕ್ಕೆ ಹರೀಶ್ವರನು ‘ಮೃಡ ಕಥ ಕಥನಕ್ಕಲ್ಲದೆ ರಾಜಕಥೆಗೊಡಂಬಡದೆಮ್ಮ ಮನ. ಇಲ್ಲಿಗೇಕೆ ತಂದೆ? ಕುಜನರೆಡೆಗೊಯ್ದು ಕೇಳಿಸಿದೊಡೆ ಅವರು ನಿನ್ನ ಮನಕೆ ಮುದವನಿತ್ತಪರು’ ಎಂದು ಹೇಳಿದನು. ಅದನ್ನು ಕೇಳಿ ಮನನೊಂದು ರಾಘವಾಂಕ ‘ರಾಜ್ಯವನಾಳಿಯನೃತದಿಂದ ನರಕಕ್ಕೆ ಸಂದವರ ಕಥೆಯೋ? ಸತ್ಯಕ್ಕಾಗಿ ಸತಿ ಸುತರಂ, ರಾಜ್ಯಮಂ, ತನ್ನಮುಂ, ಕುಂದದಿತ್ತು ಈಶನನೊಲಿಸಿದವನ ಕಥೆಯನೇನೆಂದು ಜರೆವಿರಿ? ಗುರುವಲಾ! ವಾದಿಸಲ್ ಬಾರದೆಂದು ಆಡಿ ತೋರುವೆನು ಚೋಳಾದಿಗಳ ಕಥೆಯನೇಕೆ ಪೇಳ್ದಿರಿ?’ ಎಂದು ಪ್ರಶ್ನಿಸಿದನು. ಅದಕ್ಕೆ ಹರಿಹರ ‘ತರಳ, ನೀನರಿಯೆ ಶಿವನೊಲಿದಾಗ ಕೈವಲ್ಯದಿರವಿಂಗೆ ಮನವೀಯದಿರಲವರ ಪೊಗಳ್ದಪೆವು. ನರಪತಿ ಹರಿಶ್ಚಂದ್ರ ಶಂಭುವನೊಲಿಸಿ ಪಾಪಕ್ಕೊಳಗಪ್ಪ ರಾಜ್ಯದ ಸಿರಿಯ ಪಡೆದನು. ಅವನು ಭಕ್ತರೊಳಗಲ್ಲ,’ ಎಂದು ಉತ್ತರ ಕೊಟ್ಟನು. ರಾಘವಾಂಕ ‘ಗುರುವೆ ಕಿರಿಯರು ಹರಿಶ್ಚಂದ್ರಗಿಂದವರು’ ಎಂದು ನುಡಿಯಲು, ಹರಿಹರದೇವನು ತರಹರಿಸದೇ ಎಡದ ಪಾದುಕೆಯೊಳಿಡಲು, ರಾಘವನು ಮುಂಬಲ್ ಕಳಚಿ ಧರೆಗುರುಳ್ದವು. ಶರಣ ನಿಂದಕನ ಮೋಗ ನೋಡಬಾರದೆಂದು ಹರಿಯರಸನು ಎದ್ದು ಹೋಗುವನು. ರಾಘವನು ಪಶ್ಚಾತಾಪದಿಂದ ಗುರುವನ್ನೂ ಹರನನ್ನೂ ಒಲಿಸಿ ಗುರುವಿನಪ್ಪಣಿಯ ಮೇರೆಗೆ ಹರಿಶ್ಚಂದ್ರ ಕಾವ್ಯದ ಮುರಿದು, ಶೈವಕೃತಿ ಪಂಚಕವನೊರೆದು ಕಳೆದ ಹಲ್ಲುಗಳನ್ನು ಮರಳಿ ಪಡೆದನು. (ಈ ದಂತಕಥೆ ಗುರುರಾಜ ಚಾರಿತ್ರ ಪದ್ಮರಾಜ ಪುರಾಣ, ಭೈರವೇಶ್ವರನ ಕಾವ್ಯದ ಕಥಾಸೂತ್ರ ರತ್ನಾಕರಗಳಲ್ಲಿಯೂ ಬಂದಿದೆ)
ತಿರುಗಿ ಹಲ್ಲು ಪಡೆದ ಸಂಗತಿಯಂಥ ದಂತಕಥೆಯ ಅಂಶಗಳೊಂದಿಗೆ ಇದರಲ್ಲಿ ಕೆಲವು ಸತ್ಯ ಸಂಗತಿಗಳೂ ಅಡಕವಾಗಿವೆ. ರಾಘವಾಂಕ ಮುಂದೆ ವೀರೇಶ ಚರಿತೆ, ಸಿದ್ಧರಾಮ ಪುರಾಣ, ಸೋಮನಾಥ ಚರಿತ್ರೆ, ಶರಭ ಚಾರಿತ್ರ್ಯ, ಹರಿಹರ ಮಹತ್ವ- ಎಂಬುವುದಾಗಿ ಶೈವಕೃತಿ ಪಂಚಕನ್ನೊರೆದುದು ನಿಜ. ಇವುಗಳಲ್ಲಿ ಮೊದಲಿನ ಮೂರು ಮಾತ್ರ ಲಭ್ಯವಾಗಿದ್ದು, ಕೊನೆಯವೆರಡು ಸಿಕ್ಕಿಲ್ಲ. ಹರಿಶ್ಚಂದ್ರ ಕಾವ್ಯವ ಮುರಿದು ಈ ಕೃತಿಪಂಚಕ ಬರೆದನೆಂಬುವುದರಲ್ಲಿಯೂ ಅರ್ಥವಿದೆ. ಯಾಕೆಂದರೆ ಹರಿಶ್ಚಂದ್ರ ಕಾವ್ಯದಿಂದ ಹರಿಹರ-ರಾಘವಾಂಕರ ಮಧ್ಯೆ ಜಗಳ ಬಂದುದಂತೂ ನಿಜ: ಯಾಕೆಂದರೆ ಇಬ್ಬರ ಜೀವನ ದೃಷ್ಟಿಗಳೂ ಭಿನ್ನವಾದವು. ಪರಸ್ಪರ ವಿರೋಧವಾದುವು ಕೂಡ. ಹರಿಹರನ ನಾಯಕರೆಲ್ಲ ಕೈಲಾಸದಲ್ಲಿ ಮಾಡಿದ ಒಂದು ತಪ್ಪಿನಿಂದ ಭೂಮಿಗೆ ಬರುತ್ತಾರೆ. ಇಲ್ಲಿ ಆ ಕಾಳಿಕೆಯನ್ನು ಕಳೆದುಕೊಂಡು ಮತ್ತೆ ಕೈಲಾಸಕ್ಕೆ ಹೋಗುತ್ತಾರೆ. ಅವರ ನಿಜವಾದ ನೆಲೆ ಕೈಲಾಸವೇ. ಲೌಕಿಕದಲ್ಲಿ ಬಹುಕುವಾಗೆಲ್ಲ ಪರಕೀಯತೆಯನ್ನು ಅನುಭವಿಸುತ್ತ ಹಣ್ಣಾಗುತ್ತಾರೆ. ಹಣ್ಣಾಗಿ ಕೈಲಾಸಕ್ಕೆ ಹೋಗುತ್ತಾರೆ.
ರಾಘವಾಂಕನ ನಾಯಕರು ಹೀಗೆ ಶಪಿತರಾಗಿ ಭೂಮಿಗೆ ಬಂದವರಲ್ಲ. ಇವನ ಕಾವ್ಯಗಳು ಕೈಲಾಸದಿಂದ ಸುರುವಾಗುವುದಿಲ್ಲ. ಇವನಿಗೆ ಲೌಕಿಕವೆಂದರೆ ಒಂದು ಪ್ರಕ್ರಿಯೆ, ಹರಿಹರನ ನಾಯಕರಿಗೆ ಭೂಲೋಕದ ಬಗ್ಗೆ ಭಯವಿದೆ. ಅವರೆಲ್ಲ ಇಲ್ಲಿಗೆ ಬರುವುದಕ್ಕೆ ಹೆದರುತ್ತಾರೆ. ಶಿವ ಸಂತೈಸಿ ಕಳಿಸುತ್ತಾನೆ. ಬಂದ ಮೇಲೆ ಅವರೆಲ್ಲ ಕೈಲಾಸದ ಹಂಬಲದಲ್ಲೇ ಕಾಲ ಕಳೆಯುತ್ತಾರೆ. ಶಿವನ ಸಾಕ್ಷಾತ್ಕಾರವಾದೊಡನೆ ಭಕ್ತರಿಗೆ ಸಂಸಾರ ಬಂಧನದಿಂದ ಪಾರಾಗಿ ದಿನನಿತ್ಯ ಶಿವನ ಸಾನಿಧ್ಯದಲ್ಲಿರುವ ಅವಕಾಶ ಸಿಕ್ಕುತ್ತದೆ. ಅದೇ ಕೊನೆ. ರಾಘವಾಂಕನ ನಾಯಕರಾರಿಗೂ ಈ ಭಯವಿಲ್ಲ. ಇದನ್ನು ಇನ್ನೂ ಸ್ಪಷ್ಟವಾಗಿ ಇಬ್ಬರೂ ಬರೆದ ಅಧ್ಯಯನ ಚರಿತ್ರೆಯಲ್ಲಿ ಕಾಣಬಹುದು.
ಹರಿಹರನ ಪ್ರಕಾರ ಆದಯ್ಯ ಹುಟ್ಟಿದ್ದು ಶಿವಪುರದ ಶಿವಭಕ್ತಿ ಮತ್ತು ಶಿವಭಕ್ತರಿಗೆ. ಅವನ ಮಾವ ಪಾರಿಷ ಪಂಡಿತ, ಆದಯ್ಯ ಪುಲಿಗೆರೆಗೆ ಹೋದಾಗ ಆತನು ಸುರುಹೊನ್ನೆಯ ಬಸದಿಯಲ್ಲಿ ಪೂಜಾರಿಯಾಗಿದ್ದು ಸೋಮನಾಥನನ್ನು ತಂದಿರಿಸಿದ ಮೇಲೆ ಆದಯ್ಯ ಪುಷ್ಪಕ ವಿಮಾನದಲ್ಲಿ ಕೈಲಾಸಕ್ಕೆ ಹೋಗುತ್ತಾನೆ. ರಾಘವಾಂಕನ ಸೋಮನಾಥ ಚರಿತೆಯ ವಿವರಗಳು ಭಿನ್ನವಾಗಿರುವ ವಿಚಾರ ಹಾಗಿರಲಿ. ಕೊನೆಗೆ ಆತ ಸೌರಾಷ್ಟ್ರದ ಸೋಮನಾಥನನ್ನು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಪ್ರತಿಷ್ಠಾಪಿಸಿ ಜೈನರನ್ನು ಸೋಲಿಸಿ ಕೊನೆಗೆ ಪದ್ಮಾವತಿಯೊಂದಿಗೆ ಸೋಮನಾಥ ದೇವಾಲಯದ ಬಲದ ಕಂಬದಲ್ಲಿ ಐಕ್ಯವಾಗುತ್ತಾನೆ. ಕೈಲಾಸಕ್ಕೆ ಹೋಗುವುದಿಲ್ಲ. ಹರಿಹರ ರಾಘವಾಂಕರ ಜೀವನ ದೃಷ್ಟಿಗಳು ಭಿನ್ನವಾಗಿದ್ದುದನ್ನು ಸೂಚಿಸಲು ಇದಕ್ಕಿಂತ ಹೆಚ್ಚಿನ ಉದಾಹರಣೆಗಳು ಬೇಕಿಲ್ಲ.
ಹರಿಹರನಿಗೆ ಲೌಕಿಕವೆಂದರೆ ಒಂದು ಸಾಧನೆಯ ಭೂಮಿ. ಈ ಸಾಧನೆಯ ಕೊನೆಯ ಅಲೌಕಿಕ ಅರ್ಥಾತ್ ಕೈಲಾಸ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುತ್ತಾರೆ. ಅಲ್ಲಿ ಸಲ್ಲುವವಗೆ ಇಲ್ಲಿಯ ಬದುಕನ್ನು ಹಸನಾಗಿ ಬದುಕಬೇಕು. ಹರಿಹರನಲ್ಲಿ ಶಿವ ಬರುವುದು ನಾಯಕನನ್ನು ಕೈಲಾಕ್ಕೆ ಕರೆದೊಯ್ಯಲಿಕ್ಕೆ. ಅದು ಅವರು ಲೌಕಿಕವನ್ನು ಯಶಸ್ವಿಯಾಗಿ ಬದುಕಿದ್ದಕ್ಕೆ. ಕೈಲಾಸದಲ್ಲಿದ್ದ ತಮ್ಮ ಕಾಳಿಕೆಯನ್ನು ಕಳೆದುಕೊಂಡದಕ್ಕೆ ಗುರುತು. ಇದನ್ನೇ ಬೇರೆ ಶಬ್ದಗಳಲ್ಲಿ ಹೇಳುವುದಾದರೆ- ಹರಿಹರನಿಗೆ ಈ ಲೌಕಿಕ ಸಂಸಾರ ಹೇಯಸ್ಥಳ. ತಪ್ಪು ಮಾಡಿದವರು ಶಿಕ್ಷೆಯನುಭವಿಸಲಿಕ್ಕೆ, ಅದರಿಂದ ಪರಿಶುದ್ಧಿಗೊಳ್ಳಲಿಕ್ಕೆ ಬರುವ ಸ್ಥಳ. ಪರಿಶುದ್ಧಿಗೊಂಡ ಭಕ್ತ ಜೀವವಾಗಲಿ, ಶಿವನಾಗಲಿ ಇರುವುದಕ್ಕೆ ಯೋಗ್ಯವಾದ ಸ್ಥಳವಲ್ಲ. ಆದ್ದರಿಂದ ಮಿಕ್ಕೆಲ್ಲರಲ್ಲಿನಂತೆಯೇ ಹರಿಹರನ ಶಿವ ಅಣುರೇಣು ತೃಣ ಕಾಷ್ಠಗಳಲ್ಲಿ ತುಂಬಿಕೊಂಡವನಲ್ಲಿ. ಇದನ್ನು ಮೀರಿದ ಕೈಲಾಸದಲ್ಲಿ ಅವನ ವಾಸ. ಉದ್ಧಾರಕ್ಕೆ ಆಗಾಗ ಭೂಮಿಗೆ ಬರುತ್ತಾನಷ್ಟೆ.
ಈ ಕಾರಣದಿಂದಾಗಿ ಹರಿಹರ ತನ್ನ ದೃಷ್ಟಿಯನ್ನು ಅತಿಯಾಗಿ ಮಿತಿಗೊಳಪಡಿಸಬೇಕಾಯ್ತು. ತಾನಾಯ್ತು. ತನ್ನ ಶಿವ, ಭಕ್ತ ಪರಿವಾರವಾಯಿತು. ಅದನ್ನು ದಾಟಿ ಒಂದಿಂಚು ಜೀವನವನ್ನೂ ನೋಡುವುದಕ್ಕೆ ಆತ ನಿರಾಕರಿಸುತ್ತಾನೆ. ಅವನ ಪ್ರಪಂಚವೆಲ್ಲ ಬರೀ ಶಿವ ಮತ್ತು ಭಕ್ತರಿಂದ ತುಂಬಿದ ನಾಗರಿಕ ವ್ಯವಸ್ಥೆಯೇ ಇಲ್ಲದ ಪ್ರಪಂಚ. ಭಕ್ತರ ಜೀವನದಲ್ಲಿ ಬರುವ ಘರ್ಷಣೆಗಳೆಲ್ಲ ಶಿವನೊಂದಿಗೆ ಮಾತ್ರ ಬರುವಂಥವು. ಅವನ ಕಾವ್ಯಗಳಲ್ಲಿ ಪ್ರತಿನಾಯಕರೇ ಇಲ್ಲ. ಬಸವರಾಜ ದೇವರ ರಗಳೆಯಲ್ಲಿ ಬಿಜ್ಜಳನಿಗೂ ಬಸವಣ್ಣನಿಗೂ ಉಂಟಾಗುವ ಘರ್ಷಣೆ ಎರಡೇ ಸಾಲುಗಳಲ್ಲಿ, ಒಂದು ಸಣ್ಣ ಪವಾಡದಿಂದ ಬಗೆಹರಿಯುತ್ತದೆ! ಇನ್ನು ಕಳ್ಳಸುಳ್ಳರನ್ನು ಅವನು ಸಹಿಸುವುದಂತೂ ದೂರವುಳಿಯಿತು. ಅರ್ಥಾತ್ ಕೆಡುಕನ್ನು ಆತ ಪ್ರತ್ಯೇಕವಾಗಿ ಗುರುತಿಸುವುದೇ ಇಲ್ಲ.
ಇದಕ್ಕೆ ಪ್ರತಿಯಾಗಿ ರಾಘವಾಂಕನಿಗೆ ಲೌಕಿಕವೆಂದರೆ ಒಂದು ಜೀವಂತ ಪ್ರಕ್ರಿಯೆಯೆಂಬುದಾಗಿ ಆಗಲೇ ಹೇಳಿದ್ದೇನೆ. ಈ ಪ್ರಕ್ರಿಯೆಗೆ ತನ್ನ ಹೊರತಾದ ಒಂದು ಕೊನೆಯಿಲ್ಲ. ತುದಿಗೆ ಕೈಲಾಸವಿಲ್ಲ. ಈ ಪ್ರಕ್ರಿಯೆ ಹಣ್ಣಾಗುತ್ತಾ ಹಣ್ಣಾಗುತ್ತಾ ತಂತಾನೆ ಕೈಲಾಸವಾಗುತ್ತದೆ. ಆದ್ದರಿಂದ ಕೈಲಾಸವೆಂದರೆ ಲೌಕಿಕವನ್ನು ಮೀರಿ ಇರುವ ಅದರಾಚೆಯ ಸ್ಥಿತಿಯಲ್ಲ. ಲೌಕಿಕವೇ ಹಣ್ಣಾದ ಸ್ಥಿತಿ. ಶಿವ ಬರುವುದು ಕೂಡ ನಾಯಕನ ಜೀವನ ಇದೀಗ ಹಣ್ಣಾಗಿ ಕೈಲಾಸವಾಯಿತೆಂಬುವುದನ್ನು ಖಾತ್ರಿ ಮಾಡಿಕೊಡಲಿಕ್ಕೆ, ಅಷ್ಟೇ. ರಾಘವಾಂಕನ ಶಿವನಾದರೆ ದೇವಾಲಯಗಳ ಮೂರ್ತಿಗಳಲ್ಲಿ ವಾಸಿಸಬಲ್ಲ, ಭಕ್ತರೊಂದಿಗೆ ಸತ್ಯದಂಥ ಮೌಲ್ಯಗಳಿದ್ದೂ ಆಚರಣೆಯಾಗಿ ಹೊರ ಬರಬಲ್ಲ, ಸಾಕಾರನಿಷ್ಠೆ, ಭೂತಂಗಳೊಳಗನುಕಂಪೆಯಲ್ಲಿ ತಾನೇ ಪರಬೊಮ್ಮನಾಗಿಯೂ ಇರಬಲ್ಲ ಅಮೂರ್ತವಾಗಿ.
‘ರಾಘವಾಂಕನ ಹರಿಶ್ಚಂದ್ರನು ನೇರವಾಗಿ ಕೈಲಾಸದಿಂದ, ಅಲ್ಲಿ ಮಾಡಿದ ಯಾವುದೋ ತಪ್ಪನ್ನು ಇಲ್ಲಿ ತಿದ್ದಿಕೊಳ್ಳಲೆಂದು ಶಾಪದಿಂದಲೋ ಅನುಗ್ರಹದಿಂದಲೋ ಮರ್ತ್ಯಕ್ಕೆ ಇಳಿದು ಬಂದವನಲ್ಲ. ಹರಿಹರನ ಶಿವಶರಣರಂತೆ ಶಿವ ಭಕ್ತಿಯ ಪ್ರಸಾರಕ್ಕೋ ಶಿವ ಸಮಯದ ಉದ್ದಾರಕ್ಕೋ ಪರಸಮಯದ ದಮನಕ್ಕೋ ಉದ್ಯುಕ್ತನಾದವನಲ್ಲ’ ಶಿವನನ್ನು ಧ್ಯಾನಿಸುತ್ತ ಒಲಿಸಿಕೊಳ್ಳುವುದು ಅವನ ಉದ್ದೇಶವಲ್ಲ. ‘ಹರಿಶ್ಚಂದ್ರನ ಪಾಲಿಗೆ ಸತ್ಯ ಎಂದರೆ ಶಿವ; ಶಿವ ಎಂದರೆ ಸತ್ಯ. ಹರಿಹರನಲ್ಲಾದರೋ ಅವನ ಪಾತ್ರಗಳ ಕಣ್ಣಿಗೆ ‘ಶಿವ’ ಎಂದರೆ ಅವರಿಗೆ ಪ್ರಿಯವಾದ ಸಾಕಾರಮೂರ್ತಿ: ಆದರೆ ಹರಿಶ್ಚಂದ್ರನ ಪಾಲಿಗೆ ಅದು ಬದುಕುವ ಒಂದು ಮೌಲ್ಯ’ ಈ ಸತ್ಯದ ಪ್ರಾಮಾಣಿಕ ಆಚರಣೆಯಲ್ಲಿ ಶಿವನಿರುವುದು ನಿರುತ. ಹೀಗೆ ಶಿವನನ್ನು ಆಚರಿಸುತ್ತ ತನ್ನ ಬದುಕನ್ನು ಶಿವಮಯವಾಗಿಸಿಕೊಳ್ಳುವುದೇ ಹರಿಶ್ಚಂದ್ರನ ಉದ್ದೇಶ. ಕಾವ್ಯದ ಅಂತ್ಯದಲ್ಲಿ ಶಿವ ಬಂದು ದರ್ಶನವೀಯುವುದು ಸತ್ಯದ ಒಂದು ಸಣ್ಣ ಭಂಗಿ (gesture) ಮಾತ್ರ. ಕಾವ್ಯನಾಯಕನ ಸತ್ಯವನ್ನು ಒರೆಹಚ್ಚಿ ನೋಡಲು ಹರಿಹರನ ಕಾವ್ಯಳಲ್ಲಿನಂತೆ ಶಿವನೇ ಬೇರೆ ರೂಪ ಧರಿಸಿ ಬರುವುದಿಲ್ಲ: ಉತ್ಕೃಷ್ಟವಾದ ಮೌಲ್ಯಗಳಲ್ಲಿ ಶಿವನಿರಬಲ್ಲನಾದರೆ ಅದಕ್ಕೆ ವಿರುದ್ಧ ಸೆಳೆತದ ಬಲವಂತಗಳೂ ಇರುವುದು ಸಾಧ್ಯ. ಇಂಥ ವಿರುದ್ಧ ಸೆಳೆತದ ಬಲವಂತಗಳೇ ರಾಘವಾಂಕನಲ್ಲಿ ಪ್ರತಿನಾಯಕನ ರೂಪದಲ್ಲಿ ಎದುರಾಗುತ್ತವೆ. ಮತ್ತು ರಾಘವಾಂಕ ಯಾಕೆ ಪ್ರತಿ ನಾಯಕರನ್ನು ಗುರುತಿಸಬೇಕಾಯಿತೆಂದು ತಿಳಿಯುತ್ತದೆ.
ಹರಿಶ್ಚಂದ್ರ ಹೆಂಡತಿ ಚಂದ್ರಮತಿ ಮತ್ತು ಮಗ ರೋಹಿತಾಶ್ವರೊಡನೆ ಅಯೋಧ್ಯೆಯಲ್ಲಿ ರಾಜ್ಯವಾಳಿಕೊಂಡಿದ್ದವನು. ಇತ್ತ ದೇವೇಂದ್ರನ ಸಭೆಯಲ್ಲಿ, ಭೂಲೋಕದಲ್ಲಿ ಸತ್ಯವಂತರಾದ ರಾಜರು ಯಾರೆಂದು ಪ್ರಶ್ನೆ ಹುಟ್ಟಿ ಹರಿಶ್ಚಂದ್ರನೆಂದು ವಸಿಷ್ಠ ಹೇಳಿದರೆ ವಿಶ್ವಾಮಿತ್ರ ವಿರೋಧಿಸುತ್ತಾನೆ. ಇಬ್ಬರಿಗೂ ಜಗಳವಾಗಿ ಕೊನೆಗೆ ವಿಶ್ವಾಮಿತ್ರ ಪಂಥ ಕಟ್ಟಿಕೊಳ್ಳುವುದರಲ್ಲಿ ಈ ದೃಶ್ಯ ಮುಗಿಯುತ್ತದೆ. ಮುಂದೆ ವಿಶ್ವಾಮಿತ್ರನ ಕಾಟ ಸುರುವಾಯಿತು. ಕಾಡಿದಷ್ಟೂ ಸೋಲಾಯಿತು, ಸೋತಷ್ಟು ಅವನ ಸಿಟ್ಟು ಜಾಸ್ತಿಯಾಯಿತು. ಹರಿಶ್ಚಂದ್ರ ಸತ್ವವೂ ಗಟ್ಟಿಗೊಳ್ಳುತ್ತಾ ಹೋಯಿತು. ಹರಿಶ್ಚಂದ್ರನ ಸತ್ಯ ಪ್ರಯತ್ನಿಸಿ ಗಳಿಸಿದ್ದಲ್ಲ. ಸಹಜವಾಗಿ ಬಂದದ್ದು. ತರಣಿಯ ತೇಜದಂತೆ, ಅಗ್ನಿಯ ಬಿಸುಪಿನಂತೆ, ಚಂದ್ರನ ತಂಪಿನಂತೆ, ಮಂದಾರದ ಸ್ಥಿರತೆಯಂತೆ ಸಹಜವಾದದ್ದೆಂದು ವಸಿಷ್ಠನೇ ಹೇಳುತ್ತಾನೆ. ಕಥೆಯ ಪ್ರಾರಂಭದಲ್ಲಿ ಹರಿಶ್ಚಂದ್ರನ ಬಗ್ಗೆ ಪರಸ್ಪರ ವಿರುದ್ಧವಾದ ಕೆಲವು ಮಾತುಗಳಿದ್ದುದು ನಿಜ. ಮಕ್ಕಳಿಲ್ಲವೆಂದು ವರುಣನಿಂದ ವರ ಪಡೆದು ಮಗನಾದ ಮೇಲೆ ಅವನಿಗೆ ಮೋಸ ಮಾಡಿದ್ದು, ವ್ಯಾಮೋಹದಿಂದ ತನ್ನ ಮಗನಿಗೆ ಬದಲಾಗಿ ಇನ್ನೊಬ್ಬರ ಮಗನನ್ನು ಬಲಿಗೊಡಲು ಯೋಜಿಸಿದ್ದು, ಇವೆಲ್ಲ ಹರಿಶ್ಚಂದ್ರನಿಗೂ ಅವನ ಸತ್ಯಕ್ಕೂ ಶೋಭೆ ತರುವ ಮಾತಲ್ಲ, ನಿಜ. ವಿಶ್ವಾಮಿತ್ರ ಈ ಸಂಗತಿ ಹೇಳಿದಾಗ ಇವುಗಳನ್ನು ಅಲ್ಲಗಳೆಯುವ ಉತ್ತರ ವಸಿಷ್ಠನಲ್ಲಿಯೂ ಇಲ್ಲ, ಹಲವು ಮಾತೇಕೆ ಆ ಹರಿಶ್ಚಂದ್ರ ಭೂನಾಥನೊಳಗೆ ಅಸತ್ಯವನು ಕಾಣಿಸಲುಬಲ್ಲರು. ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲ. ಇನ್ನು ಹುಟ್ಟುವರ ಕಾಣೆ ನಾನಿದ ಬಲ್ಲೆ’ನೆಂದು ವಸಿಷ್ಠ ಹೇಳುತ್ತಾನೆ. ಇದು ಹಾರಿಕೆಯ ಮಾತಾದೀತೆ ಹೊರತು ವಾದಕ್ಕೆ ತಕ್ಕ ಪ್ರತಿವಾದವಲ್ಲ ಎನ್ನುವುದು ಮೇಲುನೋಟಕ್ಕೆ ಗೊತ್ತಾಗುತ್ತದೆ. ಹಾಗೆಂದರೆ ವಸಿಷ್ಠ ಇಂಥ ಮಾತನ್ನು ಬರೀ ಶಿಷ್ಯವ್ಯಾಮೋಹದಿಂದಲೇ ಹೇಳಿದವನಲ್ಲ.
ಶ್ರುತಿ ಮತ ಕುಲಾಚಾರ ಧರ್ಮಮಾರ್ಗಂ ಮಹಾ
ವ್ರತವನುಷ್ಠಾನ ಗುರುವಾಜ್ಞೆ ಲಿಂಗಾರ್ಚನೋ
ನ್ನತ ತಪಂ ಬ್ರಹ್ಮ ಕರ್ಮಂ ಬೆಳೆದ ಪುಣ್ಯವೊಳ ಗಾದವಂ ತೊರೆದು ಕಳೆದು
ಸತಿಯನುಳಿದತಿದಿಗಂಬರನಾಗಿ ಮುಕ್ತ ಕೇ
ಶಿತನಾಗಿ ನರಕಪಾಲದೊಳು ಸುರೆಯೆರೆದು ಕುಡಿ
ಯುತ ತೆಂಕಮುಖನಾಗಿ ಹೋಹೆಂ ಹರಿಶ್ಚಂದ್ರ
ಮರೆದ ಹುಸಿಯಂ ನುಡಿದಡೆ
ಎಂಬಂಥ ಘೋರ ಪ್ರತಿಜ್ಞೆಕೈಕೊಳ್ಳುವಷ್ಟು ಹರಿಶ್ಚಂದ್ರನ ಸತ್ಯದ ಬಗ್ಗೆ ಅವನಲ್ಲಿ ವಿಶ್ವಾಸವಿದೆ. ಇದಕ್ಕೆ ಹೋಲಿಸಿದರೆ ವಿಶ್ವಾಮಿತ್ರನ ಮರುಪ್ರತಿಜ್ಞೆ ಬಹಳ ಹಗುರಾದದ್ದೆಂದೇ ಹೇಳಬೇಕು. ವರುಣನಿಂದ ಹರಿಶ್ಚಂದ್ರ ವರಪಡೆದ ಸಂಗತಿ ವಿಶ್ವಾಮಿತ್ರನ ಬಾಯಲ್ಲಿದೆಯೇ ಹೊರತು ಕಥೆಯಲ್ಲಿಲ್ಲ. ಹಿಂದಿನ ಕಥೆಯನ್ನು ರಾಘವಾಂಕ ಹೇಳಿಯೂ ಇಲ್ಲ. ಅಥವಾ ಕಥೆ ಸುರುವಾಗುವ ಮುನ್ನಿನ ಹರಿಶ್ಚಂದ್ರನ ಕಥೆಯನ್ನು ರಾಘವಾಂಕ ಉದ್ದೇಶಪೂರ್ವಕ ಕೈಬಿಟ್ಟಿದ್ದಾನೆ. ಅಲ್ಲದೆ ಮೇಲೆ ಬರುವ ಸಂಗತಿ ವಾದಕ್ಕಾಗಿ ಬರುವಂಥದು. ವಸಿಷ್ಠ ಉತ್ತರಿಸಲಿಲ್ಲವೆಂದ ಮಾತ್ರಕ್ಕೆ ಹರಿಶ್ಚಂದ್ರನನ್ನು ಹುಸಿಮಾಡುವಷ್ಟು ಅದು ಗಟ್ಟಿಯಾದದಲ್ಲ. ವಾದದಲ್ಲಿ ಬಂತೆಂದು ಕೈಯಲ್ಲಿಯ ಕಾವ್ಯ ಬಿಟ್ಟು ಪ್ರಾಚೀನ ಪುರಾಣಗಳನ್ನು ಯಾರೂ ಗಮನಿಸಬೇಕಾದ್ದೂ ಇಲ್ಲ. ಯಾವುದು ಗಟ್ಟಿ ಯಾವುದು ಸೊಟ್ಟೆಂದು ಕ್ರಿಯೆಗಳಿಂದ ತಿಳಿದೇ ತಿಳಿಯುತ್ತದೆ. ಇಷ್ಟಂತೂ ನಿಜ-ಹರಿಶ್ಚಂದ್ರ ಕಾವ್ಯದಲ್ಲಿ ಎಲ್ಲಿಯೂ ಇಂಥ ವಿಸಂಗತಿಗಳಿಲ್ಲ. ಹಾಗಿದ್ದಾಗ ವಿಶ್ವಾಮಿತ್ರನಂಥವನು ಹೇಳಿದ ಮಾತ್ರಕ್ಕೆ ಹರಿಶ್ಚಂದ್ರ ಯಾಕೆ ಹುಸಿಕನಾಗಬೇಕು? ಅಥವಾ ವಿಶ್ವಾಮಿತ್ರನಂಥ ಅತಿ ಹುಸಿವ ಯತಿ ಹೇಳಿದ್ದಾನೆಂದರೆ ಆ ಯತಿಯಲ್ಲಿ ಏನೋ ಐಬಿರಬೇಕು. ರಾಘವಾಂಕ ಹೀಗೆ ಭಾವಿಸಿಯೇ ಆ ಮಾತುಗಳನ್ನು ವಾದದಲ್ಲಿ ಬಳಸಿದ್ದಾನೆಂದು ತೋರುತ್ತದೆ. ಇಲ್ಲದಿದ್ದರೆ ಎಷ್ಟೆಲ್ಲಾ ವಾದ ಮಾಡಿಸುವವನು ಇದೊಂದು ಉತ್ತರ ಗೊತ್ತಿಲ್ಲದೆ ಇಡೀ ಪಾತ್ರವನ್ನೇ ಸಂಶಯದಲ್ಲಿ ಕೈಬಿಟ್ಟನೆಂದರೆ ಏನರ್ಥ?
ಇನ್ನು ವಿಶ್ವಾಸಮಿತ್ರನ ಕಾಟ ಸುರುವಾಯ್ತಲ್ಲ. ಬೇಟೆಗೆ ಬಂದಾಗ ಹರಿಶ್ಚಂದ್ರ ಹಂಪೆಯಲ್ಲಿದ್ದ ವಸಿಷ್ಠನ ಆಶ್ರಮಕ್ಕೆ ಬರುತ್ತಾನೆ. ತನಗೂ ವಿಶ್ವಾಮಿತ್ರನಿಗೂ ನಡೆದ ಪಂಥದ ವಿಷಯ ರಾಜನಿಗೆ ಗೊತ್ತಿಲ್ಲ. ಹಾಗೆಂದು ಹೇಳಬಾರದು, ಹೇಳದಿರಬಾರದು. ಹೇಳದ ಹಾಗೆ ಹೇಳುವೆನೆಂದು
ಎನ್ನನೊಲುವೊಡೆ ಕುಲಾಚಾರಮಂ ಬಿಡದಿರ್ಪ
ಡುನ್ನತ್ತಿಕೆ ಬೇಹಡುತ್ತಮ ಕೀರ್ತಿ ಕೆಡದಿಹಡೆ
ನನ್ನಿಯುಳಿವಡೆ ಮಗನೆ ಹೋಗದಿರು ಮರೆದು
ವಿಶ್ವಾಮಿತ್ರನಾಶ್ರಮಕ್ಕೆ
ಎಂದು ಹೇಳುತ್ತಾನೆ. ಸುದೈವದ ಸಂಗತಿಯೆಂದರೆ ಈ ಘಟನೆ ಇಡೀ ಕಾವ್ಯಕ್ಕೆ ಒಂದು ನಿರುದ್ದಿಶ್ಯ ಅಲಂಕರಣವಾಗುತ್ತದೆಯೇ ಹೊರತು ಪರಿಣಾಮ ಮಾಡುವುದಿಲ್ಲ. ಬಹಳವಾದರೆ ಇದರಿಂದ ವಸಿಷ್ಠನ ಶಿಷ್ಯಮೋಹ ಕಂಡೀತು. ರಾಜನ ಗುರುಭಕ್ತಿ ಕಂಡೀತು. ಇನ್ನೂ ಬಹಳವಾದರೆ ರಾಘವಾಂಕನ ಹಂಪೆಯ ಅಭಿಮಾನ ಕಂಡೀತು. ಹರಿಶ್ಚಂದ್ರನ ಸತ್ಯಕ್ಕೆ ಮಾತ್ರ ಒಂದಿಷ್ಟೂ ಹೆಚ್ಚು ಕಮ್ಮಿ ಮಾಡುವುದಿಲ್ಲ.
ಗುರು ಹೋಗಬೇಡವೆಂದು ಹೇಳಿದರೂ ವಿಧಿ ರಾಜನನ್ನು ವಿಶ್ವಾಮಿತ್ರನ ಆಶ್ರಮಕ್ಕೇ ಕೊಂಡೊಯ್ದಿತು. ಬೇಟೆಯ ದಣಿವು, ವಿಶ್ವಾಮಿತ್ರನ ಆಶ್ರಮಕ್ಕೆ ಬಂದು ಗುರುವಾಜ್ಞೆಗೆಟ್ಟದ್ದು, ದುಃಸ್ವಪ್ನ ಕಂಡದ್ದು- ಈ ಎಲ್ಲಾ ಕಳವಳದಲ್ಲಿದ್ದಾಗ ಮುನಿಯ ಹೊಲೆಯಿಂದ ಹುದುಟ್ಟಿದ್ದ ಗಾನ ರಾಣಿಯರು ಬಂದು ರಾಗರಸಲಹರಿಯಿಂದ ಆತನ ದುಗುಡ ಕಳೆದರು. ಬಹುಮಾನವಾಗಿ ಸರ್ವಾಭರಣ ಕೊಟ್ಟರೆ ತೃಪ್ತಿರಾಗಲಿಲ್ಲ. ಕೊನೆಗೆ ಮದುವೆಯಾಗೆಂದು ಗಂಟು ಬಿದ್ದರು. ಹೆಂಗಸರೆನ್ನದೆ ಅವರನ್ನು ಚಮ್ಮಟಿಗೆಯಿಂದ ಹೊಡೆದೋಡಿಸುತ್ತಾನೆ. ವಿಶ್ವಾಮಿತ್ರನಿಗಿದು ಗೊತ್ತಾಗಿ ಬಂದು ತನ್ನ ತಪೋವನಕ್ಕೆ ಬಂದುದರಿಂದ ಹಿಡಿದು ತನ್ನ ಮಕ್ಕಳನ್ನು ಹೊಡೆದೋಡಿಸಿದವರೆಗಿನ ರಾಜನ ತಪ್ಪುಗಳನ್ನು ಪಟ್ಟಿಮಾಡಿ ಕೊನೆಗೆ ಅವರನ್ನು ಮದುವೆಯಾದರೆ ಬಿಡುವುದಾಗಿ ಹೇಳುತ್ತಾನೆ. ಅದಕ್ಕೆ ಹರಿಶ್ಚಂದ್ರ ‘ಎಡೆಬಿಡದೆ ಬೇಡಿ ಕಾಡುವಿರಾದರೆ ಸರ್ವರಾಜ್ಯವನ್ನಾದರೂ ಕೊಟ್ಟೇನು. ಇದಕ್ಕೆ ಒಪ್ಪಲಾರೆ’ ಎನ್ನುತ್ತಾನೆ. ಇದು ವಾದದಲ್ಲಿ ಹೇಳಿದ ಮಾತೆಂದು ಯಾರಿಗಾದರೂ ತಿಳಿಯುತ್ತದೆ. ಆದರೆ ಮುನಿ ಸಿಕ್ಕುದರಿಂದಲೇ ಸೀಳಿ ಹಾಕುವ ಹೊಂಚಿನಲ್ಲಿದ್ದವನು, ‘ತಥಾಸ್ತು ಹಡೆದೆಂ ಹಡೆದೆನೆಂದು ಹೇಳಿ ‘ಸತ್ಯಾವತಂಸ’ ಎಂದು ರಾಜನನ್ನು ಹೊಗಳುತ್ತಾನೆ. ಇದು ಬಲಾತ್ಕಾರದ ದಾನವೆಂದು ರಾಜನಿಗೂ ಗೊತ್ತು. ಮಾತ್ರವಲ್ಲ ವಿಶ್ವಾಮಿತ್ರನ ಈ ವಿಗಡವಾದಕ್ಕೆ ಕ್ರಿಯೆಯಲ್ಲೇ ಉತ್ತರಿಸಬೇಕಾದ ಅಗತ್ಯವಿಲ್ಲ ವ್ಯಾಕರಣದ ಸಹಾಯದಿಂದ ಪ್ರತಿವಾದ ಹೂಡಬಹುದು. ವಾಕ್ಯಾರ್ಥಗಳನ್ನು ಗೆದ್ದ ರಾಘವಾಂಕ ಪಂಡಿತನಿಗೆ ವ್ಯಾಕರಣ ಕಲಿಸಿಕೊಡಬೇಕಾಗಿಲ್ಲ. ಆದರೂ ಹರಿಶ್ಚಂದ್ರನಿಗೆ ಈ ಬಗ್ಗೆ ಒಮ್ಮೆಯೂ ಕೆಡುಕೆನಿಸಲಿಲ್ಲ. ತಿಳಿದಾಡಿರಲಿ, ತಿಳಿಯದೇ ಆಡಿರಲಿ, ನಿಶ್ಚಿತಾರ್ಥ ಇರಲಿ, ಬಿಡಲಿ ಮಾತು ಮಾತೇ. ಆ ಮಾತಿಗೆ ಕಟ್ಟುಬಿದ್ದು, ಹರಿಶ್ಚಂದ್ರ ನೀರು ತರಿಸಿ ರಾಜ್ಯವನ್ನೇ ಧಾರೆಯರೆದು ಕೊಟ್ಟು ಬಿಡುತ್ತಾನೆ. ಹೀಗೆ ರಾಜ್ಯ ತಕ್ಕೊಳ್ಳಲಿಕ್ಕೆವಿಶ್ವಾಮಿತ್ರನಿಗೆ ಭಾಷೆಯ ಮಟ್ಟದಲ್ಲಿ ಕೂಡ ಸಮರ್ಥನೆ ಇಲ್ಲ ಎನ್ನುವುದನ್ನು ಮರೆಯಬಾರದು.
ಮುಂದೆ ಇಂಥ ಭಾಷೆಯ ಐಬನ್ನೇ ಮುಂದೆ ಮಾಡಿ ವಿಶ್ವಾಮಿತ್ರ ಹಿಂದೆ ತಾನು ತಕ್ಕೊಳ್ಳದಿದ್ದ ದಕ್ಷಿಣೆ ಕೇಳುತ್ತಾನೆ. ದಾನ ಮಾಡಿದ ಭಂಡಾರದಲ್ಲೇ ಬಂತಲ್ಲ ಎಂದು ರಾಜ ಹೇಳಿದರೆ ‘ದಾನ ಕೊಡುವಾಗ ದಕ್ಷಿಣೆಯ ಹಣವೂ ಅದರಲ್ಲಿದೆಯೆಂದು ಹೇಳಿದೆಯಾ?’ ಎನ್ನುತ್ತಾನೆ. ಅಂದರೇನು? ಆ ಮಾತು ಆಡಿದ್ದರೆ ಉಂಟು, ಆಡದ್ದರಿಂದ ಇಲ್ಲ- ಎಂಬಂಥ ಕುತರ್ಕವಿದು. ಆಗಲೇ ಕೊಡಹೋದಾಗ ನಿನ್ನಲ್ಲಿಯೇ ಇರಲಿ ಎಂದವನೂ ಇವನೇ. ಅದೇ ಹಣ ಭಂಡಾರದಲ್ಲಿದೆಯಲ್ಲವೇ? ರಾಜ ಈಗಲೂ ಮಾತಿನ ಐಬಿಗೆ ಕಟ್ಟು ಬಿದ್ದು ಅವಧಿಕೊಂಡು ಬರುತ್ತಾನೆ. ರಾಜ್ಯ ಬಿಟ್ಟು ಕಾಶಿ ರಾಜ್ಯ ಸೇರಿ ಹೆಂಡತಿ ಮಕ್ಕಳನ್ನು ಕೊನೆಗೂ ತನ್ನನ್ನೂ ಮಾರಿ ಕೊಟ್ಟ ಅವಧಿಗಿನ್ನೂ ಎರಡು ಗಳಿಗೆ ಇರುವಾಗಲೇ ದಕ್ಷಿಣೆಯ ಹಣ ಸಲ್ಲಿಸುತ್ತಾನೆ. ಇಲ್ಲಿಗೆ ಈ ಕಾವ್ಯ ಮುಗಿಯಬೇಕಿತ್ತು ಒಂದು ಲೆಕ್ಕಾಚಾರದ ಪ್ರಕಾರ. ಈವರೆಗೆ ನುಡಿಗೆ ಸುಳ್ಳುಬೀಳದವನು, ನುಡಿಯ ನಿಜಕ್ಕೆ ಕಟ್ಟುಬಿದ್ದವನು ಇನ್ನುಮೇಲೆ ನಡೆಯ ನಿಜ್ಕೆ ಕಟ್ಟುಬೀಳುತ್ತಾನೆ; ನಡೆಗೂ ಸುಳ್ಳು ಬೀಳದೆ ಗೆಲ್ಲುತ್ತಾನೆ. ಹೇಳಿದ್ದನ್ನು ಮಾಡುತ್ತೇನೆಂದು ಒಪ್ಪಕೊಂಡು ವೀರಬಾಹುವಿನ ಸೇವಕನಾಗಿ ಸುಡುಗಾಡ ಕಾಯುವ ಕರ್ತವ್ಯಕ್ಕೆ ಬದ್ಧನಾಗುತ್ತಾನೆ. ಇನ್ನೊಬ್ಬರ ಮನೆಯಲ್ಲಿದ್ದ ಮಗ ಸತ್ತು, ಸುಡಬೇಕೆಂದು ಚಂದ್ರಮತಿ ಹೆಣದೊಂದಿಗೆ ಬಂದರೆ ಕರ್ತವ್ಯದ ಮುಂದೆ ಹೆಂಡತಿ ಮಕ್ಕಳನ್ನು ನೋಡಲಾರದವನಾಗುತ್ತಾನೆ. ಹೆಣನ ತಲೆಯಕ್ಕಿ ನೆಲದೆದೆಯ ಹಾಗ, ಶವದುಡಿಗೆ ಕೊಡದಿದ್ದರೆ ಸುಡಬೇಡವೆಂದು ಹೆಂಡತಿಗೆ ಖಂಡಿತವಾಗಿ ಹೇಳಿಬಿಡುತ್ತಾನೆ. ಕೊನೆಗೆ ತನ್ನ ಹೆಂಡತಿಯನ್ನು ತಾನೇ ಕೊಲ್ಲಬೇಕಾಗಿ ಬಂದಾಗಲೂ ಹಿಂದೆಗೆಯದೆ ಪತಿಯಾಜ್ಞೆ ಉಳಿದರೆ ಸಾಕೆಂದು ಸತಿಯ ಮೇಲೆ ಕತ್ತಿಯಿಳಿಸುತ್ತಾನೆ. ಇಲ್ಲಿಗೆ ವಿಶ್ವಾಮಿತ್ರನ ಸೋಲು, ಹರಿಶ್ಚಂದ್ರನ ಗೆಲುವು ಪರಿಪೂಣ್ಣವಾಯಿತು. ಶಿವನ ಸಾಕ್ಷಾತ್ಕಾರವಾಗುತ್ತದೆ. ಇಷ್ಟೆಲ್ಲ ಕಾಡಿದರೂ ಹರಿಶ್ಚಂದ್ರ ವಿಶ್ವಾಮಿತ್ರನ ಬಗೆಗಿನ ಗೌರವ ಕಳೆದುಕೊಳ್ಳಲಿಲ್ಲ. ಅವನ ಬಗೆಗೆ ಹಗುರಾಗಿ ಎಂದೂ ಆಡಲಿಲ್ಲ. ಆಡಿಕೊಳ್ಳಲಿಲ್ಲ. ಎಂಥ ಕಷ್ಟದ ಕಾಲದಲ್ಲೂ ತನ್ನ ರಾಜಗಾಂಭೀರ್ಯ ಕಳೆದುಕೊಳ್ಳಲಿಲ್ಲ.
ಹೀಗೆಯೇ ವಿಶ್ವಾಮಿತ್ರನ ಪಾತ್ರ ಸೃಷ್ಟಿಯಲ್ಲೂ ಒಂದು ವಿಶೇಷವಿದೆ. ಈತ ಹರಿಶ್ಚಂದ್ರನಿಗೆ ಸರಿ ದೊರೆಯಾದ ಪ್ರತಿನಾಯಕ. ಅವನ ಮೌಲ್ಯಗಳನ್ನು ಎದುರು ನಿಂತು ಪ್ರಶ್ನಿಸುವವ; ಪರಿಕ್ಷಿಸುವವ. ಆತ ಹಾಗೆಯೇ ಮಾಡುವುದಕ್ಕೆ ಉದ್ದೇಶವೇನಿರಬಹುದೆಂಬ ಬಗ್ಗೆ ಅನೇಕರು ತರ್ಕಿಸಿದ್ದಾರೆ. “ಇದರಲ್ಲಿ ಅವನ ಉದ್ದೇಶವೂ ಒಳ್ಳೆಯದಾಗಿತ್ತೆಂದೂ ಅವನು ಲೋಕದ ಕಣ್ಣಿಗೆ ಕಡುಮುಳಿದರಂತೆ ತೋರಿಸಿ ಸತ್ಯಶುದ್ಧವಪ್ಪನ್ನೆಗಂ ಕಾಡಿ ನೋಡಿ ಕಡೆಯೊಳು ಹರಿಶ್ಚಂದ್ರರಾಯಂಗೆ ಗಣವೆರಸಿ ಮೃಡನನೆಳೆತಂದಿತ್ತು ಕೀರ್ತಿಯಂ ಮೂಜಗದ ಕಡೆಗೆ ಹರಹಿದನೆಂದೂ ಹೇಳಿರುವುದೇನೋ ನಿಜ. ಆದರೆ ಹರಿಶ್ಚಂದ್ರನ ಸತ್ಯ ಸೌಜನ್ಯಗಳನ್ನು ಮೆಚ್ಚಿ, ಅವನಿಗೂ ಅವನ ಮೂಲಕ ಲೋಕಕ್ಕೂ ಉಪಕಾರ ಮಾಡಬೇಕೆನ್ನುವ ಶುಭೋದ್ದೇಶ ಕೊನೆಯವರೆಗೂ ಎಲ್ಲಿಯೂ ಸೂಚಿತವಾಗುವುದಿಲ್ಲ; ಈ ಉದ್ದೇಶವೇ ಮೊದಲಿನಿಂದಲೂ ಇರುವ ಪಕ್ಷಕ್ಕೆ ವಸಿಷ್ಠರೊಡನೆ ಇದಕ್ಕಾಗಿ ಹೂಡಿದ ವ್ಯಾಜ್ಯವು ಬರಿಯ ನಟನೆಯಾಗಿ, ಪಾಠಕರ ದೃಷ್ಟಿಯಿಂದಲಾದರೂ ಹರಿಶ್ಚಂದ್ರನ ಪಕ್ಷದ ತೀಕ್ಷ್ಣತೆಯು ಕಡಮೆಯಾಗಿ, ಈ ಕಥೆಯ ಕರುಣ ರಸದ ಬಣ್ಣವು ಕುಂದುತ್ತದೆ. ಗ್ರಂಥದ ಆಧಾರದ ಮೇಲೆ ಹೇಳುವುದಾದರೆ ವಿಶ್ವಾಮಿತ್ರನ ಕ್ಷಾತ್ರಗುಣ, ವಸಿಷ್ಠನ ಮೇಲಣ ವೈರ, ಹಠ ಇವೇ ಆತನು ಹರಿಶ್ಚಂದ್ರನಿಗೆ ಕೊಟ್ಟ ಕಾಟಕ್ಕೆ ಕಾರಣವೆಂದು ತೋರುತ್ತದೆ. ‘ತೀದೊಡ್ಡೋಲಗದ ನಡುವೆ ತನ್ನಂ ಮೊದಲೊಳೋವಿ ನುಡಿಸದು ಕೋಪ ಒಂದು. ಆ ವಸಿಷ್ಠ ಮುನಿ ಯಾವುದಂ ಪೇಳ್ದಡದನಲ್ಲೆಂಬ ಭಾಷೆ ಎರಡು. ಅಖಿಲ ಜೀವಾವಳಿಯಲಿ ಭಾವಿಪಡೆ ಕುಂದನಲ್ಲದೇ ಲೇಸ ಕಾಣದಿಹ’ ಭಾವ ಮೂರು, ಇವಿಷ್ಟೂ ವಿಶ್ವಾಮಿತ್ರನಲ್ಲಿ ಮುಪ್ಪರಿಗೊಂಡು ಕುಡಿವರಿದು ಕಡುಕೋಪವರಿಸಿ, ವ್ಯಾಜ್ಯಕ್ಕೆ ಆರಂಭವಾಗಿ ವಸಿಷ್ಟನು ತನ್ನನ್ನು ‘ರಾಜಋಷಿಯೆಂದು ಕೆಟ್ಟಾಡಿತಕ್ಕಾ ಹರಿಶ್ಚಂದ್ರನನಸತ್ಯನಂ ಮಾಡಿಸುವೆ’ನೆಂದು ವಿಶ್ವಾಮಿತ್ರ ಪ್ರತಿಜ್ಞೆ ಮಾಡಿದನು.[4] ಈ ವಾದಕ್ಕೆ ಸಮರ್ಥನೆಯನ್ನು ಚರಿತ್ರೆಯಲ್ಲಿ ಹುಡುಕುತ್ತ ವಸಿಷ್ಠ ವಿಶ್ವಾಮಿತ್ರರಿಬ್ಬರೂ ರಾಜ ನಿರ್ಮಾಣಕರಾಗಿದ್ದು ಶಿಷ್ಯರಾಜರ ಮೂಲಕ ಇಬ್ಬರೂ ಒಮ್ಮೊಮ್ಮೆ ಪ್ರಬಲರಾಗಿದ್ದು, ಪರಸ್ಪರ ದ್ವೇಷಿಸುತ್ತಿದ್ದರೆಂದು ಆದ್ದರಿಂದಲೇ ಹುಟ್ಟು ಬ್ರಾಹ್ಮಣನಲ್ಲದ ರಾಜಸೂಯಯಾಗದಲ್ಲಿ ದಕ್ಷಿಣೆ ಸಿಗದೆ ತೇಜೋವಧೆಯಾದ ವಿಶ್ವಾಮಿತ್ರ, ವಸಿಷ್ಠನ ಶಿಷ್ಯ ಹರಿಶ್ಚಂದ್ರನಿಂದ ಸುಳ್ಳು ಹೇಳಿಸಬೇಕೆಂದು ಹಟತೊಟ್ಟಿದ್ದು ನೈಸರ್ಗಿಕವಾಗಿ ಕಾಣುತ್ತದೆ ಎಂದೂ ಹೇಳಿದ್ದಾರೆ. ಈ ಮಾತಿಗೆ ಹರಿಶ್ಚಂದ್ರ ಕಾವ್ಯದ ಮಟ್ಟಿಗೆ ಆಧಾರಗಳಿಲ್ಲ. ‘ಅನಿಮಿತ್ತವೈರ’ವೇ ಕಾರಣವಾಗಿ ವಿಶ್ವಾಮಿತ್ರ ಪ್ರತಿನಾಯಕನಾದನೆಂದು ತೋರುತ್ತದೆ. ಭಕ್ತಿ ಬಹಳ ವೈಯಕ್ತಿಕ ಮತ್ತು ಅತ್ಯಂತ ಖಾಸಗಿ ಭಾವವಾದ್ದರಿಂದ ಅಲ್ಲಿ ಬರುವ ಘರ್ಷಣೆ ತನ್ನೊಂದಿಗೆ, ಇಲ್ಲ ತನ್ನದೈವದೊಂದಿಗೆ ಉಂಟಾಗುತ್ತದೆ. ಹರಿಹರನಲ್ಲಿ ಪ್ರತಿ ನಾಯಕರಿಲ್ಲದ್ದಕ್ಕೆ ಇದು ಕಾರಣವಾಗಿದೆ. ಮೌಲ್ಯ ಸಾಮಾಜಿಕವಾದದ್ದು. ಸಮಾಜದಲ್ಲಿ ಆಚರಿಸುವಂಥಾದ್ದು. ಆದ್ದರಿಂದ ಅದನ್ನು ವಿರೋಧಿಸುವ, ಪ್ರಶ್ನಿಸುವ ಒತ್ತಾಯಗಳು ಅನಿವಾರ್ಯವಾಗುತ್ತವೆ. ಮತ್ತು ಹಾಗೇ ಪ್ರಶ್ನಿಸಲು ಸಾಮಾಜಿಕನಲ್ಲದ ಶಿವ ಬಂದು ಎದುರು ನಿಲ್ಲಲಾರ. ಸತ್ಯದಂಥ ಮೌಲ್ಯಕ್ಕೆ ಹುಸಿ ಎದುರಾಗಬೇಕು. ಅತಿ ಹುಸಿವ ಯತಿ ಹೊಲೆಯ ಎಂದು ವಿಶ್ವಾಮಿತ್ರನ ಬಗ್ಗೆ ರಾಘವಾಂಕ ಹೇಳುತ್ತಾನೆ. ಸತ್ಯದೆದುರು ನಿಲ್ಲಲಿಕ್ಕೆ ಹುಸಿಗೆ ಕಾರಣಗಳ ಅಗತ್ಯವೇ ಇಲ್ಲ; ತನ್ನಸಹಜ ಸ್ವಭಾವದಿಂದಲೇ ಎದುರಾಗುತ್ತದೆ. “ಅನಿಮಿತ್ತವೈರ” ಎಂದು ರಾಘವಾಂಕ ಹೇಳಿದ್ದು ಈ ಕಾರಣದಿಂದಾಗಿದೆ.
ವಿಶ್ವಾಮಿತ್ರನ ಕಾಟಕ್ಕೆ ಮೊದಲಿನಿಂದ ಕೊನೆಯ ತನಕೊಂದು ತರ್ಕವಿಲ್ಲ. ಹರಿಶ್ಚಂದ್ರನಲ್ಲಿ ದೌರ್ಬಲ್ಯಗಳು ಸಿಕ್ಕರೆ ಸರಿ, ಸಿಕ್ಕದಿದ್ದರೆ ಅದೇ ಒಂದು ನೆಪವಾಗುತ್ತದೆ. ಅದಕ್ಕಾಗಿ ಹೆಣ್ಣು, ರಾಜ್ಯ ಧನಕನಕ ಕೀರ್ತಿ- ಮುಂತಾದ ಎಲ್ಲಾ ಅಮಿಷಗಳನ್ನು ಒಡ್ಡುತ್ತಾನೆ. ಹರಿಶ್ಚಂದ್ರ ಈ ಯಾವುದರಿಂದಲೂ ವಿಚಲಿತನಾಗದಿದ್ದಾಗ ಅವನ ಮಾತಿನ ಒಂದು ಸಣ್ಣ ದೋಷವನ್ನೇ ಎತ್ತಿ ತನಗೆ ಬೇಕಾದಂತೆ ಅರ್ಥೈಸಿಕೊಂಡು ಉಪಯೋಗಿಸುತ್ತಾನೆ. ಇದು ದೋಷವಲ್ಲವೆಂಬುವುದು ವಿಶ್ವಾಮಿತ್ರನಿಗೆ ತಿಳಿಯದ ಸಂಗತಿಯೇನಲ್ಲ. ಕಾಡುವುದಕ್ಕೆ ನಿಶ್ಚಯಿಸಿದ ಮೇಲೆ ದೋಷವೇನು, ಈಷದ್ದೋಷವೇನು, ಕೊನೆಗೆ ಅದೋಷವೇನು? ಕೊನೆಗೆ ತಾನು ಸೋತಾಗ ಮೃಡನನೆಳ ತಂದಿತ್ತನೆಂಬ ಮಾತಿದೆ. ಅದು ಸಾಂಕೇತಿಕ ಅರ್ಥವಷ್ಟೇ. ಒಂದು ಮೌಲ್ಯ ತನ್ನೆದುರಿನ ಹುಸಿಗಳೊಂದಿಗೆ ಘರ್ಷಿಸಿ ಪರಿಶುದ್ಧಿಗೊಳ್ಳುತ್ತದೆ. ತನ್ನ ತಾನು ಸಂಸ್ಕರಿಸಿಕೊಳ್ಳುತ್ತದೆ. ಮತ್ತು ಅದರ ಪರಿಶುದ್ಧಿಗೆ ಹುಸಿಯೊಂದಿಗಿದ್ದ ಈ ಘರ್ಷಣೆ ಸಹಕಾರಿಯಾಗಿದೆಯೆಂಬುದಷ್ಟೇ ಅರ್ಥ. ಯಾಕೆಂದರೆ ಶಿವನ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂದು ಹರಿಶ್ಚಂದ್ರ ಕನಸು ಮನಸಿನಲ್ಲಿಯೂ ಧೇನಿಸಿದವನಲ್ಲ. ಆದರೂ ಅವನಿಗೆ ಲಭ್ಯವಾಯಿತಲ್ಲ. ಯಾಕೆ? ಸತ್ಯದಂಥ ಒಂದು ಮೌಲ್ಯ ಹರಿಶ್ಚಂದ್ರನ ಮೂಲಕ ತನ್ನ ಸಿದ್ಧಿಯನ್ನು ಪಡೆಯಿತು, ಧನ್ಯವಾಯಿತು. ತನಗೆ ತಕ್ಕುದಾದ ಬಹುಮಾನ ಪಡೆಯಿತು ಎಂಬುವುದಷ್ಟೇ ಅಲ್ಲಿಯ ಶಿವ ಸಾಕ್ಷಾತ್ಕಾರದಿಂದ ಸೂಚಿತವಾಗುವ ಅರ್ಥವಾಗಿದೆ. ಅಲ್ಲದೇ ರಾಘವಾಂಕ ಕೆಡುಕಿನ (Evil) ಬಗ್ಗೆ ಸಹಾನುಭೂತಿಯಿದ್ದವನು. ಬಿಲ್ಲೇಶ ಬೊಮ್ಮಯ್ಯನಂತ ಸುಳ್ಳಿನ ಬಗೆಗೂ (ಸಿದ್ಧರಾಮ ಚಾರಿತ್ರದಲ್ಲಿ) ಸಹಾನುಭೂತಿ ತೋರಿಸುತ್ತಾನೆ ವಿಶ್ವಾಮಿತ್ರನ ಬಗೆಗೂ ಅದೇ ಧೋರಣೆ ಇದ್ದರೆ ಆಶ್ಚರ್ಯವಿಲ್ಲ.
ಮೇಲಿನ ಎಲ್ಲ ಮಾತುಗಳನ್ನು ಗಮನಿಸಿದರೆ ನಾವು ಪ್ರಾರಂಭದಲ್ಲಿ ನೋಡಿದ ದಂಥಕಥೆ ‘ಅಂದಿನ ಯುಗಧರ್ಮದಲ್ಲಿ ಇಬ್ಬರು ಭಿನ್ನದೃಷ್ಟಿಯ ಮಹತ್ವದ ಕವಿಗಳ ಮನೋಧರ್ಮ ಹಾಗೂ ಕಾವ್ಯ ಧೋರಣೆಗಳ ಸಂಘರ್ಷಕ್ಕೆ ಒಂದು ಸಂಕೇತವಾಗಿದೆ’ ಎಂಬ ಮಾತು ನಿಜವೆನಿಸುತ್ತದೆ. ಕಥೆಯ ಉತ್ತರಾರ್ಧವಂತೂ ಕಥೆ ಕಟ್ಟಿದವರ ಕೇವಲ ಸದಿಚ್ಛೆಯಾಗಿದೆಯೆಷ್ಟೆ. ಗುರುಶಿಷ್ಯರ ಅದರಲ್ಲೂ ಮಾವ ಅಳಿಯಂದಿರ ಜಗಳ, ಇಬ್ಬರೂ ಘಟಾನುಘಟಿಗಳೇ ಆಗಿದ್ದಾಗ ಕೊನೆಬಾಳಿತೆಂದು ಊಹಿಸುವುದೂ ಕಷ್ಟವಾಗಿರಬೇಕು. ಅದಕ್ಕೇ ಆ ಕಥೆಗೊಂದು ಸುಖಾಂತ ರೂಪ ಅಂಟಿಸಿದ್ದಾರೆ. ಆದರೆ ನಿಜಸ್ಥಿತಿ ಮಾತ್ರ ಹಾಗಾಗಲಿಲ್ಲ. ರಾಘವಾಂಕ ತನ್ನ ಹಲ್ಲುಗಳನ್ನು ಮರಳಿ ಪಡೆದಿದ್ದೇ ನಿಜವಾಗಿದ್ದರೆ ನಂತರದ ಕಾವ್ಯಗಳನ್ನು ಹರಿಹರನ ಧೋರಣೆಯಲ್ಲಿ ಬರೆಯಬೇಕಿತ್ತು. ಆದರೆ ಹಾಗಾಗಲಿಲ್ಲ. ಕಾವ್ಯದ ಕೊನೆಗೆ ಇವನ ನಾಯಕರಾರೂ ಕೈಲಾಸಕ್ಕೆ ಹೋಗುವುದಿಲ್ಲ. ಆದಯ್ಯ ಪುಲಿಗೆರೆಯ ಸೋಮನಾಥನ ಬಲದ ಕಂಬದಲ್ಲಿ ಐಕ್ಯವಾಗುತ್ತಾನೆ. ಅಕ್ಕಪಕ್ಕದ ಮನೆಗಳಿಗೆ ಹೋಗುವಷ್ಟು ಸುಲಭವಾಗಿ ಕೈಲಾಸಕ್ಕೆ ಹೋಗಿ ಬರುತ್ತಿದ್ದ ಸಿದ್ಧರಾಮನಿಗೆ ಅಂತ್ಯಕಾಲಕ್ಕೆ ಕೈಲಾಸಕ್ಕೆ ಹೋಗಿ ವಾಸಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಆತ ತಾನು ಕಟ್ಟಿಸಿದ ಕೆರೆಯ ಮಧ್ಯದ ಮಂದಿರದಲ್ಲಿ ಸಮಾಧಿಸ್ಥನಾದನು. ಹರಿಶ್ಚಂದ್ರ ಸತಿಸುತರನ್ನು ಕೂಡಿಕೊಂಡು ಅಯೋಧ್ಯೆಯ ರಾಜ್ಯವನ್ನು ಮರಳಿ ಪಡೆದು ಸುಖವಾಗಿದ್ದನು. ರಾಘವಾಂಕನ ನಾಯಕರೆದುರಿಗೆ ಪ್ರತಿನಾಯಕರಿದ್ದಾರೆ. ಅದಯ್ಯನಿಗೆ ಪಾರಿಸಶೆಟ್ಟಿ, ಹರಿಶ್ಚಂದ್ರನಿಗೆ ವಿಶ್ವಾಮಿತ್ರ, ಬಿಲ್ಲೇಶ ಬೊಮ್ಮಯ್ಯನಂಥ ಕಳ್ಳಸುಳ್ಳನೂ ಇವನ ಕಾವ್ಯ ಪ್ರಪಂಚದಲ್ಲಿ ಸುಳಿದಾಡಿ ಸಹಾನುಭೂತಿ ಗಳಿಸುತ್ತಾರೆ. ಅಥವಾ ಈ ಇಬ್ಬರೂ ಕವಿಗಳ ಬಗ್ಗೆ ಹೀಗೆ ಹೇಳಬಹುದು; ಪಂಪನೊಬ್ಬನೇ ಲೌಕಿಕ ಮತ್ತು ಅಲೌಕಿಕಗಳನ್ನು ಬೆಳಗುವ ಎರಡು ಪ್ರತ್ಯೇಕ ಕಾವ್ಯ ಬರೆದರೆ- ಇಲ್ಲಿ ಗುರು ಹರಿಹರ ಅಲೌಕಿಕದ ಬಗೆಗೂ ರಾಘವಾಂಕ ಲೌಕಿಕದ ಬಗೆಗೆ ಕಾವ್ಯ ಬರೆದು ಬೆಳಗಿದರೆಂದು ಭಾವಿಸಬಹುದು.

(ಲೇಖಕರು: ಚಂದ್ರಶೇಖರ ಕಂಬಾರ, ಕೃತಿ: ದೇಶೀಯ ಚಿಂತನ) (ಕೃಪೆ: ಕಣಜ)


* * *